ರಾಜೀವ್ ಗಾಂಧಿ ಆರೋಗ್ಯ ವಿವಿ ಹಗರಣ; ಅಕ್ರಮಗಳ ಸರದಾರ ಡಾ.ರಾಮಕೃಷ್ಣ ರೆಡ್ಡಿ ವಿರುದ್ಧ ತನಿಖೆಗೆ ಆಗ್ರಹ

Prasthutha|

ಬೆಂಗಳೂರು: ರಾಜ್ಯದ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (RGUHS) ಇದೀಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿರುವ ಪ್ರೊ.ಡಾ.ರಾಮಕೃಷ್ಣ ರೆಡ್ಡಿ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ. ಈ ಬಗ್ಗೆ ದೂರುಗಳು ದಾಖಲಾಗಿದ್ದರೂ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

- Advertisement -

ರಾಮಕೃಷ್ಣ ರೆಡ್ಡಿ ಅವರು ನಡೆಸಿರುವ ಅಕ್ರಮದ ಬಗ್ಗೆ ಸ್ವತಃ ಸರ್ಕಾರದ ಒಂದು ಇಲಾಖೆಯೇ ವರದಿ ನೀಡಿದ್ದರೂ ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ತಮ್ಮ ಪುತ್ರನನ್ನು ಪ್ರವೇಶ ಪರೀಕ್ಷೆ ಇಲ್ಲದೆಯೇ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆ ಮಾಡಿರುವ ಹಾಗೂ ಪರೀಕ್ಷೆಯಲ್ಲಿ ಅಕ್ರಮವಾಗಿ ತೇರ್ಗಡೆ ಮಾಡಿಸಿರುವ ಆರೋಪಗಳಿದ್ದರೂ ಈ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿಲ್ಲ. ಅಷ್ಟೇ ಅಲ್ಲ, ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದರೂ ಯಾವುದೇ ತನಿಖೆ ಆರಂಭವಾಗದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಹಿಂದಿನ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿ ಕಾಂಗ್ರೆಸ್ ಪಕ್ಷ ಇದೀಗ, ಅಧಿಕಾರಕ್ಕೆ ಬಂದಿರುವ ಸಂದರ್ಭದಲ್ಲೇ ಸಾಮಾಜಿಕ ಹೋರಾಟಗಾರರೂ ಆದ, ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ, ಅಧ್ಯಕ್ಷ ಲೋಕೇಶ್ ರಾಮ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು ಈ ಬೆಳವಣಿಗೆ ಕುತೂಹಲದ ಕೇಂದ್ರಬಿಂದುವಾಗಿದೆ.

ಏನಿದು ಪ್ರಕರಣ..?

- Advertisement -

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ. ರಾಮಕೃಷ್ಣ ರೆಡ್ಡಿ ಅವರು 2000 ಇಸವಿಯ ಮೇ 15ರಂದು ಬೆಂಗಳೂರು ಮೆಡಿಕಲ್ ಕಾಲೇಜ್ ಆಂಡ್ ರಿಸರ್ಚ್ ಸೆಂಟರ್’ಗೆ ಪ್ರಾಧ್ಯಾಪಕರಾಗಿ ನೇಮಕಗೊಂಡು ಅನಂತರ ಸರ್ಕಾರದ ವಿವಿಧ ಹುದ್ದೆಗಳನ್ನು ಆಲಂಕಾರಿಸಿದ್ದಾರೆ. ಪ್ರಸಕ್ತ, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (RGUHS) ನಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರೂ ಇತರ ಇಲಾಖೆ/ ಪ್ರಾಧಿಕಾರಗಳಲ್ಲೂ ಹುದ್ದೆಗಳನ್ನು ಹೊಂದಿದ್ದಾರೆ. ಅಷ್ಟೇ ಆಗಿದ್ದರೆ ವಿವಾದ ಆಗುತ್ತಿರಲಿಲ್ಲವೇನೋ, ಅವರು ಹೆಚ್ಚುವರಿ ಹುದ್ದೆ ಹೊಂದಿರುವ ಪ್ರಾಧಿಕಾರಗಳಿಂದಲೂ ನಿಯಮಬಾಹಿರವಾಗಿ ವೇತನ, ಭತ್ಯೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಡಾ.ರಾಮಕೃಷ್ಣ ಅವರು ಹೊಂದಿರುವ ಹುದ್ದೆಗಳು:
• ಪ್ರಾದ್ಯಾಪಕರು: ಸಮುದಾಯ ವೈದ್ಯ ಶಾಸ್ತ್ರ ವಿಭಾಗ, ಬೆಂಗಳೂರು ಮೆಡಿಕಲ್ ಕಾಲೇಜು ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ (BMCRI)
• ಸದಸ್ಯ ಕಾರ್ಯದರ್ಶಿ: ಪ್ಯಾರಾ ಮೆಡಿಕಲ್ ಬೋರ್ಡ್
• ವಿಶೇಷಾಧಿಕಾರಿ : ಕರ್ನಾಟಕ ನರ್ಸಿಂಗ್ ಅಂಡ್ ಪ್ಯಾರಾಮೆಡಿಕಲ್ ಸೈನ್ಸಸ್ ಎಜುಕೇಷನ್ (REGULATION) ಅಥಾರಿಟಿ
• ಕುಲಸಚಿವರು : ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (RGUHS)
• ಕುಲಸಚಿವರು : ಆಡಳಿತ (ಪ್ರಭಾರ), RGUHS

