ಡ್ರಗ್ಸ್ ಮಾಫಿಯ | ಗಂಧದ ಗುಡಿಗೆ ಬೆಂಕಿ ಇಟ್ಟವರ್ಯಾರು?!

Prasthutha|

 -ಎನ್.ರವಿಕುಮಾರ್

- Advertisement -

ಕನ್ನಡ ಚಿತ್ರರಂಗಕ್ಕೆ ರಾಜಕೀಯ ಮತ್ತು ಉದ್ಯಮದ ನಂಟು ಮೊದಲಿನಿಂದಲೂ ಇದೆ. 35 ವರ್ಷಗಳ ಹಿಂದೆಯೇ ಶಂಕರ್ ನಾಗ್ ಎಂಬ ಕ್ರೀಯಾಶೀಲ ನಟ ನಿರ್ದೇಶಕ ಆಕ್ಸಿಡೆಂಟ್ ಎಂಬ ಸಿನಿಮಾ ಮೂಲಕವೇ ಡ್ರಗ್ಸ್ ಮತ್ತು ರಾಜಕಾರಣಿ ನಡುವಿನ ನಂಟನ್ನು ಅತ್ಯಂತ ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು ಎಂದು ಇಂದಿಗೂ ದಾಖಲಾದ ಈ ಚಿತ್ರಕ್ಕೆ 32ನೇ ರಾಷ್ಟ್ರೀಯ ಪ್ರಶಸ್ತಿಯೂ ದಕ್ಕಿತ್ತು.

ಮುಂಬೈನಲ್ಲಿ ಬಾಲಿವುಡ್ ನಟ ಸುಶಾಂತ್ ನ ಅನುಮಾನಾಸ್ಪದ ಸಾವಿನ ತನಿಖೆಯು ಡ್ರಗ್ಸ್ ನಂಟಿನ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಕರ್ನಾಟಕದ ಸ್ಯಾಂಡಲ್ ವುಡ್ ಕೂಡ ಡ್ರಗ್ಸ್ ಉರಿಯ ಕೆನ್ನಾಲಿಗೆಗೆ ಸಿಕ್ಕು ಉರಿಯತೊಡಗಿದೆ. ಕೆಜೆ ಹಳ್ಳಿ, ಡಿಜೆ ಹಳ್ಳಿಯ ದಾಂಧಲೆಯಲ್ಲಿ ಆರೋಪಿಗಳು ಗಾಂಜಾ ಅಮಲಿನಲ್ಲಿ ಸಕ್ರಿಯರಾಗಿದ್ದರು ಎಂಬ ಆಘಾತಕಾರಿ ಸಂಗತಿ ಹೊರಬೀಳುತ್ತಿದ್ದಂತೆ, ಒಂದು ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹಣಿಯುವ ಮತ್ತದೇ ರಾಜಕೀಯ

- Advertisement -

ನಿರ್ಲಜ್ಜತನ ನಡೆದಿರುವಾಗ ಕನ್ನಡ ಚಿತ್ರರಂಗದಲ್ಲೂ ಗಾಂಜಾ, ಅಫೀಮು, ಕೊಕೈನ್ನಂತಹ ಡ್ರಗ್ಸ್ ದಂಧೆಗಳಿಂದ, ಶೋಕಿಗಳಿಂದ ಮುಕ್ತವಾಗಿಲ್ಲ ಎಂಬ ಕೂಗು ಸ್ಫೋಟಗೊಂಡಿತು(?) ಇದರ ಪರಿಣಾಮ ದಂಧೆಯ ಬ್ರೋಕರ್ ಗಳೆನೆಸಿಕೊಂಡವರ ಜೊತೆ ಕನ್ನಡ ಚಿತ್ರರಂಗದ ಖ್ಯಾತ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಜೈಲು ಸೇರುವಂತಾಗಿದೆ.

 ರಾಜ್ಯದಲ್ಲಿ ಡ್ರಗ್ ದಂಧೆ ಹೊಸತೇನಲ್ಲ. ಆದರೆ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಸದ್ದು ಮಾಡಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇಂದು ಗಾಂಜಾ ಸೇರಿದಂತೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಖಂಡದಿಂದ ಗಡಿ ದಾಟಿ ಬರುವ ದುಬಾರಿ ಮತ್ತಿನ ಸರಕುಗಳು ಸಲೀಸಾಗಿ ಕೈಗೆ ಸಿಗುತ್ತಿವೆ. ರಾಜ್ಯದೊಳಗೆ ಬೆಳೆಯುವ ಗಾಂಜಾ ಒಂದಡೆಯಾದರೆ ಸಿಂಥೆಟಿಕ್ ಫಾರ್ಮೂಲಾಗಳ ರಾಸಾಯನಿಕಗಳು  ಮತ್ತಿನ ಸರಕಾಗಿ ಯುವ ಸಮುದಾಯವನ್ನು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಆಘಾತಕಾರಿ ಸಂಗತಿ. ಯಾವ ಸರಕಾರವು ಕೂಡಾ ಗಾಂಜಾದಂತಹ ಮಾದಕ ವಸ್ತುಗಳ ದಂಧೆಯ, ಮತ್ತು ಅವುಗಳ ಸೇವನೆಯ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಲಿಲ್ಲ ಎಂಬುದು ಹಗಲಿನಷ್ಟೆ ಸತ್ಯ.

