ಚೆನ್ನೈ : ವೈದ್ಯಕೀಯ ಪ್ರವೇಶ ಪರೀಕ್ಷೆ ತೇರ್ಗಡೆಯಾದ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 7.5 ಮೀಸಲಾತಿ ನೀಡುವ ಬಗ್ಗೆ ತಮಿಳುನಾಡು ಸರಕಾರ ಆದೇಶವೊಂದನ್ನು ಜಾರಿಗೊಳಿಸಿದೆ.
ಈ ಕುರಿತ ಮಸೂದೆ ತಮಿಳುನಾಡು ವಿಧಾನಸಭೆಯಲ್ಲಿ ಮಂಡನೆಯಾಗಿ, ರಾಜ್ಯಪಾಲರ ಅನುಮತಿಗಾಗಿ ಕಾಯಲಾಗುತ್ತಿದೆಯಾದರೂ, ಈ ನಡುವೆ ಸರಕಾರ ಹೊಸ ಆದೇಶ ಜಾರಿಗೊಳಿಸಿದೆ. ಈ ವರ್ಷದಿಂದಲೇ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೇ. 7.5 ಮೀಸಲಾತಿ ಜಾರಿಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೀಟ್ ಫಲಿತಾಂಶ ಹೊರಬಿದ್ದಿರುವುದರಿಂದ ಈ ಆದೇಶ ಈಗಲೇ ಜಾರಿಗೊಳಿಸುವ ಅನಿವಾರ್ಯತೆಯಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಉಪ ಮೀಸಲಾತಿಯಿಂದ ಸುಮಾರು 300 ಮಂದಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಅನುಕೂಲವಾಗಲಿದೆ.