ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ಹೇರಲು ಮುಂದಾದ ಮೋದಿ ಸರಕಾರ !

Prasthutha|

➤ ಜನರು ನೆರವಾಗಿ ಪ್ರಶ್ನಿಸುತ್ತಿರುವ ಡಿಜಿಟಲ್ ವೇದಿಕೆಗಳಿಗೆ ಬೆಚ್ಚಿತೇ ಕೇಂದ್ರ ?
➤ ಟಿವಿ, ಪತ್ರಿಕೆಗಳಿಗಿಂತಲೂ ಮೊದಲು ವೆಬ್ ಪೋರ್ಟಲ್, ಯೂಟ್ಯೂಬ್ ಚಾನೆಲ್ ಸಹಿತ ಸಾಮಾಜಿಕ ಜಾಲತಾಣಗಳ ಮೇಲೆ ಮೊದಲು ನಿಯಂತ್ರಣ ಹೇರಿ

ನವದೆಹಲಿ : ಮುಖ್ಯವಾಹಿನಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗಿಂತ ಮೊದಲು ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ಹೇರಿ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಸಲಹೆ ನೀಡಿದೆ. ವಿವಾದಿತ ಪತ್ರಕರ್ತ ಸುರೇಶ್ ಚಾವಂಕೆ ಅವರ ‘ಸುದರ್ಶನ್ ನ್ಯೂಸ್’ ಚಾನೆಲ್ ನ ‘ಯುಪಿಎಸ್ ಸಿ ಜಿಹಾದ್’ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
“ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಈಗಾಗಲೇ ಸಾಕಷ್ಟು ನೀತಿ ನಿಯಮಗಳಿವೆ. ಸುಪ್ರೀಂ ಕೋರ್ಟ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ನಿರ್ಧಾರ ಕೈಗೊಳ್ಳುವುದಾದರೆ, ತ್ವರಿತಗತಿಯಲ್ಲಿ ಮಾಹಿತಿ ಹರಡುವ ಡಿಜಿಟಲ್ ಮಾಧ್ಯಮಗಳಿಗೆ ಮೊದಲು ನಿರ್ಬಂಧ ವಿಧಿಸಬೇಕಾಗಿದೆ’’ ಎಂದು ಸರಕಾರ ತಿಳಿಸಿದೆ.
ವೆಬ್ ಆಧಾರಿತ ಸುದ್ದಿ ಪೋರ್ಟಲ್ ಗಳು, ಯೂಟ್ಯೂಬ್ ಚಾನೆಲ್ ಹಾಗೂ ಒಟಿಟಿ ವೇದಿಕೆಗಳು ವೈರಲ್ ಆಗುವುದಕ್ಕೆ ಸಾಕಷ್ಟು ಅವಕಾಶಗಳನ್ನು ಹೊಂದಿವೆ. ಮುಖ್ಯವಾಹಿನಿಯ ಮುದ್ರಣ ಮತ್ತು ಟಿವಿ ವಾಹಿನಿಗಳಂತೆಯೇ, ಡಿಜಿಟಲ್ ಮಾಧ್ಯಮಗಳು ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಮೂಲಕ ತಮ್ಮ ವೀಕ್ಷಕರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಳ್ಳುತ್ತಿವೆ. ಹೀಗಾಗಿ ಡಿಜಿಟಲ್ ಮಾಧ್ಯಮದಲ್ಲಿ ಲಿಖಿತ ಅಥವಾ ಪ್ರದರ್ಶನಗಳು ಗಂಭೀರ ಪರಿಣಾಮಗಳನ್ನು ಉಂಟು ಮಾಡುವ ಅವಕಾಶಗಳನ್ನು ಹೊಂದಿದೆ ಎಂದು ಸರಕಾರ ತಿಳಿಸಿದೆ.