 ಬೆಂಗಳೂರು ನಗರದ 107 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಕಳೆದ ಮೂರು ವರ್ಷಗಳಲ್ಲಿ 30 ಕೋ.ರೂ.ಗಳ ಮೌಲ್ಯದ 15.778 ಕೆ.ಜಿ ಗಾಂಜಾ, ಅಫೀಮು, ಚರಸ್ ನಂತಹ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ವತಃ ಗೃಹಸಚಿವ ಬಸವರಾಜು ಬೊಮ್ಮಾಯಿ ಅವರು ನೀಡಿರುವ ಹೇಳಿಕೆ ಬೆಂಗಳೂರು ಅದೆಷ್ಟರ ಮಟ್ಟಿಗೆ ಡ್ರಗ್ಸ್ ಜಾಲದಲ್ಲಿ ಸಿಲುಕಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಇಡೀ ರಾಜ್ಯದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಉದ್ಯೋಗ, ಶಿಕ್ಷಣಕ್ಕಾಗಿ ಬರುತ್ತಿರುವ ವಿದೇಶಿಗರು ಜೊತೆಯಲ್ಲಿ ಡ್ರಗ್ಸ್ ನಂತಹ ಮಾರಕ ಮಾದಕ ವಸ್ತುಗಳನ್ನು ತರುತ್ತಿದ್ದಾರೆ. ಬೆಂಗಳೂರಿನ ಹೆಣ್ಣೂರು ಕ್ರಾಸ್, ಬಾಣಸವಾಡಿ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿಯಂತಹ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ನೈಜೀರಿಯಾ, ಶ್ರೀಲಂಕಾ, ಮಲೇಷಿಯಾ, ಆಫ್ರಿಕಾ ಮೂಲದ ವಿದ್ಯಾರ್ಥಿಗಳು, ಟೆಕ್ಕಿಗಳು ಬೆಂಗಳೂರಿಗೆ ಡ್ರಗ್ಸ್ ನ ಅಮಲು ತುಂಬಿ ಯಾವುದೋ ಕಾಲವಾಗಿದೆ. ಚಿತ್ರರಂಗಕ್ಕಿಂತ ದುಪ್ಪಟ್ಟು ಡ್ರಗ್ಸ್ ವಹಿವಾಟು ಟೆಕ್ಕಿಗಳ ಸಮೂಹದಲ್ಲಿ ನಡೆಯುತ್ತಿದೆ.

 ಡ್ರಗ್ಸ್ ದಂಧೆ ಮತ್ತು ವ್ಯಸನಕ್ಕೆ ಬಿದ್ದವರಲ್ಲಿ ಕೇವಲ ಚಿತ್ರರಂಗದ ನಟ, ನಟಿಯರು ಮಾತ್ರವಲ್ಲ. ಕರ್ನಾಟಕದ ಡ್ರಗ್ಸ್ ಮಾಫಿಯಾ ರಾಜಕೀಯ, ಉದ್ಯಮ ಮತ್ತು ಪೊಲೀಸ್ ಈ ಮೂರು ರಂಗಗಳೂ ತಲತಲಾಂತರಗಳಿಂದ ಮುನ್ನಡೆಸಿಕೊಂಡು ಬಂದಿದೆ. ಅಸಲಿ ದಂಧೆಕೋರರು, ವ್ಯಸನಿಗಳೂ ಆಗಿರುವ ರಾಜಕಾರಣಿಗಳ, ಉದ್ಯಮಪತಿಗಳ, ಪೊಲೀಸರ ಮಕ್ಕಳು ಮತ್ತು ಬಂಧುಗಳನ್ನು ಇಂದು ಡ್ರಗ್ಸ್ ರಾಕೆಟ್ ನಿಂದ ಬಚಾವ್ ಮಾಡಲು ಕನ್ನಡ ಚಿತ್ರರಂಗವನ್ನು ಬಲಿಪೀಠಕ್ಕೆ ಒಡ್ಡಲಾಗಿದೆ. ಅಸಲಿ ಕಹಾನಿ ಏನೆಂದರೆ ಕನ್ನಡ ಚಿತ್ರರಂಗದ ಯಾವೊಬ್ಬ ನಾಯಕನೂ, ಸ್ಟಾರ್ ಕೂಡ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳ ಕಡೆಗೆ ಕೈ ತೋರಿಸಲಾರದಷ್ಟು ಹೇಡಿತನ ಹೊತ್ತು ತಿರುಗುತ್ತಿದ್ದಾರೆ.

 ‘ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ’ ಎನ್ನುವಂತಾಗಿದೆ ಸಿನಿಮಾ ರಂಗದ ಕತೆ. ನಿರೀಕ್ಷಿತವೋ, ಅನಿರೀಕ್ಷಿತವೋ ಚಂದನವನಕ್ಕೆ ಕೆಟ್ಟ ಹೆಸರು ಬಂದೇ ಬಿಟ್ಟಿತು. ಈಗ ಸ್ಟಾರ್ ನಟಿಯರ ಬಂಧನವಾಗಿದೆ. ಇನ್ನು ಯಾರೆಲ್ಲ ಇದ್ದಾರೋ, ಅವರೆಲ್ಲ ಯಾವಾಗ, ಎಲ್ಲಿ, ಹೇಗೆ ಬಂಧನವಾಗುತ್ತಾರೋ, ಪ್ರಕರಣ ಥ್ರಿಲ್ಲರ್ ಸಿನಿಮಾದಷ್ಟೇ ರೋಚಕವಾಗಿದೆ. ಆದರೆ ರಾಜ್ಯದ ಜನ ಮಾತ್ರ ಇದೆಲ್ಲವನ್ನು ಒಂದು ರೀತಿ ಬೇಸರದಿಂದಲೇ ನೋಡುತ್ತಿದ್ದಾರೆ. ಇವತ್ತಿನ ಚಿತ್ರರಂಗ ಹೀಗೆಲ್ಲ ಇದೀಯಾ ಎನ್ನುವುದು ಅವರ ನೋವು, ಸಂಕಟ. ಆ ಮಟ್ಟಿಗೆ ಕನ್ನಡದ ಚಿತ್ರರಂಗದ ಈ ಹೊತ್ತಿನ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ.

