ಐಪಿಎಲ್‌| ಪಂಜಾಬ್‌ ಕಿಂಗ್ಸ್‌ ಕೋಚ್‌ ಸ್ಥಾನದಿಂದ ಅನಿಲ್ ಕುಂಬ್ಳೆ‌ ಔಟ್ !

Prasthutha|

ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಹುದ್ದೆಯಿಂದ ಅನಿಲ್ ಕುಂಬ್ಳೆ ಅವರನ್ನು ಬದಲಾಯಿಸಲು ಫ್ರಾಂಚೈಸಿ ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ಅನಿಲ್ ಕುಂಬ್ಳೆ ಅವರ ಅವಧಿಯು ಕೊನೆಗೊಳ್ಳಲಿದೆ. ಕುಂಬ್ಳೆ ಜೊತೆಗಿನ ಒಪ್ಪಂದವನ್ನು ನವೀಕರಿಸದಿರಲು ಪಂಜಾಬ್ ಕಿಂಗ್ಸ್ ನಿರ್ಧರಿಸಿದೆ ಎಂದು ವರದಿಯಾಗಿದೆ.

- Advertisement -

ಕುಂಬ್ಳೆ ಸ್ಥಾನಕ್ಕೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಇಂಗ್ಲೆಂಡ್‌ನ ಇಯಾನ್‌ ಮಾರ್ಗನ್‌ ಅಥವಾ ಟ್ರೆವೆರ್‌ ಬೇಲಿಸ್‌ ನೇಮಕವಾಗುವ ಸಾಧ್ಯತೆಯಿದೆ. ಬೇಲಿಸ್‌ ಈ ಹಿಂದೆ 2019ರಲ್ಲಿ ಏಕದಿನ ವಿಶ್ವಕಪ್​ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು. ಅಲ್ಲದೆ 2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು 2020ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಕೋಚ್ ಆಗಿದ್ದ ಬೇಲಿಸ್ ನೇತೃತ್ವದಲ್ಲಿ ಎಸ್​ಆರ್​ಹೆಚ್​ ಮೂರನೇ ಸ್ಥಾನ ಅಲಂಕರಿಸಿತ್ತು.

2020ರಲ್ಲಿ ಕುಂಬ್ಳೆ, ಪಂಜಾಬ್‌ ಕಿಂಗ್ಸ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಮೂರು ವರ್ಷಗಳ ಅವಧಿಯಲ್ಲಿ 42 ಪಂದ್ಯಗಳನ್ನು ಆಡಿರುವ ತಂಡ, ಕೇವಲ 19 ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿದೆ. 2020 ಮತ್ತು 2021 ರಲ್ಲಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಿದ್ದು, 2022 ರಲ್ಲಿ ಮಯಾಂಕ್ ಅಗರ್ವಾಲ್ ನಾಯಕನಾಗಿ ಆಯ್ಕೆಯಾಗಿದ್ದರು.

- Advertisement -

2008ರಿಂದಲೂ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಪಂಜಾಬ್‌ ಕಿಂಗ್ಸ್‌ ಇದುವರೆಗೂ ಚಾಂಪಿಯನ್‌ ಪಟ್ಟವನ್ನು ತನ್ನದಾಗಿಸಿಕೊಳ್ಳುವಲ್ಲಿ ವಿಫಲವಾಗಿದೆ. 2014ರಲ್ಲಿ ಫೈನಲ್‌ ಪ್ರವೇಶಿಸಿರುವುದು ತಂಡದ ಈವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌, ಪಂಜಾಬ್‌ ತಂಡವನ್ನು ಮೂರು ಎಸೆತಗಳು ಬಾಕಿ ಇರುವಂತೆಯೇ ರೋಚಕವಾಗಿ ಮಣಿಸಿತ್ತು.‌

ಐಪಿಎಲ್‌ನ 15ನೇ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಪಂಜಾಬ್‌ ಕಿಂಗ್ಸ್‌ ಎಂಬುದಾಗಿ ಹೆಸರು ಬದಲಾಯಿಸಿತ್ತು. ಆದರೂ 10 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ತಲಾ 7 ಪಂದ್ಯಗಳಲ್ಲಿ ಗೆಲುವು-ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಪಂಜಾಬ್‌ 6ನೇ ಸ್ಥಾನಕ್ಕೆ ಕುಸಿದಿತ್ತು. 2015 ಮತ್ತು 2016ರ ಆವೃತ್ತಿಯಲ್ಲಿ ಅಂತಿಮ ಸ್ಥಾನಿಯಾಗಿದ್ದ ಪಂಜಾಬ್‌, 2017ರಲ್ಲಿ 5ನೇ, 2018 ರಲ್ಲಿ 7ನೇ ಮತ್ತು ಕೊನೆಯ ಮೂರು ಆವೃತ್ತಿಗಳಲ್ಲಿ 6ನೇ ಸ್ಥಾನ ಪಡೆದಿತ್ತು. ಸತತವಾಗಿ ಏಳು ಆವೃತ್ತಿಗಳಲ್ಲಿ ಪ್ಲೇ ಆಫ್‌ ಹಂತಕ್ಕೇರಲು ವಿಫಲವಾಗಿರುವ ಅಪರೂಪದ ಕೆಟ್ಟ ದಾಖಲೆಯನ್ನು ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಹೊಂದಿದೆ.

Join Whatsapp