“ಡಿಜಿಟಲ್ ಮಾಧ್ಯಮಗಳು ವೇಗವಾಗಿ ವಿಶ್ವದ ಮೂಲೆ ಮೂಲೆಗೂ ಮಾಹಿತಿ ತಲುಪಿಸುವ ಪ್ರಕ್ರಿಯೆಯಿಂದಾಗಿ ಉಂಟಾಗಿರುವ ಗಂಭೀರ ಪರಿಣಾಮಗಳನ್ನು ಪರಿಗಣಿಸಿ, ಆದ್ಯತೆ ಮೇರೆಗೆ ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ವಿಧಿಸಬಹುದು’’ ಎಂದು ಸರಕಾರ ಹೇಳಿದೆ.
ಫೇಸ್ ಬುಕ್, ಟ್ವಿಟರ್ ಸೇರಿದಂತೆ ವಿವಿಧ ಡಿಜಿಟಲ್ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ಇದೀಗ ಅದೇ ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಆಸಕ್ತಿ ತೋರುತ್ತಿರುವುದು ವಿಪರ್ಯಾಸ. ಕೆಲವೇ ವರ್ಷಗಳ ಹಿಂದೆ, ಡಿಜಿಟಲ್ ಮಾಧ್ಯಮಗಳ ಮೂಲಕವೇ ಸುಳ್ಳು ಸುದ್ದಿಗಳ ಮೂಲಕ ಜನಾಭಿಪ್ರಾಯವನ್ನು ತಮ್ಮ ಪರವಾಗಿಸಿಕೊಂಡಿದ್ದ ಆಡಳಿತಾರೂಢ ಬಿಜೆಪಿ ಸರಕಾರ, ಇದೀಗ ಅದೇ ಮಾಧ್ಯಮಗಳನ್ನು ದೇಶದ ಜನತೆ ಆಡಳಿತ ವಿರೋಧಿ ಅಲೆಗೆ ಬಳಸಿಕೊಳ್ಳುತ್ತಿರುವುದರಿಂದ ಬೆಚ್ಚಿ ಬಿದ್ದಿರುವಂತಿದೆ.
ಅಲ್ಲದೆ, ಮುಖ್ಯವಾಹಿನಿಯ ಟಿವಿ ಮತ್ತು ಮುದ್ರಣ ಮಾಧ್ಯಮಗಳು ಮತ್ತು ಅವುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರುಗಳು ಬಹುತೇಕ ಬಿಜೆಪಿ ಬೆಂಬಲಿತರ ಪಟ್ಟಿ ಸೇರಿರುವುದರಿಂದ, ಈಗ ಸಾಕಷ್ಟು ವೆಬ್ ವಾಹಿನಿಗಳು ಸರಕಾರವನ್ನು ಪ್ರಶ್ನಿಸುವ ಕಾರ್ಯದಲ್ಲಿ ನಿರತವಾಗಿವೆ. ಇದರಿಂದ ಜನ ಎಚ್ಚೆತ್ತುಕೊಂಡು, ಸರಕಾರದ ವೈಫಲ್ಯಗಳನ್ನು ಪ್ರಶ್ನಿಸುತ್ತಿರುವುದು ವ್ಯಾಪಕವಾಗಿ ಗಮನಕ್ಕೆ ಬರುತ್ತಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರ ಭಾಷಣಗಳ ವೀಡಿಯೊಗಳಿಗೆ ಯೂಟ್ಯೂಬ್ ನಲ್ಲಿ ವ್ಯಾಪಕ ಡಿಸ್ ಲೈಕ್ ಗಳು ವ್ಯಕ್ತವಾಗಿರುವುದು ಮತ್ತು ಇಂದು (ಸೆ.17) ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ನಿರುದ್ಯೋಗ ದಿನ’ವೆಂದು ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡಿಂಗ್ ಆಗಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸಂಗತಿ ಎಂಬುದು ಯಾರಿಗೂ ಅರ್ಥವಾಗದ ಸಂಗತಿಯೇನಲ್ಲ.

- Advertisement -