 ಕೊರೋನಾದಿಂದ ಚಿತ್ರರಂಗವೇ ಸ್ಥಗಿತವಾಗಿ, ಉದ್ಯಮ ಸಂಕಷ್ಟದಲ್ಲಿರುವಾಗ ಕೆಲವರ ತೆವಲುಗಳಿಂದ ಚಿತ್ರರಂಗದ ಇದ್ದಬದ್ದ ಮಾನ ಬೀದಿಗೆ ಬಿದ್ದಿದೆ. ಅಡಿಕೆಗೆ  ಹೋದ ಮಾನ ಆನೆ ಕೊಟ್ಟರು ಬಾರದು ಎನ್ನುವಂತಾಗಿದೆ. ಆರಂಭದಿಂದಲೂ ಚಿತ್ರರಂಗ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಯಾಗಿ ಕಾಪಾಡಿಕೊಂಡು ಬಂದಿದ್ದ ಮಾನ, ಮಾರ್ಯಾದೆ ಈಗ ಡ್ರಗ್ಸ್ ಮಾಫಿಯಾ ರೂಪದಲ್ಲಿ ಕೊಚ್ಚಿ ಹೋಗುತ್ತಿದೆ. ಸಿನಿಮಾ ಚಟುವಟಿಕೆಯ ಆಚೆ ಕೆಲವರ ಶೋಕಿ ತೆವಲುಗಳಿಗೆ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಬಂದಿದೆ. ಹಾಗಾದರೆ ಯಾರು ಇವರೆಲ್ಲ? ಇದೆಲ್ಲಾ ಹೇಗೆ ಶುರುವಾಯ್ತು? ಉತ್ತರ ‘ಉತ್ತರ’ದಲ್ಲಿದೆ. ಕಲೆಗೆ ಭಾಷೆ, ಪ್ರದೇಶದ ಗಡಿಗಳೇ ಇಲ್ಲದಿದ್ದರೂ, ಮನುಷ್ಯನ ಸ್ವಭಾವಗಳಲ್ಲಿರುವ ವ್ಯತ್ಯಾಸಗಳು ಒಂದು ಉದ್ಯಮ ಅಥವಾ ಪ್ರಾದೇಶಿಕ ನೆಲಯ ಶಿಷ್ಟ ಸಂಸ್ಕೃತಿಗೂ ಧಕ್ಕೆ ತರಬಹುದೆನ್ನುವುದಕ್ಕೆ ಡ್ರಗ್ಸ್ ಮಾಫಿಯಾ ಸಾಕ್ಷಿ ಆಗುತ್ತದೆ.

 ಸದ್ಯಕ್ಕೆ ಡ್ರಗ್ಸ್ ಮಾಫಿಯಾದಲ್ಲೀಗ ಸುದ್ದಿಯಲ್ಲಿರುವವರ ಹಿನ್ನೆಲೆಯನ್ನೇ ನೋಡಿ. ಸ್ಯಾಂಡಲ್ ವುಡ್ ನಲ್ಲೀಗ ಚಾಲ್ತಿಯಲ್ಲಿರುವ ಮುಖ್ಯವಾಹಿನಿ ನಟನಟಿಯರ ಹೆಸರುಗಳ್ಯಾವೂ ಇಲ್ಲಿ ಕಾಣಿಸಿಕೊಂಡಿಲ್ಲ. ಬದಲಿಗೆ ಅಷ್ಟೋ ಇಷ್ಟೋ ಸಿನಿಮಾ ಮಾಡಿ ತಮ್ಮ ಬೋಲ್ಡ್ ಲುಕ್ ನಿಂದಲೇ ಸುದ್ದಿಯಲ್ಲಿದ್ದ ರಾಗಿಣಿ, ಸಂಜನಾ ಇತ್ಯಾದಿ. ಇವರು ಮೂಲ ಕನ್ನಡದವರಾ?  ಇವರಿಗೆ ಇಲ್ಲಿನ ನೆಲ, ಜಲ, ಭಾಷೆಯ ಹಿನ್ನೆಲೆ ಗೊತ್ತಾ? ಕನ್ನಡ ಚಿತ್ರರಂಗ ಬೆಳೆದು ಬಂದ ಬಗೆ ಗೊತ್ತಾ? ಕನ್ನಡ ಸಿನಿಮಾ ಚರಿತ್ರೆ ಓದಿದ್ದಾರಾ? ಊಹೂಂ.. ಅವರಿಗೆ ಇದ್ಯಾವುದು ಗೊತ್ತಿಲ್ಲ. ಯಾಕಂದ್ರೆ ಅವರು ಮೂಲತಃ ಇಲ್ಲಿಯವರಲ್ಲ. ಅವರಿಗೂ ಇಲ್ಲಿನ ಆಚಾರ, ವಿಚಾರಕ್ಕೂ ನಂಟೇ ಇಲ್ಲ. ಬೇಕಾದರೆ ನೋಡಿ, ಸಿನಿಮಾಗಳಲ್ಲಿ ತುಂಡುಡುಗೆ ತೊಡಲು ಕನ್ನಡದ ನಟಿಯರು ಮುಜುಗರಪಟ್ಟರೆ, ಅವರೆಲ್ಲ ಮುಲಾಜಿಲ್ಲದೆ ಇದ್ದ ಬದ್ದ ಬಟ್ಟೆ ಬಿಚ್ಚಿ ತುಂಡುಡುಗೆಯಲ್ಲಿ ನಿಲ್ಲುತ್ತಾರೆ. ಅದಕ್ಕೆ ಬೋಲ್ಡ್ ನಟಿ ಅಂತ ತೇಪೆ ಹಚ್ಚಿಕೊಳ್ಳುತ್ತಾರೆ. ಅವರ ಅದೇ ಆಟಿಟ್ಯೂಡ್ ನಿತ್ಯದ ಬದುಕಿನಲ್ಲೂ ಬಂದಿದ್ದರ ಪರಿಣಾಮವೇ ಇವತ್ತು ಅವರೆಲ್ಲ ಸಿನಿಮಾ ಚಟುವಟಿಕೆಗಳ ಆಚೆಯೂ ರಾತ್ರಿ ಪಾರ್ಟಿಗಳ ಸುತ್ತಾಟದಲ್ಲಿ ಡ್ರಗ್ಸ್ ಮಾಫಿಯಾದ ಆರೋಪ ಹೊರಬೇಕಿದೆ. ಅದರಿಂದ ಬಂಧನಕ್ಕೂ ಒಳಗಾಗಬೇಕಿದೆ. ಅವರಿಗೇನು ಬಿಡಿ ಅವರೆಲ್ಲ ಬೋಲ್ಡ್ ಹುಡುಗಿಯರು, ಯಾವುದೇ ಪಾತ್ರಕ್ಕೂ ಬಣ್ಣ ಹಚ್ಚಲು ರೆಡಿ ಎನ್ನುವ ಡೆಡಿಕೇಟೆಡ್ ಕಲಾವಿದರು. ಆದರೆ ಅವರಿಂದಾಗಿಯೇ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದರೆ?

