ಬೆಚ್ಚಿ ಬೀಳಿಸುವ ಆ್ಯಸಿಡ್ ದಾಳಿ ಸಂಚು: ನಾಗೇಶ್ ಬಂಧನದ ರೋಚಕ ಸ್ಟೋರಿ ಇಲ್ಲಿದೆ ಓದಿ…

Prasthutha|

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಬಂಧಿತನಾಗಿ ಗುಂಡೇಟು ತಿಂದಿರುವ ನಾಗೇಶ್ ಅಲಿಯಾಸ್ ನಾಗೇಶ್ ಬಾಬು ದಾಳಿಗೂ ಮುನ್ನ ಮಾಡಿ ಸಂಚು ಬೆಚ್ಚಿ ಬೀಳಿಸುವಂತಿದೆ.!

- Advertisement -


ಕಳೆದ 7 ವರ್ಷಗಳಿಂದಲೂ ಆ್ಯಸಿಡ್ ಸಂತ್ರಸ್ತೆಯ ಪರಿಚಯ ನಾಗೇಶ್ ಗಿದ್ದು ಆಕೆಯಿದ್ದ ಮನೆಯಲ್ಲೇ ಮತ್ತೊಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಪ್ರೀತ್ಸೆ… ಪ್ರೀತ್ಸೆ…ಎನ್ನುತ್ತಾ ಹಿಂದೆ ಬಿದ್ದಿದ್ದ ಆತನಿಗೆ ಯುವತಿಯು ಮಾತ್ರ ನೀನು ಅಣ್ಣನಂತೆ ಇದ್ದೀಯ. ನಾ ನಿನ್ನ ಲವ್ ಮಾಡೋದಿಲ್ಲ ಎಂದು ಸಾರಿ ಸಾರಿ ಹೇಳಿದರೂ ಅದನ್ನು ಕೇಳದೇ ಮೊಂಡುತನವನ್ನು ನಾಗೇಶ್ ತೋರಿದ್ದ. ಕೊನೆಗೆ ನಾಗೇಶ್ ಮೊಂಡಾಟಕ್ಕೆ ಬೇಸತ್ತ ಯುವತಿ, ಮನೆಯವರಿಗೆ ವಿಷಯ ತಿಳಿಸಿದಾಗ, ನಾಗೇಶ್ ನನ್ನು ಆ ಮನೆಯಿಂದ ಖಾಲಿ ಮಾಡಿಸಿದ್ದಾರೆ.


ಆದರೆ, ಅಲ್ಲಿಯೇ ಇದ್ದ ಸ್ನೇಹಿತನೊಬ್ಬನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ನಾಗೇಶ್, ಯುವತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ದಿನಂಪ್ರತಿ ಪಡೆದುಕೊಳ್ಳುತ್ತಿದ್ದ. ಜೊತೆಗೆ ಅಕ್ಕನ ಮದುವೆ ನಿಶ್ಚಿಯದಲ್ಲೇ ಆಕೆಗೂ ವರ ಗೊತ್ತು ಮಾಡುವ ವಿಚಾರವನ್ನು ತಿಳಿದುಕೊಂಡಿದ್ದಾನೆ.

- Advertisement -

ಆ್ಯಸಿಡ್ ಖರೀದಿ ಹೇಗೆ ?:
ಹೌಸ್ ಕೀಪಿಂಗ್ ಕೆಲಸಕ್ಕಾಗಿ ಆ್ಯಸಿಡ್ ಖರೀದಿಸುತ್ತಿದ್ದ ಕಂಪನಿಯೊಂದರ ಪರಿಚಯ ಈತನಿಗಿದ್ದು, ಆ ಕಂಪನಿಯವರು ಆ್ಯಸಿಡ್ ಖರೀದಿದಾಗಿ ಇಂಡೆಂಟ್ ಹಾಕಿದಾಗ, ತಾನೇ ಖರೀದಿಸಿ ತರುವುದಾಗಿ ಹೇಳಿ 20 ಲೀಟರ್ ಕ್ಯಾನ್ ಜೊತೆಗೆ, ತಾನೂ ಒಂದೊಂದು ಲೀಟರ್ ನ ಎರಡು ಲೀಟರ್ ಪ್ರತ್ಯೇಕವಾಗಿ ಖರೀದಿಸಿದ್ದಾನೆ. ಹೀಗೆ ಏ. 20ರಂದು ಆ್ಯಸಿಡ್ ಖರೀದಿಸಿದ್ದ ಈತ, ಯುವತಿಯ ಮೇಲೆ ಆ್ಯಸಿಡ್ ಹಾಕುವ ಸಂಚು ಮಾಡಿದ್ದಾನೆ. ಕೊನೆಯ ಬಾರಿಗೆ ಕೇಳಲು ಏ. 27ರಂದು ಯುವತಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಕೇಳಿದ್ದು, ನೀನು ನನ್ನ ಅಣ್ಣನ ರೀತಿಯಲ್ಲಿ ಇದ್ದೀಯ, ನಿನ್ನ ನಾ ಮದುವೆಯಾಗುವುದಿಲ್ಲ. ಪ್ರೀತಿಸುವುದೂ ಇಲ್ಲ ಎಂದು ಕಟ್ಟಿ ಮುರಿದಂತೆ ನಿರ್ಧಾರ ತಿಳಿಸಿದ್ದಾಳೆ.


