ತುರ್ತು ಸಭೆ ಕರೆದು ಸರ್ಕಾರಕ್ಕೆ ಮಳೆ ಹಾನಿಯ ವಸ್ತುನಿಷ್ಠ ವರದಿ ಸಲ್ಲಿಸಿ: ಡಿಸಿಗೆ ರೇವಣ್ಣ ಒತ್ತಾಯ

Prasthutha|

ಹಾಸನ: ಜಿಲ್ಲೆಯಲ್ಲಿ ಆಗಿರುವ ಅತಿವೃಷ್ಟಿ ಹಾನಿ ಸಂಬಂಧ ಜಿಲ್ಲಾಧಿಕಾರಿ ಅವರು ಕೂಡಲೇ ಎಲ್ಲಾ ಶಾಸಕರು, ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಸರ್ಕಾರಕ್ಕೆ ವಸ್ತು ಸ್ಥಿತಿ ಮನವರಿಕೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.

- Advertisement -

ಇಂದು ನಗರದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈಗಾಗಲೇ ಜಿಲ್ಲೆಯ ಸುಮಾರು 450 ಕೋಟಿ ರೂ. ನಷ್ಟವಾಗಿದೆ ಎಂದು ಡಿಸಿ ಅವರೇ ಮಾಹಿತಿ ನಿಡಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಅಂದರೆ ಅಂದಾಜು 750-900 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದರು.

ಕಳೆದ 2 ತಿಂಗಳಿನಿಂದ ಸತತ ಮಳೆಯಾಗಿದ್ದು 30 ವರ್ಷದಲ್ಲೇ ಕಂಡರಿಯದ ರೀತಿಯ ಮಳೆಯಾಗಿದೆ. ಎರಡು ವರ್ಷ ಕೊರೊನಾದಿಂದ ತತ್ತರಿಸಿದ ರೈತರು, ಈಗ ಮಹಾ ಮಳೆಯಿಂದ ನಲುಗಿ ಹೋಗಿದ್ದಾರೆ.

- Advertisement -

ಕೃಷಿ, ತೋಟಗಾರಿಕೆ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ನಾಟಿ ಮಾಡಿದ್ದ ಭತ್ತದ ಸಸಿ ಸಂಪೂರ್ಣ ನೆಲ ಕಚ್ಚಿದ್ದು ರೈತರು ವಿಷ ಕುಡಿಯುವ ಸ್ಥಿತಿ ತಲುಪಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂಬಂಧ ಡಿಸಿ ಅವರನ್ನು ಖುದ್ದು ಭೇಟಿಯಾಗಿ ಎಲ್ಲವನ್ನೂ ವಿವರಿಸಿದ್ದೇನೆ. ಸರ್ಕಾರ ಈಗ 15 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಅದು ಯಾವುದಕ್ಕೂ ಸಾಲದು ಎಂದರು.

ಎಲ್ಲಾ ರೀತಿಯ ಶೇ.100 ರಷ್ಟು ಬೆಳೆಯಲ್ಲಿ ಶೇ. 75 ಭಾಗ ನಾಶವಾಗಿದೆ. ಕೊಟ್ಯಾಧಿಪತಿಗಳು ಎನಿಸಿಕೊಂಡಿದ್ದ ಕಾಫಿ ಬೆಳೆಗಾರರು ಈಗ ಆಲೂ ಬೆಳೆಗಾರರ ಸ್ಥಿತಿ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಅವರಿಗೆ ಮಾಹಿತಿ ನೀಡಿ, ಶಾಸಕರ ಸಭೆ ನಡೆಸಿ ಸರ್ಕಾರಕ್ಕೆ ವಸ್ತು ಸ್ಥಿತಿ ಕಳಿಸಬೇಕು ಎಂದು ಆಗ್ರಹಿಸಿದರು.