 ಅಷ್ಟೇ ಅಲ್ಲ, ಇದರಲ್ಲಿ ಸಿನಿಮಾ ಮಂದಿಯ ಪಾಲು ಕೂಡ ಇದೆ. ಇವತ್ತು ಕನ್ನಡ ಚಿತ್ರರಂಗಕ್ಕೆ ಕೆಲವರಿಂದ ಕೆಟ್ಟ ಹೆಸರು ಬರುತ್ತಿದೆ ಅಂತ ಮಾತನಾಡುತ್ತಿರುವವರು ಒಂದಷ್ಟು ಯೋಚಿಸಬೇಕಿದೆ. ತಾವು ಮಾಡುವ ಸಿನಿಮಾಗಳಲ್ಲಿನ ಕೆಲ ಪಾತ್ರಗಳಿಗೆ ಬೋಲ್ಡ್ ನಟಿಯರೇ ಬೇಕೆಂದು ಉತ್ತರಕ್ಕೆ ಮುಖ ಮಾಡಿದ್ದರ ಫಲವಿದು. ಇಲ್ಲಿ ತನಕ ಚಿತ್ರರಂಗಕ್ಕೆ ಅಷ್ಟೋ… ಇಷ್ಟೋ ಕೆಟ್ಟ ಹೆಸರು ಬಂದಿದ್ದರೆ, ಅದು ಆ ಕಡೆಯಿಂದ ಬಂದ ನಟಿಮಣಿಯರಿಂದಲೇ. ಅದು ಅವರ ಮೇಲೆ ದ್ವೇಷಕ್ಕೆ, ಉತ್ತರ ಎನ್ನುವ ತಾರಾತಮ್ಯಕ್ಕೆ ಈ ಮಾತು ಹೇಳುತ್ತಿಲ್ಲ, ಅಲ್ಲಿಂದ ಬರುವವರ ಸ್ವಭಾವವೇ ಹಾಗೆ. ಇಲ್ಲಿನ ನಟಿಯರಿಗೂ, ಅಲ್ಲಿನವರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅವರೆಲ್ಲ ಯಾವುದೇ ಪಾತ್ರ ಕೊಟ್ಟರೂ ಸರಿ ಎನ್ನುವ ಒಪ್ಪಂದದಿಂದಲೇ ಇಲ್ಲಿಗೆ ಹೆಜ್ಜೆ ಇಡುತ್ತಾರೆ. ಆ ಮೇಲೆ ಭಾಷೆ ಕಲಿತು ಇಲ್ಲಿಯವರೇ ಆಗಿ, ತಮ್ಮಂತೆಯೇ ಬದುಕುತ್ತಾರೆ. ಅದರಲ್ಲಿಯೇ ಆದ ದೋಷ ಇದು. ಹಾಗಂತ ಇದೊಂದೇ ಇವತ್ತಿನ ಡ್ರಗ್ಸ್ ಮಾಫಿಯಾಕ್ಕೆ ಕಾರಣ ಅಂತಲ್ಲ, ಇದರಲ್ಲಿ ಹಲವು ಆಯಾಮಗಳಿವೆ. ಈ ‘ಬೋಲ್ಡ್’ನಟಿಯರನ್ನೆ ಬಳಸಿಕೊಂಡ ದೊಡ್ಡ ಜಾಲವಿದೆ. ಸಿನಿಮಾದವರ ಜತೆಗೆ ರಾಜಕಾರಣಿಗಳ ಮಕ್ಕಳ ಸಹವಾಸವಿದೆ. ಅವರ ಶೋಕಿ ಬದುಕಿನ ತೆವಲುಗಳು ಇದೆಲ್ಲವನ್ನು ಮಾಡಿಸಿದೆ. ಅದರಲ್ಲಿ ಇದು ಕೂಡ ಒಂದು ಸಣ್ಣ ಪಾಲು.

 ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಕ್ಕೆ ತಳುಕು ಹಾಕಿಕೊಂಡಿರುವುದು ಇದೇ ಮೊದಲಲ್ಲ. ಚಿತ್ರರಂಗಕ್ಕೆ ಇರುವಷ್ಟೇ ಅದಕ್ಕೂ  ದೊಡ್ಡ ಇತಿಹಾಸ ಇದೆ. ರಾತ್ರೋರಾತ್ರಿ ಮೋಜು, ಮಸ್ತಿ ಪಾರ್ಟಿಗಳು ಯಾವಾಗ ಶುರುವಾದವೋ ಆಗಿನಿಂದಲೂ ಇಲ್ಲಿ ಗಾಂಜಾ ಸೇರಿದಂತೆ ದುಬಾರಿ ಡ್ರಗ್ಸ್ ಬಳಕೆ ಇದ್ದೇ ಇತ್ತು. ಆದರೆ ಆಗೆಲ್ಲ ಅದು ಬಹಿರಂಗಕ್ಕೆ ಬಂದಿರಲಿಲ್ಲ. ಬಂದಿದ್ದರೂ ಅವುಗಳನ್ನು ಮುಚ್ಚಿ ಹಾಕಲಾಗಿತ್ತು. ರಾತ್ರೋರಾತ್ರಿ ನಡೆದ ಸ್ಟಾರ್ ನಟರ ಮಕ್ಕಳ ರಸ್ತೆ ಅಪಘಾತ ಪ್ರಕರಣದಲ್ಲಿ ಡೈನಾಮಿಕ್ ಸ್ಟಾರ್ ಒಬ್ಬರ ಪುತ್ರ ಕೂಡ ಇದ್ದಿದ್ದು ಬಹಿರಂಗ ಆಗಿತ್ತು. ಅದರ ಜೊತೆಗೆಯೇ ರಾಜಕಾರಣಿಗಳ ಮಕ್ಕಳು ಈ ದಂಧೆಯಲ್ಲಿ ಬೆತ್ತಲಾಗಿದ್ದಾರೆ. ಆದರೆ ಈಗ ನಟಿಮಣಿಯರ ಹೆಸರಲ್ಲಿ ಡ್ರಗ್ಸ್ ದಂಧೆಯ ಜಾಲ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದರ ಹಿಂದೆ ಮಾಧ್ಯಮಗಳ ಟಿಆರ್ಪಿಯ ಬಕಾಸುರನ ಹಸಿವೇ ಹೆಚ್ಚಾಗಿದೆ. ಸಾಮಾಜಿಕ ಹೊಣೆಗಾರಿಕೆ ಸತ್ತು ನಾರುತ್ತಿದೆ.

 ಕನ್ನಡ ಚಿತ್ರರಂಗ ತುಳಸಿಯಷ್ಟೆ ಪವಿತ್ರವಾಗಿದೆ ಎಂದು ನಟಿ ಕಂ ರಾಜಕಾರಣಿ ತಾರಾ ಹೇಳಿದ್ದಾರೆ. ಅಷ್ಟಕ್ಕೂ ಚಿತ್ರರಂಗ ತುಳಸಿಯಷ್ಟೆ ಪವಿತ್ರವಾಗಿ ಉಳಿದಿದ್ದಾದರೂ ಯಾವಾಗ ಎಂದು ತಾರಾ ಅವರೇ ವಿವರಿಸಬೇಕು. ಇಂದು ಚಿತ್ರರಂಗ ರಾಜಕಾರಣಿಗಳ, ಉದ್ಯಮಿಗಳ, ಕಾರ್ಪೋರೇಟ್ ಕುಳಗಳ ಸುಖದ ಅಡ್ಡೆಯಂತಾಗಿರುವುದು ತಾರಾ ಅವರಿಗೆ ಗೊತ್ತಿಲ್ಲದ ಸಂಗತಿಯೇ?

ಕನ್ನಡ ಚಿತ್ರರಂಗಕ್ಕೆ ರಾಜಕೀಯ ಮತ್ತು ಉದ್ಯಮದ ನಂಟು ಮೊದಲಿನಿಂದಲೂ ಇದೆ. 35 ವರ್ಷಗಳ ಹಿಂದೆಯೇ ಶಂಕರ್ ನಾಗ್ ಎಂಬ ಕ್ರೀಯಾಶೀಲ ನಟ ನಿರ್ದೇಶಕ ಆಕ್ಸಿಡೆಂಟ್ ಎಂಬ ಸಿನಿಮಾ ಮೂಲಕವೇ ಡ್ರಗ್ಸ್ ಮತ್ತು ರಾಜಕಾರಣಿ ನಡುವಿನ ನಂಟನ್ನು ಅತ್ಯಂತ ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು ಎಂದು ಇಂದಿಗೂ ದಾಖಲಾದ ಈ ಚಿತ್ರಕ್ಕೆ 32ನೇ ರಾಷ್ಟ್ರೀಯ ಪ್ರಶಸ್ತಿಯೂ ದಕ್ಕಿತ್ತು. 

 ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅನೇಕರು ಚಿತ್ರರಂಗದ ನಟಿಯರ ಕಲೆಗೆ ಮನಸೋತು ಕಲೆಯನ್ನು ಪ್ರೋತ್ಸಾಹಿಸಿದ ರೂಪಗಳುಭಿನ್ನಭಿನ್ನವಾಗಿದ್ದವು. ಇಂತಹ ನಾಯಕರುಗಳು ಅವರವರ ಕಾಲದಲ್ಲೂ ಸಿನಿಮಾ ನಟರ ಪಾರ್ಟಿಗಳಲ್ಲಿ, ನಾಯಕಿ, ನಟಿಯರ ಅಂತಃಪುರಗಳಲ್ಲಿ ಅಮಲಿನ ಸುಖವುಂಡು ಹೋಗಿದ್ದೂ ಇದೆ.  ಪ್ರತಿಫಲವಾಗಿ ಅವರಿಗೆಲ್ಲಾ ಭವಿಷ್ಯ ರೂಪಿಸಿದ ಅನೇಕ ಉದಾಹರಣೆಗಳು ಹುಡುಕಿದರೆ ಕಾಣಸಿಗುತ್ತವೆ. ಇಂದೂ ಕೂಡ ಅದು ಮುಂದುವರೆದಿದೆ. ಆದರೆ ಬಯಲಿಗೆ ಬರುತ್ತಿರುವುದು ಮಾತ್ರ ಕೆಲವು ನಟಿಯರೇ ಹೊರತು ರಾಜಕಾರಣಿಗಳಾಗಲಿ, ಉದ್ಯಮಪತಿಗಳ, ಪೊಲೀಸ್ ಅಧಿಕಾರಿಗಳ ಮಕ್ಕಳಾಗಲಿ ಅಲ್ಲ.

 ಸಂಜನಾ ಪೊಲೀಸರ ಬಂಧನಕ್ಕೆ ಒಳಗಾಗುವ ಮುಂಚೆ ‘‘ನನ್ನ ಮುಟ್ಟಿದರೆ ಸರಕಾರವೇ ಶೇಕ್ ಆಗುತ್ತೆ’’ ಎಂದು ಸಿಸಿಬಿ ಪೊಲೀಸರಿಗೆ ಆವಾಝ್ ಹಾಕಿದ್ದಾಳೆ. ಈ ಮಟ್ಟಿಗೆ ಓರ್ವ ನಟಿ ಬೆದರಿಕೆ ಹಾಕುವಾಗ ಆಕೆಯ ಬೆನ್ನ ಹಿಂದೆ ಇರಬಹುದಾದ ಪ್ರಭಾವವಾದರೂ ಎಂತಹದ್ದು? ಪ್ರಭಾವಿಗಳಾದರೂ ಯಾರು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ರಾಗಿಣಿ, ಸಂಜನಾ ಅವರಿಬ್ಬರಿಗೂ ಪ್ರಭಾವಿ ರಾಜಕಾರಣಿ ಮತ್ತು ರಾಜಕಾರಣಿಗಳ ಮಕ್ಕಳ ನಂಟು ಇರುವುದು ಗಾಂಧಿನಗರಕ್ಕೆ ಗೊತ್ತಿಲ್ಲದ್ದೇನಲ್ಲ. ಅದರ ತನಿಖೆ ನಡೆಸಿದ್ದೇ ಅದರೆ ಅದು ಸೀದಾ ವಿಧಾನಸೌಧದ ಮಹಡಿಗಳಿಗೂ, ಭಾರೀ ಉದ್ಯಮಿಪತಿಗಳ ಮನೆಯ ಬಾಗಿಲಿಗೂ ಬಂದು ನಿಲ್ಲಬಹುದು.

 ಡ್ರಗ್ಸ್ ಜಾಲಕ್ಕೆ ಹಲವು ಮುಖಗಳಿವೆ. ಒಂದು ಅದರ ಹಣದ ವಹಿವಾಟು, ಮೋಜು-ಮಸ್ತಿ, ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ದಂಧೆ. ಇದು ಸಾಧ್ಯವಾಗುವುದು ಶ್ರೀಮಂತ ಕುಟುಂಬದ ಮಕ್ಕಳಿಗೆ, ರಾಜಕಾರಣಿಗಳ ಮಕ್ಕಳಿಗೆ ಮಾತ್ರ. ಅವರಿಗೆ ಹಣ ಇರುತ್ತೆ, ಟೈಮ್ ಇರುತ್ತೆ, ಅಧಿಕಾರದ ಪ್ರಭಾವಳಿಯೂ ಇರುತ್ತದೆ. ಅವರಿಗೆ ಮೋಜು ಬೇಕು, ಮತ್ತು ಬೇಕು ಅಂದಾಗ ಅವರ ಆಯ್ಕೆ ರಾತ್ರಿ ಪಾರ್ಟಿಗಳು. ಅದು ರೇವ್ ಪಾರ್ಟಿ, ಪೇಜ್ ತ್ರಿ ಪಾರ್ಟಿಗಳು. ಸರಕಾರವೇ ಪರವಾನಿಗೆ ಕೊಟ್ಟಿರುವ ಈ ಪಾರ್ಟಿಗಳೇ ಇವತ್ತು ಅಕ್ರಮದ ಅಡ್ಡೆಗಳಾಗಿವೆ. ಹಣ, ಆರಂಭದಲ್ಲಿ ಒಂದಷ್ಟು ಮೋಜಿಗೆ ಕಾರಣವಾಗಿದ್ದ ಈ ಪಾರ್ಟಿಗಳು ಆನಂತರ ಬಣ್ಣದ ಬೆಡಗಿಯರ ಸಹವಾಸ ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆಯ ಅಡ್ಡೆಗಳಾದಂತೆ, ಡ್ರಗ್ಸ್ ಮಾಫಿಯಾದ ಅಡ್ಡೆಗಳಾಗಿವೆ. ಇದುವರೆಗೂ ಇಲ್ಲಿಗೆ ಹೋಗಿ ತಮ್ಮ ತೆವಲು ತೀರಿಸಿಕೊಂಡವರು ಯಾರು? ಬೆಂಗಳೂರಿನಲ್ಲಿರುವ ಬಹುತೇಕ ರಾಜಕಾರಣಿಗಳ ಮಕ್ಕಳು, ಕಾರ್ಪೊರೇಟ್ ಕುಳಗಳು, ರಿಯಲ್ ಎಸ್ಟೇಟ್ ದಂಧೆಕೋರರು ಮುಂತಾದವರು. ಅವರಿಗೆ ಖುಷಿ ಕೊಡಲು ಹೋಗಿ ಈಗ ಸಿಕ್ಕಿಬಿದ್ದವರು ಜಾತಿ ಬಲವೂ, ರಾಜಕೀಯ ಬಲವೂ ಇಲ್ಲದ ನಟಿಮಣಿಯರು ಮಾತ್ರ. 

