ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ ಪ್ರಕರಣ | ಡೆತ್ ನೋಟ್ ನಲ್ಲಿ ಬಿಜೆಪಿ ಮುಖಂಡರ ಹೆಸರು

Prasthutha|

ಮುಂಬೈ : ಇಲ್ಲಿನ ಮರೀನ್ ಡ್ರೈವ್ ಪ್ರದೇಶದ ಹೋಟೆಲ್ ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಾದ್ರಾ ಮತ್ತು ನಗರ್ ಹವೇಲಿಯ ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಅವರ ಆತ್ಮಹತ್ಯಾ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ಬಿಜೆಪಿ ಹೆಸರು ಉಲ್ಲೇಖಗೊಂಡಿದೆ ಎನ್ನಲಾಗಿದೆ. ಸಂಸದ ಮೋಹನ್ ದೇಲ್ಕರ್ ಅವರ ಡೆತ್ ನೋಟ್ ನಲ್ಲಿ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ, ಬಿಜೆಪಿಯ ಪ್ರಫುಲ್ ಪಟೇಲ್ ಅವರ ಹೆಸರು ಉಲ್ಲೇಖಗೊಂಡಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

- Advertisement -

ಏಳು ಬಾರಿ ಸಂಸದರಾದವರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರ ವಿಚಾರ. ವಿಷಯದ ಬಗ್ಗೆ ತನಿಖೆ ನಡೆಸಲು ಅವರ ತವರು ನಗರಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ತೀವ್ರ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಪಟೇಲ್ ಅವರು ದೇಲ್ಕರ್ ಮೇಲೆ ಒತ್ತಡ ಹೇರುತ್ತಿದ್ದುದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ದೇಶಮುಖ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.

- Advertisement -

ಮುಂಬೈಯಲ್ಲಿ ತಮಗೆ ನ್ಯಾಯ ದೊರಕುವ ಭರವಸೆ ಇದ್ದುದರಿಂದ ಅವರು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರಬಹುದು ಎಂದು ಅವರು ತಿಳಿಸಿದ್ದಾರೆ.

ದೇಲ್ಕರ್ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿತ್ತು ಎಂಬುದು ಅವರ 16 ಪುಟಗಳ ಡೆತ್ ನೋಟ್ ನಿಂದ ತಿಳಿಯುತ್ತದೆ ಎಂದು ದೇಶಮುಖ್ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಿದ್ದ ಸಚಿನ್ ಸಾವಂತ್ ಹೇಳಿದ್ದಾರೆ. ಸಂಸದರ ಸಾವಿನ ಹಿಂದೆ ಬಿಜೆಪಿ ಪಾತ್ರದ ಬಗ್ಗೆ ತನಿಖೆ ನಡೆಸುವ ಭರವಸೆ ಸಚಿವರು ನೀಡಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ. ಪತ್ರದಲ್ಲಿ ಕೆಲವು ಐಪಿಎಸ್ ಹಾಗೂ ಇತರ ಅಧಿಕಾರಿಗಳ ಹೆಸರುಗಳೂ ಇದ್ದವು ಎಂಬುದು ತಿಳಿದುಬಂದಿರುವುದಾಗಿ ಅವರು ತಿಳಿಸಿದ್ದಾರೆ.

ದೇಲ್ಕರ್ ವಿರುದ್ಧ ಹಲವು ಸುಳ್ಳು ಪ್ರಕರಣಗಳು ದಾಖಲಾಗಿದ್ದವು ಮತ್ತು ಅವರ ಬೆಂಬಲಿಗರಿಗೆ ಕಿರುಕುಳ ನೀಡಲಾಗಿತ್ತು ಎಂದು ಸಾವಂತ್ ದೂರಿದ್ದಾರೆ.  

Join Whatsapp