ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರ ಅಂತ್ಯ ಸಂಸ್ಕಾರ ಸೆಪ್ಟಂಬರ್ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.
ಯೇನೆಪೋಯಾ ಆಸ್ಪತ್ರೆಯಿಂದ ಇದೀಗ ಮೃತದೇಹವನ್ನು ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ನಾಳೆ ಬೆಳಿಗ್ಗೆ ಉಡುಪಿಯ ಚರ್ಚ್ ಗೆ ಕರೆದೊಯ್ದು ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನದವರೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ತದನಂತರ ಮಂಗಳೂರು ಕಾಂಗ್ರೆಸ್ ಭವನದಲ್ಲಿ ಮಧ್ಯಾಹ್ನ 3.30 ರಿಂದ ಸಂಜೆ 5.30ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು, ಬಳಿಕ ಮತ್ತೆ ಶವಾಗಾರದಲ್ಲಿರಿಸಲಾಗುವುದು ಎಂದರು.
ಸೆಪ್ಟಂಬರ್ 15 ರಂದು ಬೆಳಿಗ್ಗೆ ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ದು ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದು. ನಂತರ ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಇನ್ನು ಗಾಂಧಿ ಕುಟುಂಬದ ಜೊತೆ ಅತ್ಯಾಪ್ತರಾಗಿ ಗುರುತಿಸಿಕೊಂಡಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸೋನಿಯಾ, ರಾಹುಲ್ ಗಾಂಧಿ ಸಹಿತ ಕೇಂದ್ರದ ಹಲವು ನಾಯಕರು ಆಗಮಿಸುವ ಸಾಧ್ಯತೆ ಇರುವುದಾಗಿ ರಮಾನಾಥ ರೈ ತಿಳಿಸಿದ್ದಾರೆ.