ರಾಮನಗರ : ಮೈಸೂರಿನಿಂದ ಬೆಂಗಳೂರಿನ ಆರ್ ಬಿಐಗೆ ಹಣ ತುಂಬಿಕೊಂಡು ಬರುತ್ತಿದ್ದ ಕಂಟೇನರ್ ಲಾರಿ ಮೈಸೂರು ರಸ್ತೆಯಲ್ಲಿ ಪಲ್ಟಿಯಾಗಿದೆ. ಕಂಟೇನರ್ ಲಾರಿಗೆ ಬಿಗಿ ಭದ್ರತೆ ನೀಡಲಾಗಿದ್ದು, ಪೊಲೀಸರು ಮತ್ತು ಸಿಐಎಸ್ ಎಫ್ ಯೋಧರನ್ನು ಕಾವಲಿಗೆ ನಿಯೋಜಿಸಲಾಗಿದೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ಕಂಟೇನರ್ ಲಾರಿ ಪಲ್ಟಿಯಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕಲ್ಲುಗೋಪಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.
ಮೈಸೂರು-ಬೆಂಗಳೂರು ನಡುವಿನ ಆರು ಪಥದ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ.
ಮೈಸೂರಿನಿಂದ ಸಿಐಎಸ್ ಎಫ್ ಸಿಬ್ಬಂದಿ ಭದ್ರತೆಯಲ್ಲಿ ಕೆಲವು ಲಾರಿಗಳು ಆಗಮಿಸುತ್ತಿದ್ದವು. ಅದರಲ್ಲಿ ಒಂದು ಲಾರಿ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಿಡದಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಆರ್ ಬಿಐ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕ್ರೇನ್ ಮೂಲಕ ಕಂಟೇನರ್ ಮೇಲೆತ್ತುವ ಕೆಲಸ ನಡೆಯಲಿದೆ. ಮೈಸೂರಿನಲ್ಲಿ ಆರ್ ಬಿಐ ನೋಟು ಮುದ್ರಣಾಲಯವಿದ್ದು, ಅಲ್ಲಿಂದ ಹಣ ಬೆಂಗಳೂರಿಗೆ ತರಲಾಗುತಿತ್ತು.