ನ್ಯಾಯಮೂರ್ತಿ ಹುದ್ದೆ ಆಕಾಂಕ್ಷಿಗಳ ಬಗ್ಗೆ ಕೊಲಿಜಿಯಂ ಗುಪ್ತಚರ ವಿಭಾಗದ ಅಭಿಪ್ರಾಯ ಪ್ರಕಟಿಸಿದ್ದು ಕಳವಳಕಾರಿ: ರಿಜಿಜು

Prasthutha|


ನವದೆಹಲಿ: ತಾನು ಶಿಫಾರಸು ಮಾಡಿದ ನ್ಯಾಯಮೂರ್ತಿ ಹುದ್ದೆ ಆಕಾಂಕ್ಷಿಗಳ ಬಗ್ಗೆ ಗುಪ್ತಚರ ದಳ (ಐಬಿ) ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗವು (ರಾ) ನೀಡಿದ್ದ ಅಭಿಪ್ರಾಯಗಳನ್ನು ಕೊಲಿಜಿಯಂ ಪ್ರಕಟಿಸಿರುವುದು ಕಳವಳಕಾರಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.


ಇ-ಕೋರ್ಟ್ಸ್ ಯೋಜನೆಯ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲು ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

- Advertisement -


“ರಾಷ್ಟ್ರಕ್ಕಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಯು ಮುಂದೊಂದು ದಿನ ತನ್ನ ರಾ ಮತ್ತು ಐಬಿ ಕಡತಗಳು ಸಾರ್ವಜನಿಕಗೊಳ್ಳಬಹುದು ಎಂದು ಯೋಚಿಸಬಹುದು. ಇದು ಕಳವಳಕಾರಿ ಸಂಗತಿ. ಇದೊಂದು ಗಂಭೀರ ವಿಚಾರವಾಗಿದ್ದು ಮುಂದೊಂದು ದಿನ ಇದರ ಬಗ್ಗೆ ಮಾತನಾಡುತ್ತೇನೆ” ಎಂದು ಅವರು ಹೇಳಿದರು.


ತಾನು ಶಿಫಾರಸ್ಸು ಮಾಡಿದ ನ್ಯಾಯಮೂರ್ತಿಗಳ ಹುದ್ದೆಯ ಕೆಲ ಆಕಾಂಕ್ಷಿಗಳನ್ನು ಸರ್ಕಾರ ಏಕೆ ವಿರೋಧಿಸುತ್ತಿದೆ ಎಂಬ ಬಗ್ಗೆ ಗುಪ್ತಚರ ದಳ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ ನೀಡಿದ ಕಾರಣಗಳನ್ನು ಒಳಗೊಂಡ ನಿರ್ಣಯವನ್ನು ಸುಪ್ರೀಂ ಕೋರ್ಟ್‌ ಜಾಲತಾಣದಲ್ಲಿ ಕೊಲಿಜಿಯಂ ಪ್ರಕಟಿಸಿತ್ತು. ಈ ನಿರ್ಣಯಗಳಲ್ಲಿ ಅದು ಸರ್ಕಾರದ ಕಾರಣಗಳಿಗೆ ವಿವರವಾದ ಪ್ರತಿಕ್ರಿಯೆ ನೀಡಿತ್ತು.


ಆದರೆ ಕೊಲಿಜಿಯಂ ನಿರ್ಣಯಗಳ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಿಜಿಜು, ಸುಪ್ರೀಂ ಕೋರ್ಟ್‌ ಇ ಸಮಿತಿಯ ಕಾರ್ಯಗಳನ್ನು ಶ್ಲಾಘಿಸಿದರು.


“ವಿಕಲಚೇತನರನ್ನು ಸಕ್ರಿಯಗೊಳಿಸುವ ಡಿಜಿಟಲ್‌ ಸಂಸ್ಥೆಗಳಿಗಾಗಿ ನೀಡುವ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟ್‌ ಇ ಸಮಿತಿ ಗೆ ನೀಡಲಾಗಿದೆ. ನಾನು ಸಿಜೆಐ ಡಿ ವೈ ಚಂದ್ರಚೂಡ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರ ನೇತೃತ್ವದಲ್ಲಿ ನಾವು ಅವರೊಂದಿಗೆ ಸಮನ್ವಯದಿಂದ ಎಲ್ಲವನ್ನೂ ಮಾಡಲು ಸಾಧ್ಯವಾಯಿತು. ಸಿಜೆಐ ಹುದ್ದೆಗೇರಿದ ಬಳಿಕವೂ ಸುಪ್ರೀಂ ಕೋರ್ಟ್‌ ಇ ಸಮಿತಿಯ ಮುಖ್ಯಸ್ಥರಾಗಿ ಮುಂದುವರೆಯುವಂತೆ ಅವರನ್ನು ಕೇಳಿಕೊಂಡಿದ್ದೆ. 3ನೇ ಹಂತವು ನಿರ್ಣಾಯಕ ಹಂತದಲ್ಲಿರುವುದರಿಂದ ಇದು ನನ್ನ ವಿಶೇಷ ವಿನಂತಿಯಾಗಿತ್ತು. ಅದಕ್ಕೆ ಅವರು ಸಮ್ಮತಿಸಿದರು” ಎಂದು ಹೇಳಿದರು.
(ಕೃಪೆ: ಬಾರ್&ಬೆಂಚ್)

- Advertisement -