ಈ ವಿವಿಧ ಪ್ರಾಧಿಕಾರಗಳಲ್ಲಿ ವಿವಿಧ ಹುದ್ದೆಗಳನ್ನು ಹೊಂದಿರುವ ಕಾರಣ ಅಲ್ಲೂ ವೇತನ ಪಡೆಯುತ್ತಿರುವುದೇ ವಿವಾದದ ಕೇಂದ್ರ ಬಿಂದುವಾಗಿದೆ. ಡಾ.ರಾಮಕೃಷ್ಣ ರೆಡ್ಡಿ ಅವರು ನಿಯಮಬಾಹಿರವಾಗಿ ವೇತನ ಪಡೆದಿದ್ದಾರೆ ಎಂಬ ಬಗ್ಗೆ THE KARNATAKA STATE ASSOCIATION OF THE MANAGEMENT OF NURSING AND ALLIED HEATH SCIENCE INSTITUTIONS ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಹರ್ಷ ರವರು ಕರ್ನಾಟಕ ಲೋಕಾಯುಕ್ತರಿಗೆ 22.08.2022ರಂದು ದೂರು ನೀಡಿದ್ದಾರೆ.

BMCRIನಲ್ಲಿ ಪ್ರಾಧ್ಯಾಪಕರಾಗಿರುವಾಗಲೇ 12.02.2019 ರಂದು ಪ್ಯಾರಾ ಮೆಡಿಕಲ್ ಬೋರ್ಡ್’ನ ಸದಸ್ಯ ಕಾರ್ಯದರ್ಶಿಯಾಗಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಇದಾದ ಬಳಿಕ ಅವರಿಗೆ ಕರ್ನಾಟಕ ನರ್ಸಿಂಗ್ ಅಂಡ್ ಪ್ಯಾರಾಮೆಡಿಕಲ್ ಸೈನ್ಸಸ್ ಎಜುಕೇಷನ್ (REGULATION) ಅಥಾರಿಟಿಯ ವಿಶೇಷಾಧಿಕಾರಿ ಹುದ್ದೆ ಹೊಂದಿದ್ದಾರೆ. 07.09.2020ರಂದು ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (RGUHS) ಕುಲಸಚಿವರ ಹುದ್ದೆಗೆ ಡಾ. ರಾಮಕೃಷ್ಣ ರೆಡ್ಡಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹುದ್ದೆಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅವರು ವಿವಿಧ ವಿಭಾಗಗಳಿಂದ ವೇತನ ಹಾಗೂ ಇತರ ಆರ್ಥಿಕ ಅನುಕೂಲತೆಗಳನ್ನು ಪಡೆದಿರುತ್ತಾರೆ. ಸರ್ಕಾರದ ನಿಯಮಾನುಸಾರ ಒಬ್ಬ ಅಧಿಕಾರಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದುವಂತಿಲ್ಲ. ಆದರೂ ಡಾ.ರಾಮಕೃಷ್ಣ ರೆಡ್ಡಿ ಅವರು ಒಂದೇ ಸಮಯದಲ್ಲಿ ನಾಲ್ಕು ಹುದ್ದೆಗಳನ್ನು ಹೊಂದುವ ಮೂಲಕ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಗಂಭೀರ ಆರೋಪ.

