ಗುಜರಾತಿನಲ್ಲಿ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಬಿಡುಗಡೆ ಆಘಾತಕಾರಿ ಬೆಳವಣಿಗೆ: SDPI

Prasthutha|

ನವದೆಹಲಿ : 2002ರ ಗುಜರಾತ್ ನರಮೇಧ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅವರನ್ನು ಅತ್ಯಾಚಾರ ಮಾಡಿ ಅವರ ಕುಟುಂಬದ ಏಳು ಜನರ ಸದಸ್ಯರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.

- Advertisement -

ಈ ಪ್ರಕರಣದಲ್ಲಿ ಅಪರಾಧ ಸಾಭೀತಾಗಿ ಶಿಕ್ಷೆಗೆ ಒಳಗಾಗಿದ್ದ ಹನ್ನೊಂದು ಜನ ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವುದು ಆಘಾತಕಾರಿ ಮತ್ತು ಈ ಪ್ರಕರಣಕ್ಕೆ ಎಸೆಗಲಾದ ಅನ್ಯಾಯ ಎಂದು SDPI ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ತುಂಬೆ ಹೇಳಿದ್ದಾರೆ.

ಆ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಕ್ಷಮಾಧಾನ ನೀತಿಯ ಅಡಿಯಲ್ಲಿ ಬಿಡುಗಡೆ ಮಾಡಿದ್ದು, ಅವರೆಲ್ಲರೂ ಗೋದ್ರಾ ಸಬ್ ಜೈಲಿನಿಂದ ಹೊರ ನಡೆದಿದ್ದಾರೆ.

- Advertisement -

ಮಾರ್ಚ್ 3, 2002 ರಲ್ಲಿ 20 ರಿಂದ 30 ಜನರಿದ್ದ ಉದ್ರಿಕ್ತರ ಗುಂಪೊಂದು ಕುಡುಗೋಲು, ದೊಣ್ಣೆ ಮತ್ತು ಖಡ್ಗಗಳಿಂದ ಬಿಲ್ಕಿಸ್ ಬಾನೋ ಮತ್ತು ಆಕೆಯ ಸಣ್ಣ ಮಗಳ ಜೊತೆಗೆ ಇನ್ನೂ 15 ಜನ ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಆಕೆಯ ಕುಟುಂಬದ ಏಳು ಜನರ ಹತ್ಯೆ ಮಾಡಲಾಗಿತ್ತು.


ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆರಂಭದಲ್ಲಿ ಈ ಪ್ರಕರಣದ ನ್ಯಾಯಾಲಯ ವಿಚಾರಣೆ ಅಹಮದಾಬಾದ್ ನಲ್ಲಿಯೇ ನಡೆಯಿತಾದರೂ, ಸಾಕ್ಷಿ ನಾಶ ಮತ್ತು ಬೆದರಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಯಿತು.

2008ರಲ್ಲಿ ಸಿಬಿಐ ನ್ಯಾಯಾಲಯ ಈ ಪ್ರಕರಣದ 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ನಂತರ 2018ರಲ್ಲಿ ಉಚ್ಚ ನ್ಯಾಯಾಲಯದ ಅದೇ ತೀರ್ಪನ್ನು ಎತ್ತಿ ಹಿಡಿಯಿತು. ಆದರೆ ಅಪರಾಧಿಗಳಲ್ಲಿ ಒಬ್ಬರ ಕ್ಷಮಾದಾನ ಅರ್ಜಿ ಆಧಾರದ ಮೇಲೆ ಗುಜರಾತ್ ಸರ್ಕಾರ ಈಗ ಎಲ್ಲಾ ಹನ್ನೊಂದು ಜನರ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸಿ ಎಲ್ಲ ಅಪರಾಧಿಗಳನ್ನೂ ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆ ಮಾಡಿದೆ.

ಗುಜರಾತ್ ಸರ್ಕಾರ ಅತ್ಯಾಚಾರ ಮತ್ತು ಏಳು ಜನರನ್ನು ಕೊಂದ ಕ್ರೂರಿಗಳನ್ನು ಬಿಡುಗಡೆ ಮಾಡಿ ಅವರೆಲ್ಲರಿಗೂ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ಮಾಡಿಕೊಟ್ಟಿರುವುದು ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅನ್ಯಾಯ ಮತ್ತು ಸಾಮಾಜಿಕವಾಗಿ ನಾಚಿಕೆಗೇಡಿನ ಸಂಗತಿ. ಗುಜರಾತ್ ಸರ್ಕಾರದ ಈ ನಡೆಯಿಂದ ಸಮಾಜದಲ್ಲಿ ಸೇಡಿನ ಮನಸ್ಥಿತಿಗೆ ಪ್ರೋತ್ಸಾಹ ನೀಡಿದಂತಾಗಿದೆ ಮತ್ತು ಅಸುರಕ್ಷತೆಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದು ಇಲಿಯಾಸ್ ತುಂಬೆ ಹೇಳಿದರು.

Join Whatsapp