26ರಂದು ಕದ್ರಿ ಪಾರ್ಕ್’ನಲ್ಲಿ ಫಲಪುಷ್ಪ ಪ್ರದರ್ಶನ: ಎಚ್.ಆರ್. ನಾಯಕ್

Prasthutha|

ಮಂಗಳೂರು: ತೋಟಗಾರಿಕೆ ಇಲಾಖೆ, ಕದ್ರಿ ಉದ್ಯಾನವನ ಸಮಿತಿ ಹಾಗೂ ಮಂಗಳೂರಿನ ಸಿರಿ ತೋಟಗಾರಿಕೆ ಸಂಘ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಇದೇ ಜ.26 ರಿಂದ 29ರವರೆಗೆ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯಕ್ ತಿಳಿಸಿದ್ದಾರೆ.

- Advertisement -


ಮಂಗಳವಾರ ನಗರದ ತೋಟಗಾರಿಕೆ ಇಲಾಖೆಯಲ್ಲಿರುವ ಅವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಜ.26ರ ಬೆಳಿಗ್ಗೆ 10 ಗಂಟೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡುವರು. ಜಿಲ್ಲೆಯ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ ಎಂದರು.

- Advertisement -


ತೋಟಗಾರಿಕೆ ಚಟುವಟಿಕೆಗಳು ಹಾಗೂ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ತೋಟಗಾರಿಕೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ ಸಾರ್ವಜನಿಕ ನೈರ್ಮಲ್ಯ, ಗ್ರಾಮ, ನಗರಗಳನ್ನು ಸುಂದರಗೊಳಿಸುವುದು, ಮೌಲ್ಯವರ್ಧನೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡಯುವ ಉದ್ದೇಶವನ್ನು ಈ ಮೂಲಕ ಹೊಂದಲಾಗಿದೆ ಎಂದವರು ಹೇಳಿದರು.

ಫಲಪುಷ್ಪ ಪ್ರದರ್ಶನದಲ್ಲಿರುವ ವಿಶೇಷತೆಗಳಿವು:
ಹೂವಿನಿಂದ ಅಲಂಕರಿಸಿದ “ಬಿಂದಿಗೆಯಿಂದ ನೀರು ಹರಿಯುವ ವಿನ್ಯಾಸದ ಮಾದರಿಯನ್ನು ಆಕರ್ಷಣಿಯವಾಗಿ ಅಲಂಕಾರಗೊಳಿಸಿ ಪ್ರದರ್ಶಿಸಲಾಗುವುದು.


ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯವಾದ ಸುಮಾರು 10,000 ದಷ್ಟು ಸೂರ್ಯಕಾಂತಿ (ಹಳದಿ, ಕೆಸರಿ) ಇತರೆ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ವಿವಿಧ ರೀತಿಯ ಗಿಡಗಳನ್ನು ಕುಂಡಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ತರಕಾರಿ ಕೆತ್ತನೆ, ವಿವಿಧ ಮಾದರಿಯ ಕಟ್ ಫ್ಲವರ್ ಜೋಡಣೆ ಮಾಡಿ ಪ್ರದರ್ಶನಕ್ಕೆ ಇಡಲಾಗುವುದು. ಕ್ಷೇತ್ರ/ನರ್ಸರಿಗಳಲ್ಲಿ ಬೆಳೆಸಿರುವ ವಿವಿಧ ಜಾತಿಯ ಗಿಡಗಳನ್ನು ಮತ್ತು ತರಕಾರಿ ಸಸಿಗಳ ಮಾರಾಟಕ್ಕೆ ಮಳಿಗೆಯನ್ನು ತೆರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.


ವಿವಿಧ ಜಾತಿಯ ತರಕಾರಿ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಲಾಗುವುದು. ತಾಲೂಕುಗಳಿಂದ ರೈತರು ಬೆಳೆಸಿರುವ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಸಾರ್ವಜನಿಕರು ಬೆಳೆದಿರುವ ಬೋನ್ಸಾಯಿ, ಅಂಥೋರಿಯಂ, ಆರ್ಕಿಡ್ ಗಿಡಗಳು ಇನ್ನಿತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು.
ಸರಕಾರಿ ಇಲಾಖೆಗಳಿಂದ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಆಧುನಿಕ ತಂತ್ರಜ್ಞಾನದ ಮಾಹಿತಿ ನೀಡಲು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು.


ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 125 ಮಳಿಗೆಗಳನ್ನು ತೆರೆಯಲಾಗಿದ್ದು, ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆಯಲಿದ್ದು, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹಾಗೂ ಉದ್ದಿಮೆದಾರರಿಂದ ಸಾರ್ವಜನಿಕರು ಖರೀದಿಸಲು ಹಾಗೂ ವೀಕ್ಷಿಸಲು ಅವಕಾಶವಿರುತ್ತದೆ.


ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ವಯಸ್ಕರಿಗೆ 20, ಮಕ್ಕಳಿಗೆ 10ರೂ.ಗಳನ್ನು ನಿಗದಿ ಪಡಿಸಲಾಗಿದೆ, ಎಲ್ಲಾ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದರು.

Join Whatsapp