ಜೋರು ಮಳೆಯಿಂದಾಗಿ ಪೂರ್ಣ ಪ್ರಮಾಣದ ನಷ್ಟದ ರಿಪೋರ್ಟ್ ಕೊಡಲು ಆಗಿಲ್ಲ. ಹಾಲಿ ಸಿದ್ಧಪಡಿಸಿರುವ ವರದಿ ಮನೆಯಲ್ಲೇ ತಯಾರಾಗಿದೆ.

ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮನೆ ಕುಸಿದಿವೆ. ಅಧಿಕಾರಿಗಳು ನಿನಿರ್ಲಕ್ಷ್ಯ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ಅನೇಕ ಕಡೆ ಅಂಗನವಾಡಿ, ಶಾಲಾ ಕಟ್ಟಡ ಯಾವಾಗ ಬೇಕಾದ್ರೂ ಬೀಳಬಹುದು, ದುರಸ್ತಿಗಾಗಿ ಡಿಸಿ ಖಾತೆಗೆ ಕನಿಷ್ಠ 50 ಕೋಟಿ ಕೊಡಬೇಕು. ರಸ್ತೆ, ಕೆರೆ ಕಟ್ಟೆ ಹಾಳಾಗಿದ್ದು, ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಕೋಟಿ ನೀಡಬೇಕು. ಹಳ್ಳಿ ರಸ್ತೆ, ಅಂಗನವಾಡಿಗೆ ರಿಪೇರಿಗೆ ತಲಾ 5 ಕೋಟಿ ಕೊಡಬೇಕು ಎಂದು ಒತ್ತಾಯಿಸಿದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಫ್ ನಿಯಮಾವಳಿ ಬಿಟ್ಟು, ಸಂಕಷ್ಟದಲ್ಲಿರುವವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಅರಸೀಕೆರೆ ಶಾಸಕ ರಾಗಿಕಳ್ಳ ಎಂದಿರುವ ಬಿಜೆಪಿ ಎಂಎಲ್‌ಸಿ ರವಿ ಕುಮಾರ್‌ಗೆ ನಾಚಿಕೆಯಾಗಬೇಕು. ಕ್ಷೇತ್ರದಲ್ಲಿ 50 ವರ್ಷದಿಂದ ಯಾರೂ ಮಾಡದ ಕೆಲಸವನ್ನು 15 ವರ್ಷದಲ್ಲಿ ಶಿವಲಿಂಗೇಗೌಡ ಮಾಡಿದ್ದಾರೆ. ಅವರ ಅಭಿವೃದ್ಧಿಯ ಹೊಟ್ಟೆ ಉರಿ ಸಹಿಸಲಾಗದೆ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ರಾಗಿ ಮಾರಾಟ ಅಥವಾ ಖರೀದಿ ಹಣ ಶಾಸಕರ ಅಕೌಂಟ್‌ಗೆ ಬರುತ್ತದೆಯೇ ಎಂಬ ಕನಿಷ್ಠ ಜ್ಞಾನ ಹೋರಾಟ ಮಾಡುವವರಿಗೆ ಇಲ್ಲ. ಬಿಜೆಪಿ ಅವರಿಗೆ ಅಭಿವೃದ್ಧಿ ಬೇಕಿಲ್ಲ. ಪರ್ಸೆಂಟೇಜ್ ಹೊಡೆಯುವುದು ಅವರ ಉದ್ದೇಶ. ದೇವೇಗೌಡರ ಹೋರಾಟದಿಂದ ರಾಜ್ಯದಲ್ಲಿ ಎರಡು ಬಾರಿ ರಾಗಿ ಖರೀದಿಗೆ ಅವಕಾಶ ಸಿಕ್ಕಿತು. ಶಿವಲಿಂಗೇಗೌಡರು ಎಲ್ಲೂ ಹೋಗಲ್ಲ. ಜಿಲ್ಲೆ 6 ಮಂದಿ ಶಾಸಕರು ಒಟ್ಟಾಗಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದರು.

Join Whatsapp