ಹಣ ದುರುಪಯೋಗ ಆರೋಪ:

RGUHS ಕುಲಸಚಿವರಾಗಿ ಪ್ರಭಾವಿ ಹುದ್ದೆಯಲ್ಲಿರುವ ಡಾ. ರಾಮಕೃಷ್ಣ ರೆಡ್ಡಿ ಅವರ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪವೂ ಕೇಳಿಬಂದಿದೆ. ಪ್ಯಾರಾಮೆಡಿಕಲ್ ಬೋರ್ಡ್ ಕುರಿತು GOVERNMENT AUDIT DEPARTMENT ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿರುವ ಸಂಗತಿ ದೃಢಪಟ್ಟಿದೆ.
• ಅಕ್ರಮ ಫಿಕ್ಸೆಡ್ ಡಿಪಾಸಿಟ್ ರಿನೀವಲ್ : 21 ಲಕ್ಷ
• ಅಕ್ರಮ ಫಿಕ್ಸೆಡ್ ಡಿಪಾಸಿಟ್ ರಿನೀವಲ್ : 41.96 ಕೋಟಿ
• ಅಕ್ರಮ ನಗದೀಕರಣ : 6.8 ಲಕ್ಷ
• ಸಿಬ್ಬಂದಿಗೆ ಅಕ್ರಮ ಪಾವತಿ : 69.75 ಲಕ್ಷ
• ದಾಖಲೆಗಳಿಲ್ಲದೆ ಹಣ ಬಳಕೆ : 1.41 ಲಕ್ಷ
• ಪರೀಕ್ಷಾ ಶುಲ್ಕ, ದಂಡ ವಸೂಲಿ ಹಣ : 14.02 ಕೋಟಿ
• ಕೌನ್ಸೆಲಿಂಗ್ & ಪರೀಕ್ಷೆ ಹೆಸರಲ್ಲಿ ಅಕ್ರಮ ಪಾವತಿ : 3.92 ಲಕ್ಷ
• ವಿಶೇಷ ಭತ್ಯೆ ಹಾಗೂ ಇತರ ಭತ್ಯೆ : 29.54 ಲಕ್ಷ
• ಯಾವುದೇ ಬಿಲ್ ಇಲ್ಲದೆ ಪಾವತಿ : 3.53 ಕೋಟಿ

ಪುತ್ರನಿಗಾಗಿ ಅಧಿಕಾರ ದುರುಪಯೋಗ:

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (RGUHS)ನ ಕುಲಸಚಿವರಾಗಿರುವ ಡಾ.ರಾಮಕೃಷ್ಣ ಅವರು ತಮ್ಮ ಪುತ್ರ ತರುಣ್ ರೆಡ್ಡಿಗೆ ಅಕ್ರಮವಾಗಿ ವೈದ್ಯಕೀಯ ಶಿಕ್ಷಣದ ಪ್ರವೇಶ ಕಲ್ಪಿಸುವ ಸಂಬಂಧ ಅಧಿಕಾರ ದುರುಪಯೋಗ ಮಾಡಿರುವ ಆರೋಪವೂ ಕೇಳಿಬಂದಿದೆ. ಪ್ರಸ್ತುತ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿರುವ ತರುಣ್ ರೆಡ್ಡಿ, ಪ್ರವೇಶ ಪರೀಕ್ಷೆ ಪಾಸಾಗದೆ ಪ್ರವೇಶ ಪಡೆದಿದ್ದಾರೆ. CET ಪರೀಕ್ಷೆ ಬರೆಯದೆ 2018-19ರಲ್ಲಿ ಸಪ್ತಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ನಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದರು. ಆ ಸಂದರ್ಭದಲ್ಲಿ RGUHS 129 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮೋದನೆ ನೀಡಿತ್ತಾದರೂ ಅದರಲ್ಲಿ ತರುಣ್ ರೆಡ್ಡಿ ಹೆಸರು ಇರಲಿಲ್ಲ. ಆ ವೇಳೆ, RGUHS ಕುಲಸಚಿವರಾಗಿರುವ ರಾಮಕೃಷ್ಣ ರೆಡ್ಡಿಯವರು ತಮ್ಮ ಪುತ್ರನಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 21 ವಿದ್ಯಾರ್ಥಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ಮಾಡಿದ್ದಾರೆ ಎಂದು ಲೋಕಾಯುಕ್ತರಿಗೆ ಸಲ್ಲಿಕೆಯಾಗಿರುವ ಒಂದು ದೂರಿನಲ್ಲಿ ಉಲ್ಲೇಖವಿದೆ.