ದಾಳಿ ಮುನ್ಸೂಚನೆ:
ಇದರಿಂದ ಆಕ್ರೋಶಗೊಂಡ ನಾಗೇಶ್, ಮರುದಿನ ಆ್ಯಸಿಡ್ ದಾಳಿ ಮಾಡಲು ನಿರ್ಧರಿಸಿ ಏಪ್ರಿಲ್ 28ರಂದು ಖರೀದಿಸಿದ ಆ್ಯಸಿಡ್ ನ ಬಾಟಲಿ ಇಟ್ಟುಕೊಂಡು ಬೈಕ್ ನಲ್ಲಿ ಬೆಳಿಗ್ಗೆಯೇ ಸುಂಕದಕಟ್ಟೆಗೆ ಬಂದಿದ್ದಾನೆ. ಅಲ್ಲಿ ಕಾದು ಕುಳಿತು ಯುವತಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಕಚೇರಿಯ ಬಳಿಯಲ್ಲಿಯೇ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಅಲ್ಲಿಂದ ಪರಾರಿಯಾಗಿ ನೇರವಾಗಿ ಸೆಷನ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ತೆರಳಿ ತಾನು ಆ್ಯಸಿಡ್ ದಾಳಿ ಮಾಡಿ ಬಂದಿದ್ದೇನೆ. ನನಗೆ ಜಾಮೀನು ಬೇಕು ಎಂದಾಗ, ಇನ್ನೂ ಎಫ್ ಐಆರ್ ಆಗಿರುವುದಿಲ್ಲ. ಪೊಲೀಸ್ ಠಾಣೆಗೆ ಹೋಗು, ಶರಣಾಗು ಎಫ್ ಐಆರ್ ಆಗಲಿದೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸೋಣ ಎಂಬುದಾಗಿ ಸಲಹೆ ಮಾಡಿದ್ದಾರೆ.


ಬೈಕ್ ಬಿಟ್ಟು ಬಸ್:
ಈ ಸಲಹೆ ನನಗೆ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದನ್ನು ಅರಿತ ಆತ, ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿಯಲ್ಲಿಯೇ ಬೈಕ್ ಬಿಟ್ಟು ಹೊಸಕೋಟೆ ಬಸ್ ಏರಿದ್ದಾನೆ. ಹೊಸಕೋಟೆಯ ಬಳಿಯಲ್ಲಿ ಯಾವುದಾದರೂ ಕೆರೆಗೆ ಬಿದ್ದು ಆತ್ಮಹತ್ಯೆ ನಿರ್ಧಾರವನ್ನು ಮಾಡಿ ತೆರಳಿದ್ದಾನೆ. ನಡುವೆ ಮನಸ್ಸು ಬದಲಿಸಿ, ಅಲ್ಲಿಂದ ತಿರುವಣ್ಣಾಮಲೈಗೆ ತೆರಳಿದ್ದಾನೆ. ಅಲ್ಲಿನ ದೇವಾಲಯದಲ್ಲಿ ಕಾವಿಧರಿಸಿ, ಸ್ವಾಮೀಜಿಯ ರೀತಿಯಲ್ಲಿ ವೇಷಮರೆಸಿಕೊಂಡಿದ್ದಾನೆ. ಈ ದೇವಾಲಯದಲ್ಲಿ ಹೀಗೆ ನೂರಾರು ಮಂದಿ ಇರುವ ವಿಚಾರ ತಿಳಿದು ಪೊಲೀಸರು, ಆ ದೇವಾಲಯದಲ್ಲಿ ಆ್ಯಸಿಡ್ ದಾಳಿಕೋರ ನಾಗೇಶ್ ಬಗ್ಗೆ ಪ್ರಕಟಣೆ ಇರುವ ಪೋಟೋ ಸಹಿತ ಕರಪತ್ರ ಹಚ್ಚಿ ಬಂದಿದ್ದಾರೆ.