 ನಟಿ ಪಾರುಲ್ ಯಾದವ್ ತಮ್ಮ ಟ್ವೀಟ್ ನಲ್ಲಿ ಸ್ಯಾಂಡಲ್ ವುಡ್ ಗೆ ತಳುಕು ಹಾಕಿಕೊಂಡಿರುವ ಡ್ರಗ್ಸ್ ಮಾಫಿಯಾದಲ್ಲಿ ನಟಿಯರು ಮಾತ್ರವೇ ಇದ್ದಾರಾ? ಎನ್ನುವ ಮೂಲಕ ಸಿಸಿಬಿಗಷ್ಟೆ ಅಲ್ಲ ರಾಗಿಣಿ, ಸಂಜನಾ ಅವರ ಚಾರಿತ್ರ ಹರಣದ  ಯಜ್ಞಕ್ಕೆ ಕುಳಿತಂತಿರುವ ನ್ಯೂಸ್ ಚಾನಲ್ಗಳಿಗೂ ಮತ್ತು ಈ ಸಮಾಜಕ್ಕೂ ಸವಾಲೊಂದನ್ನು ಎಸೆದಿದ್ದಾರೆ. ಮಹಿಳೆಯರನ್ನೇ ಶೂಲಕ್ಕೇರಿಸುವ ಪುರುಷ ಹುನ್ನಾರವನ್ನು ಪಾರುಲ್ ಯಾದವ್ ಪ್ರಶ್ನಿಸಿದ್ದಾರೆ. ಇದಕ್ಕೆಲ್ಲಾ ಉತ್ತರಿಸಬೇಕಾದವರು ಯಾರು?

 ಡ್ರಗ್ಸ್ ದಂಧೆಯ ತನಿಖೆ ಗಾಂಧಿನಗರವನ್ನು ದಾಟಿ ಹೋದಾಗ ಮಾತ್ರವೇ ಈ ಮಾಫಿಯಾದ ತನಿಖೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯ. ಹಾಗೆ ನೋಡಿದರೆ ಸಿಸಿಬಿ  ಗಾಂಧಿನಗರ ದಾಟಿ ಹೋಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಸಿಸಿಬಿ ಕೆಲಸ ಗುಡ್ಡ ಅಗೆದು ಇಲಿ ಹಿಡಿದಂತಾಗಿದೆ. ಅದನ್ನೇ ದೊಡ್ಡ ಸಾಹಸ ಎನ್ನುವಂತೆ ಕೂಗುಮಾರಿ ನ್ಯೂಸ್ ಚಾನಲ್ಗಳು ಅರಚುತ್ತಿವೆ.

 ಉತ್ತರ ಭಾರತದ ಸಂಜನಾ, ರಾಗಿಣಿ ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡಿರುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದು. ತಮ್ಮನ್ನು ದೇವರಿಗಿಂತಲೂ ಮಿಗಿಲಾಗಿ ಆರಾಧಿಸುವ, ಅನುಕರಿಸುವ ಅಭಿಮಾನಿ ಸಮುದಾಯಕ್ಕೆ ಮಾದರಿಯಾಗುವಂತೆ ಬದುಕಬೇಕೆಂಬ ಸಾಮಾಜಿಕ ಹೊಣೆಗಾರಿಕೆ ಯಾವುದೇ ನಟ, ನಟಿ, ಕ್ರೀಡಾಪಟು,  ರಾಜಕಾರಣಿ, ಸೆಲಬ್ರಿಟಿಗೆ ಇರಬೇಕಾಗುತ್ತದೆ. ನಟನೆಯಲ್ಲಿ ಪ್ರತಿಭಾನ್ವಿತರಾಗಿರುವ ಸಂಜನಾ, ರಾಗಿಣಿ ಯಾಕೆ ಡ್ರಗ್ಸ್ ದಂಧೆಯಂತಹ ವಿಷವರ್ತುಲಕ್ಕೆ ಸಿಕ್ಕಿಬಿದ್ದಿದ್ದಾರೆ ಎಂದು ನೋಡಿದರೆ, ಗಾಂಧಿನಗರದ ವ್ಯವಸ್ಥೆಯಲ್ಲೇ ಒಂದು ದೋಷವಿರುವುದು ನಿಚ್ಚಳವಾಗಿ ಕಾಣುತ್ತದೆ.

 ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯಿಂದ ನೆಲೆಯೂರಲು ಬರುವ ಅದೆಷ್ಟೋ ಹೆಣ್ಣುಮಕ್ಕಳು ಅದೆಷ್ಟೇ ಪ್ರತಿಭಾನ್ವಿತರಾಗಿದ್ದರೂ ಒಂದೋ ಎರಡೋ ಸಿನಿಮಾಗಳಿಗೆ ಸೀಮಿತರಾಗಿ ಕಳೆದು ಹೋಗುವುದು ಇದೆ. ಅವಕಾಶಗಳು ಸಿಗಬೇಕಾದರೆ ಸರ್ವಸ್ವವನ್ನೂ ತ್ಯಾಗ ಮಾಡಬೇಕಾದ ಅನಿವಾರ್ಯತೆಯನ್ನು ನಟಿಯರ ಪಾಲಿಗೆ ಸಂಕಟವೂ ಆಗಿರುವ ಉದಾಹರಣೆಗಳು ಬೇಕಾದಷ್ಟಿವೆ. ಅವಕಾಶ, ಹಣ, ಕೀರ್ತಿಯ ಆಮಿಷಗಳು ಮತ್ತು ಹಪಾಹಪಿತನಗಳೂ ಸಂಜನಾ, ರಾಗಿಣಿಯಂತಹ ಅದೆಷ್ಟೋ ನಟಿಯರನ್ನು ಬಳಸಿಬಿಸಾಡುವ ಸರಕನ್ನಾಗಿಸಿದ ಕೀರ್ತಿ ಯಾರಿಗೆ ಸಲ್ಲಬೇಕು ಎಂಬುದನ್ನು ತುಳಸಿಯಷ್ಟೆ ಪವಿತ್ರವಾಗಿರುವ ಕರ್ನಾಟಕ ಫಿಲಂ ಚೇಂಬರ್ನ ತಲೆಯಾಳುಗಳು ಉತ್ತರಿಸಬೇಕು. ಗಂಧದ ಗುಡಿಗೆ ಬೆಂಕಿ ಇಟ್ಟವರ್ಯಾರು ಎಂಬುದನ್ನು ತಮಗೆ  ತಾವೇ ಪ್ರಶ್ನಿಸಿಕೊಳ್ಳಬೇಕು.

ಸುಪಾರಿ ರಾಜಕಾರಣವಾ?!

ಬಿ.ಎಸ್.ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುವ ಬಿಜೆಪಿಯಲ್ಲಿನ ಹಿತಶತ್ರುಗಳು ಅವಕಾಶಕ್ಕಾಗಿ ಹಾತೊರೆಯುತ್ತಲೇ ಇದ್ದಾರೆ. ಆದರೆ ಯಡಿಯೂರಪ್ಪ ಅವರ ನಸೀಬು ನೆಟ್ಟಗಿರುವುದರಿಂದ ಸಂದರ್ಭಗಳೇ ಶತ್ರುಗಳ ತಂತ್ರಗಳು ಫಲ ಕೊಡದಂತೆ ವರವಾಗುತ್ತಿವೆ. ಯಡಿಯೂರಪ್ಪ ಅವರನ್ನು ಆಡಳಿತಾತ್ಮಕ ವಿಫಲತೆಗಳ ಹಣೆಪಟ್ಟಿ ಹೊರಿಸಿ ಕೆಳಗಿಳಿಸಬೇಕೆಂದ ಸಂತೋಷ್ ಪಾಳೆಯದ ಪ್ರಯತ್ನಗಳು ಸದ್ಯಕ್ಕೆ  ಕೈಗೂಡುತ್ತಿಲ್ಲ. ಕೊರೋನ ಸಂಕಷ್ಟವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ತನ್ನ ವೈಫಲ್ಯದಿಂದ ತಲೆ ತಪ್ಪಿಸಿಕೊಳ್ಳಲು ಸಿಕ್ಕ ಅವಕಾಶವೆಂದರೆ ಅದು ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜೇಯೇಂದ್ರನೇ ಛಾಯಾ ಮುಖ್ಯಮಂತ್ರಿಯಂತೆ ಸರಕಾರದ ಆಡಳಿತವನ್ನು ನಿಯಂತ್ರಿಸುತ್ತಿದ್ದು, ಬಿಜೆಪಿ ಶಾಸಕರು, ಸಚಿವರುಗಳೆಲ್ಲಾ ವಿಜಯೇಂದ್ರನ ಮುಂದೆ ಕೈ ಚಾಚಿ ನಿಲ್ಲಬೇಕಿದೆ. ವರ್ಗಾವಣೆ, ನೇಮಕಾತಿ, ಅನುದಾನ ಹಂಚಿಕೆ, ಟೆಂಡರ್ ಡೀಲ್ ಗಳೆಲ್ಲಾ ವಿಜಯೇಂದ್ರನ ಇಶಾರೆ ಮೇರೆಗೆ ನಡೆಯುತ್ತಿದ್ದು, ಈ ಬಗ್ಗೆ ಬಿಜೆಪಿ ಶಾಸಕರ ಗುಂಪೊಂದು ದೆಹಲಿ ನಾಯಕರಿಗೆ ದೂರು ಕೂಡ ಕೊಟ್ಟಿದೆ. ವಿಜಯೇಂದ್ರನ  ಸಾವಿರಾರು ಕೋಟಿ ರೂ.ಗಳ ಹಗರಣದ ದಿಕ್ಕು ತಪ್ಪಿಸಲು ಡ್ರಗ್ ಮಾಫಿಯಾ ಪ್ರಕರಣವನ್ನು ಎಳೆದು ತರಲಾಯಿತಾ? ಅಧಿಕಾರದ ತಲೆ ದಂಡ ತಪ್ಪಿಸಲು ಡ್ರಗ್ ಮಾಫಿಯಾ ಪ್ರಕರಣ ಬಡಿದೆಬ್ಬಿಸಿ ರಾಗಿಣಿ, ಸಂಜನಾ ಅವರನ್ನು ಬಲಿ ಕೊಟ್ಟ ಸುಪಾರಿ ರಾಜಕಾರಣವೇನಾದರೂ ನಡೆದು ಹೋಯಿತಾ?

Join Whatsapp