ನ್ಯಾಷನಲ್ ಮೆಡಿಕಲ್ ಕಮಿಷನ್ ಆದೇಶಕ್ಕೂ ಬೆಲೆ ಇಲ್ಲ?

ಈ ಆರೋಪಗಳ ಬಗ್ಗೆ,THE KARNATAKA STATE ASSOCIATION OF THE MANAGEMENT OF NURSING AND ALLIED HEATH SCIENCE INSTITUTIONS ಪ್ರಧಾನ ಕಾರ್ಯದರ್ಶಿ ಶ್ರೀ ಹರ್ಷ ಆವರು 01-08-2022ರಂದು ನ್ಯಾಷನಲ್ ಮೆಡಿಕಲ್ ಕಮಿಷನ್ ರವರಿಗೆ ದೂರು ನೀಡಿದ್ದು,  ಇದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಷನಲ್ ಮೆಡಿಕಲ್ ಕಮಿಷನ್ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ದಿನಾಂಕ: 27.10.2022 ರಂದು ಆದೇಶ ನೀಡಿತ್ತು.  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ, ಆರೋಗ್ಯ- ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಬಿ.ಎಲ್.ಸುಜಾತ ರಾಥೋಡ್, ರಾಜೀವ್ ಗಾಂಧಿ ಯೂನಿವರ್ಸಿಟಿ  ಆಫ್ ಹೆಲ್ತ್ ಸೈನ್ಸಸ್ ಕುಲಪತಿ ಡಾ.ಎಂ.ಕೆ. ರಮೇಶ್, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರನ್ನೊಳಗೊಂಡ ಸಮಿತಿಗೆ ನ್ಯಾಷನಲ್ ಮೆಡಿಕಲ್ ಕಮಿಷನ್ ಈ ಆದೇಶವನ್ನು ನೀಡಿತ್ತು. ಆದರೆ ಡಾ.ರಾಮಕೃಷ್ಣ ರೆಡ್ಡಿ ರವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಸೂಕ್ತ ರೀತಿಯ ತನಿಖೆ ನಡೆದಿರುವುದಿಲ್ಲ ಎಂದು ಲೋಕೇಶ್ ರಾಮ್ ಅವರು ಈ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಡಾ.ರಾಮಕೃಷ್ಣ ರೆಡ್ಡಿ ಅವರು ಪ್ರಭಾವಿ ಅಧಿಕಾರಿಯಾಗಿದ್ದರು. ಹಾಗಾಗಿ ಈ ಅಕ್ರಮಗಳನ್ನು ಬಹಿರಂಗಪಡಿಸಲು ಜನರು ಭಯಪಡುತ್ತಿದ್ದರು. ಇದೀಗ ಸರ್ಕಾರ ಬದಲಾಗಿರುವುದರಿಂದ ಅವರ ಅಕ್ರಮಗಳ ವಿರುದ್ಧ ಸರ್ಕಾರಕ್ಕೆ ಮತ್ತೊಮ್ಮೆ ದೂರು ಸಲ್ಲಿಕೆಯಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಸಂಕಲ್ಪದೊಂದಿಗೆ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದೀಗ ಡಾ.ರಾಮಕೃಷ್ಣ ರೆಡ್ಡಿ ವಿಚಾರದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದೇ ಕುತೂಹಲ.



Join Whatsapp