ಐಪಿಎಲ್ 2022 | ಅಂತಿಮ ಓವರ್’ನಲ್ಲಿ ಮೊದಲ ಗೆಲುವಿನ ನಗೆ ಬೀರಿದ ಆರ್’ಸಿಬಿ

Prasthutha|

ಮುಂಬೈ: ಸುಲಭ ಗೆಲುವಿನ ಗುರಿಯನ್ನು ಮುಟ್ಟಲು ತಿಣುಕಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ 15ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್’ಗಳ ಜಯ ಸಾಧಿಸಿದೆ.
ಗೆಲುವಿಗೆ 129 ರನ್’ಗಳ ಸುಲಭ ಗುರಿ ಪಡೆದಿದ್ದ ಬೆಂಗಳೂರು ತಂಡ, ಕೊನೆಯ ಓವರ್‌’ವರೆಗೂ ಹೋರಾಡಿ 7 ವಿಕೆಟ್ ನಷ್ಟದಲ್ಲಿ ಕೇವಲ 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಿಟ್ಟುಸಿರು ಬಿಟ್ಟಿದೆ.
ಶೆರ್ಫಾನೆ ರುತ್ಫೋರ್ಡ್ 28 ಮತ್ತು ಶಹಬಾಝ್ ಅಹ್ಮದ್ ಗಳಿಸಿದ 27 ರನ್ ಆರ್’ಸಿಬಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

- Advertisement -


ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್’ಸಿಬಿಗೆ ಕೋಲ್ಕತ್ತಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದ್ದರು. 17 ರನ್ ಗಳಿಸುವಷ್ಟರಲ್ಲೇ ಆರ್ ಸಿಬಿಯ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ಫಾಫ್ ಡುಪ್ಲೆಸ್ಸಿ 5, ಆರಂಭಿಕ ಅನುಜ್ ರಾವತ್ 0, ಮತ್ತು ವಿರಾಟ್ ಕೊಹ್ಲಿ 12 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಅಂತಿಮವಾಗಿ 7 ಎಸೆತಗಳಲ್ಲಿ ತಲಾ ಒಂದು ಬೌಂಡರಿ-ಸಿಕ್ಸರ್ ಸಿಡಿಸಿದ ಕೀಪರ್ ದಿನೇಶ್ ಕಾರ್ತಿಕ್ ಗೆಲುವಿನ ಗೆರೆ ದಾಟಿಸಿದರು.
ಕೋಲ್ಕತ್ತಾ ಪರ ಟಿಮ್ ಸೌಥಿ 3 ಹಾಗೂ ಉಮೇಶ್ ಯಾದವ್ 2 ವಿಕೆಟ್ ಪಡೆದರು.

ಕೋಲ್ಕತ್ತಾ ತಂಡವನ್ನು 128 ರನ್’ಗಳಿಗೆ ನಿಯಂತ್ರಿಸಿದ್ದ ಆರ್’ಸಿಬಿ

- Advertisement -

ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡಿದ್ದ ಆರ್’ಸಿಬಿ, ಕೋಲ್ಕತ್ತಾ ತಂಡವನ್ನು 128 ರನ್ ಗಳಿಗೆ ನಿಯಂತ್ರಿಸುವಲ್ಲಿ ಸಫಲವಾಗಿತ್ತು.
ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಸ್ಪಿನ್ನರ್ ವಾನಿಂದು ಹಸರಂಗ, ತನ್ನ 4 ಓವರ್‌ಗಳ ದಾಳಿಯಲ್ಲಿ 20 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಕೆಕೆಆರ್ ಪರ 25 ರನ್’ಗಳಿಸಿದ ಆಂಡ್ರೆ ರಸೆಲ್ ಟಾಪ್ ಸ್ಕೋರರ್ ಎನಿಸಿದರು. ಉಳಿದಂತೆ ಉಮೇಶ್ ಯಾದವ್ 18, ನಾಯಕ ಶ್ರೇಯಸ್ ಅಯ್ಯರ್ 13, ನಿತೀಶ್ ರಾಣಾ 10, ಸುನಿಲ್ ನರೇನ್ 12, ಹಾಗೂ ಸ್ಯಾಮ್ ಬಿಲ್ಲಿಂಗ್ಸ್ 14 ರನ್’ಗಳಿಸುವಷ್ಟರಲ್ಲೇ ನಿರ್ಗಮಿಸಿದರು.
ಆಕಾಶ್ ದೀಪ್ 3, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರೆ, ಸಿರಾಜ್ ಆರಂಭಿಕ ಅಜಿಂಕ್ಯಾ ರಹಾನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮೊದಲ ಪಂದ್ಯದಲ್ಲಿ 205 ರನ್ ಗಳಿಸಿಯೂ ಪಂಜಾಬ್ ಕಿಂಗ್ಸ್’ಗೆ ಫಾಫ್ ಡುಪ್ಲೆಸ್ಸಿ ಪಡೆ ಶರಣಾಗಿತ್ತು.

Join Whatsapp