ರಾಜೀವ್ ಗಾಂಧಿ ಹಂತಕ ಬಿಡುಗಡೆ

Prasthutha|

ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರನ್ನು ಒಳಗೊಂಡ ಪೀಠವು, ತಮಿಳುನಾಡು ರಾಜ್ಯ ಸಚಿವ ಸಂಪುಟವು ಪೆರಾರಿವಾಲನ್ ಅವರಿಗೆ ವಿನಾಯಿತಿ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.

ಸಂವಿಧಾನದ ಅನುಚ್ಛೇದ 161 ರ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುವಲ್ಲಿ ತಮಿಳುನಾಡು ರಾಜ್ಯಪಾಲರು ಮಿತಿಮೀರಿದ ವಿಳಂಬವನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು ಎಂದು ನ್ಯಾಯಪೀಠ ಹೇಳಿದೆ

- Advertisement -

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಧನು ಎಂದು ಗುರುತಿಸಲಾದ ಮಹಿಳಾ ಆತ್ಮಾಹುತಿ ಬಾಂಬರ್ ಒಬ್ಬರು ಚುನಾವಣಾ ಜಾಥಾದಲ್ಲಿ ಹತ್ಯೆ ಮಾಡಿದ್ದರು.

ಈ ಪ್ರಕರಣದಲ್ಲಿ ಏಳು ಜನರಿಗೆ ಶಿಕ್ಷೆಯಾಗಿದೆ. ಎಲ್ಲರಿಗೂ ಮರಣದಂಡನೆ ವಿಧಿಸಲಾಗಿದ್ದರೂ, 2014 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಅವರ ಕ್ಷಮಾದಾನ ಅರ್ಜಿಗಳನ್ನು ನಿರ್ಧರಿಸುವಲ್ಲಿ ರಾಷ್ಟ್ರಪತಿಗಳು ಮಿತಿಮೀರಿದ ವಿಳಂಬವನ್ನು ಉಲ್ಲೇಖಿಸಿ ಅವರ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತು.

ಕೊಲೆಯ ಸಮಯದಲ್ಲಿ ಹತ್ತೊಂಬತ್ತು ವರ್ಷ ವಯಸ್ಸಿನ ಪೆರಾರಿವಾಲನ್ ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲು ಬಾಂಬ್ ನಲ್ಲಿ ಬ್ಯಾಟರಿಗಳನ್ನು ಖರೀದಿಸಿದ ಆರೋಪದಲ್ಲಿ ಜೈಲು ಸೇರಿದ್ದ.

1998 ರಲ್ಲಿ ಟಾಡಾ ನ್ಯಾಯಾಲಯವು ಪೆರಾರಿವಾಲನ್ ಗೆ ಮರಣದಂಡನೆ ವಿಧಿಸಿದ್ದು ಮುಂದಿನ ವರ್ಷ, ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ 2014ರಲ್ಲಿ  ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಈ ವರ್ಷದ ಮಾರ್ಚ್ ನಲ್ಲಿ, ಸುಪ್ರೀಂ ಕೋರ್ಟ್ ಪೆರಾರಿವಾಲನ್ ಗೆ ಜಾಮೀನು ಅನುಮತಿಸಿತು.

ಅನೇಕ ವರ್ಷಗಳ ಕಾಲ ಏಕಾಂತ ಬಂಧನದಲ್ಲಿದ್ದ ಪೆರಾರಿವಾಲನ್ ಜೈಲಿನಲ್ಲಿ ಉತ್ತಮ ನಡತೆಯ ದಾಖಲೆಯನ್ನು ಹೊಂದಿದ್ದು ಸುದೀರ್ಘ ಸೆರೆವಾಸದ ಸಮಯದಲ್ಲಿ ಶೈಕ್ಷಣಿಕ ಅರ್ಹತೆಗಳನ್ನು ಗಳಿಸಿದ್ದ ಎನ್ನಲಾಗಿದೆ. ಇದೀಗ 31 ವರ್ಷಗಳ ಸೆರೆವಾಸ ನಂತರ ಪೆರಾರಿವಾಲನ್ ಕಂಬಿಯ ಬಂಧನದಿಂದ ಮುಕ್ತವಾಗಿದ್ದಾನೆ.

Join Whatsapp