ಪ್ರತಿಪಕ್ಷದ ವಿರೋಧದ ನಡುವೆಯೂ ಮುಖ್ಯ ಮಾಹಿತಿ ಆಯುಕ್ತರಾಗಿ ಯಶವರ್ಧನ್ ಸಿನ್ಹಾ ನೇಮಕಕ್ಕೆ ನಿರ್ಧಾರ

Prasthutha|

ನವದೆಹಲಿ : ಹೊಸ ಮುಖ್ಯ ಮಾಹಿತಿ ಆಯುಕ್ತರಾಗಿ ಮಾಜಿ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಮತ್ತು ಮಾಹಿತಿ ಆಯುಕ್ತ ಯಶವರ್ಧನ್ ಸಿನ್ಹಾರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಪ್ರತಿಪಕ್ಷದ ಸದಸ್ಯ ಅಧೀರ್ ರಂಜನ್ ಚೌಧರಿ ಅವರ ಆಕ್ಷೇಪದ ನಡುವೆಯೂ, ಸಿನ್ಹಾ ಅವರನ್ನೇ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕ ಮಾಡಲು ಸಿದ್ಧತೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

- Advertisement -

ರಾಷ್ಟ್ರಪತಿ ಭವನ ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಜಾರಿಗೊಳಿಸುವ ನಿರೀಕ್ಷೆಯಿದೆ. ಪತ್ರಕರ್ತ ಉದಯ್ ಮಧುರ್ಕರ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ತಮಗೆ ಆಯ್ಕೆ ಪತ್ರ ದೊರೆತಿರುವುದನ್ನು ಉದಯ್ ದೃಢ ಪಡಿಸಿದ್ದಾರೆ.

ಅ.24ರಂದು ನಡೆದ ಆಯ್ಕೆ ಸಮಿತಿಯ ಸಭೆಯ ಬಳಿಕ, ಈ ನಿರ್ಧಾರ ಕೈಗೊಳ್ಳಲಾಗಿದೆ. ಆಯ್ಕೆ ಸಮಿತಿಯು 2019ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪಾರದರ್ಶಕತೆ ಮಾರ್ಗಸೂಚಿಯನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷದ ಸದಸ್ಯ ಚೌಧರಿ ಹೇಳಿದ್ದಾರೆ.

- Advertisement -

355 ಅರ್ಜಿದಾರರಲ್ಲಿ ಸಿದ್ಧಪಡಿಸಲಾದ ಅಂತಿಮ ಪಟ್ಟಿಯಲ್ಲಿ ಉದಯ್ ಮಧುರ್ಕರ್ ಹೆಸರೇ ಇರಲಿಲ್ಲ. ಪತ್ರಕರ್ತನ ಹೆಸರು ಈಗ ಎಲ್ಲಿಂದಲೋ ‘ಆಕಾಶದಿಂದ ಉದುರಿದೆ’ ಎಂದು ಚೌಧರಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

Join Whatsapp