ಆಟೋ ಚಾಲಕನ ಸುಳಿವು:
ಕರಪತ್ರದ ಪೋಟೋದಲ್ಲಿನ ಪೋಟೋ ಹಾಗೂ ದೇವಾಲಯದಲ್ಲಿ ಸ್ವಾಮೀಜಿ ವೇಷಧರಿಸಿ ಧ್ಯಾನದಲ್ಲಿ ಕುಳಿತ ವ್ಯಕ್ತಿಯೊಬ್ಬನಿಗೂ ಹೋಲಿಕೆ ಕಂಡು ಬಂದಿದ್ದನ್ನು ಗಮನಿಸಿದಂತ ಆಟೋ ಚಾಲಕನೊಬ್ಬ, ಪೊಲೀಸರು ನೀಡಿದ್ದ ನಂಬರ್ ಗೆ ಆತನ ಪೋಟೋ ತೆಗೆದು ವಾಟ್ಸಾಪ್ ಮಾಡಿದ್ದಾರೆ. ಪೋಟೋ ನೋಡಿದ ಪೊಲೀಸರಿಗೆ ಆತನ ಕೈ ಕೂಡ ಆ್ಯಸಿಡ್ ದಾಳಿಯ ವೇಳೆ ಸುಟ್ಟಿರುವ ಗುರುತು ಪತ್ತೆಯಾಗಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಆತನ ಬಳಿಯಲ್ಲೇ ಧ್ಯಾನಕ್ಕೆ ಕುಳಿತವರಂತೆ ಕುಳಿತು, ಏನ್ ಹೆಸರು, ಎಲ್ಲಿಂದ ಬಂದಿದ್ದು ಹೀಗೆಲ್ಲಾ ಕೇಳಿ ಆತನ ಬಳಿ ಯಾವುದೇ ಶಸ್ತ್ರಾಸ್ತ್ರ ಇಲ್ಲದಿರುವುದನ್ನು ಖಚಿತ ಪಡಿಸಿದ್ದಾರೆ.


ಸ್ಥಳೀಯರ ವಿರೋಧ:
ಆರಂಭದಲ್ಲಿ ಯಾವುದೇ ಮಾಹಿತಿ ಬಿಚ್ಚಿಟ್ಟಿಲ್ಲ. ಪೊಲೀಸ್ ಭಾಷೆಯಲ್ಲಿ ಜೋರಾಗಿ ಕೇಳಿದಾಗ ತನ್ನ ಹೆಸರು ನಾಗೇಶ್ ಎಂಬುದಾಗಿ ತಿಳಿಸಿದ್ದಾನೆ. ನಾಗೇಶ್ ಎಂದು ಬಾಯ್ಬಿಟ್ಟ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಾಗ, ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ವೇಳೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲಿನ ಪೊಲೀಸರ ಜೊತೆ ಸ್ಥಳಕ್ಕೆ ತೆರಳಿ, ಅಲ್ಲಿನವರಿಗೆ ಮನವೊಲಿಕೆ ಮಾಡಿಕೊಟ್ಟ ನಂತರ ಬೆಂಗಳೂರಿಗೆ ತಿರುವಣ್ಣಾಮಲೈ ನಿಂದ ನಾಗೇಶ್ ನನ್ನು ಎಡೆಮುರಿಕಟ್ಟಿ ಹಿಡಿದು ತರಲಾಗಿದೆ. ಹೀಗೆ ಕೊನೆಗೂ ಆ್ಯಸಿಡ್ ದಾಳಿಕೋರ ನಾಗೇಶ್ ನನ್ನು ಪೊಲೀಸರು ಬಂಧಿಸಿದ್ದು ರೋಚಕ ಕತೆಯಾಗಿದೆ.

50 ಸಾವಿರ ರೂ. ಬಹುಮಾನ:
ನಾಗೇಶ್ ಇದೇ ಮೊದಲ ಬಾರಿಗೆ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಲು ಆ್ಯಸಿಡ್ ಖರೀದಿಸಿಲ್ಲ. ಈ ಹಿಂದೆ 2020ರಲ್ಲಿಯೇ ಆತ ಖರೀದಿಸಿದ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿಶೇಷವೆಂದರೆ, ತನ್ನ ಯಾವುದೇ ಸುಳಿವು ಸಿಗದಿರಲಿ ಎಂದು ನಾಗೇಶ್ ಆ್ಯಸಿಡ್ ದಾಳಿ ಬಳಿಕ ಮೊಬೈಲ್, ಲ್ಯಾಪ್ ಟಾಪ್ ಯಾವುದನ್ನು ಬಳಸಿಲ್ಲ. ಒಟ್ಟು 10 ಪೊಲೀಸ್ ತಂಡಗಳ 50 ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ದಾಳಿಕೋರನನ್ನು ಬಂಧಿಸುವಲ್ಲಿ ಶ್ರಮಿಸಿದ್ದು ಅವವರಿಗೆಲ್ಲಾ ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ.


ಜೊತೆಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ 50 ಸಾವಿರ ರೂ. ನಗದು ಬಹುಮಾನ ನೀಡಿ, ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಪ್ರಶಾಂತ್ ಅವರಿದ್ದರು.



Join Whatsapp