ED ವಿಚಾರಣೆಗೆ ಹೆದರುವುದಿಲ್ಲ, ಬೆದರುವುದಿಲ್ಲ: ರಾಹುಲ್ ಗಾಂಧಿ ಗುಡುಗು

Prasthutha|


ನವದೆಹಲಿ: ಜಾರಿ ನಿರ್ದೇಶನಾಲಯ ಎಷ್ಟೇ ವಿಚಾರಣೆ ನಡೆಸಿದರೂ ನನ್ನಲ್ಲಿ ಯಾವುದೇ ವ್ಯತ್ಯಾಸ ಉಂಟಾಗದು. ಇಡಿ ವಿಚಾರಣೆಗೆ ಹೆದರುವುದಿಲ್ಲ ಮತ್ತು ಬೆದರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.

- Advertisement -


ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇ.ಡಿ. ಮೂಲಕ ಕಿರುಕುಳ ನೀಡುತ್ತಿರುವ ಹಾಗೂ ಅಗ್ನಿಪಥ್ ಯೋಜನೆ ಮೂಲಕ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಬೆಂಕಿಯಿಡಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಎಐಸಿಸಿ ಕಚೇರಿ ಆವರಣದಲ್ಲಿ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
ಕೆಲವು ದಿನಗಳ ಹಿಂದೆ ನನ್ನನ್ನು ಇ.ಡಿ ಕಚೇರಿಯವರು ಕರೆಸಿಕೊಂಡು ಸಣ್ಣ ಕೋಣೆಯಲ್ಲಿ ಇರಿಸಿದ್ದರು. ಈ ಕೊಠಡಿ 12 ಅಡಿ ಉದ್ದ ಅಗಲ ಇರಬಹುದಷ್ಟೇ. ಮೂವರು ಇ.ಡಿ ಅಧಿಕಾರಿಗಳು ಕುಳಿತುಕೊಂಡಿದ್ದರು, ಒಬ್ಬರು ಹೊರಗೆ ನಿಂತಿದ್ದರು. ನಾನು ಅವರ ಜೊತೆ ಕೋಣೆಯಲ್ಲಿ ಕೂತಿದ್ದೆ. ಮೊದಲ ದಿನ ಸಂಜೆವರೆಗೂ ನಾನು ಕೂತಲ್ಲಿಂದ ಎದ್ದಿರಲಿಲ್ಲ. ಇ.ಡಿ ಅಧಿಕಾರಿಗಳು ಆಗಾಗ ಎದ್ದು ಹೋಗುತ್ತಿದ್ದರು. ಅವರು ಹಿರಿಯ ಅಧಿಕಾರಿಗಳು ನೀಡುವ ಸೂಚನೆಗಳಿಗಾಗಿ ಕಾಯುತ್ತಿದ್ದರು. ಅವತ್ತು ರಾತ್ರಿ 10.30ರ ಸುಮಾರಿಗೆ, ರಾಹುಲ್ ಜೀ, ನೀವು ಬೆಳಗ್ಗಿನಿಂದ ಇಲ್ಲಿ ಕೂತಿದ್ದೀರಿ, ನೀವು ಕುರ್ಚಿಯಿಂದ ಎದ್ದೇಳಲಿಲ್ಲ, ಸುಮಾರು 11 ತಾಸುಗಳ ಕಾಲ ನೀವು ಸ್ವಲ್ಪವೂ ಆಯಾಸಗೊಂಡಿಲ್ಲ. ಇದರ ರಹಸ್ಯ ಏನು ಎಂದು ಇಡಿ ಅಧಿಕಾರಿಗಳು ಕೇಳಿದರು. ನಾನು ವಿಪಸ್ಸನ ಧ್ಯಾನ ಮಾಡುತ್ತಿದ್ದೇನೆ ಎಂದು ಹೇಳಿದೆ.

ಆರೇಳೆಂಟು ಗಂಟೆ ಬೇಕಾದರೂ ಕೂರಿಸಿದರೂ ನನಗೇನು ಆಗಲ್ಲ ಎಂದು ಅವರಿಗೆ ಹೇಳಿದೆ. ಆಗ ವಿಪಸ್ಸನದ ಬಗ್ಗೆ ಅಧಿಕಾರಿಗಳು ಕೇಳಿ ತಿಳಿದುಕೊಂಡರು. ಆ ವೇಳೆಯೂ ನಾನು ಆಯಾಸಗೊಳ್ಳದೇ ಇರಲು ಕಾರಣ ಏನು ಎಂಬ ಸತ್ಯವನ್ನು ಅವರಿಗೆ ಹೇಳಿಲ್ಲ. ಸತ್ಯವಾದ ಕಾರಣ ಏನೆಂದು ನಿಮಗೆ ಗೊತ್ತಾ? ಸತ್ಯ ಏನೆಂದರೆ ಆ ಕೋಣೆಯಲ್ಲಿ ರಾಹುಲ್ ಗಾಂಧಿ ಒಬ್ಬನೇ ಕೂತಿರಲಿಲ್ಲ. ಆ ಕೋಣೆಯಲ್ಲಿ ರಾಹುಲ್ ಗಾಂಧಿಯ ಜೊತೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಕೂಡ ಕೂತುಕೊಂಡಿದ್ದರು ಎಂದು ಇಡಿ ವಿಚಾರಣೆಯ ಬಗ್ಗೆ ರಾಹುಲ್ ವಿವರಿಸಿದರು.

- Advertisement -


ಓರ್ವ ವ್ಯಕ್ತಿಯನ್ನು ಆಯಾಸಗೊಳಿಸಲು ನಿಮ್ಮಿಂದ ಸಾಧ್ಯ ಇರಬಹುದು, ಆದ್ರೆ ಕಾಂಗ್ರೆಸ್ ಪಕ್ಷದ ಕೋಟ್ಯಂತರ ಕಾರ್ಯಕರ್ತರನ್ನು ನಾಯಕರನ್ನು ಆಯಾಸಗೊಳಿಸಲು ನಿಮ್ಮಿಂದ ಸಾಧ್ಯವಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಷ್ಟೇ ಆ ಕೋಣೆಯಲ್ಲಿ ಇದ್ದಿದ್ದಲ್ಲ, ಆ ಕೋಣೆಯಲ್ಲಿ ಈ ಸರ್ಕಾರದ ವಿರುದ್ಧ ಭಯವಿಲ್ಲದೇ ಹೋರಾಡುತ್ತಿರುವ ಪ್ರತಿಯೊಬ್ಬರೂ ಕೂಡ ಕೂತಿದ್ದರು. ಅವರ್ಯಾರನ್ನೂ ಇ.ಡಿಯವರು ಆಹ್ವಾನ ಕೊಟ್ಟು ಕರೆಸಿರಲಿಲ್ಲ. ಆದರೂ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುತ್ತಿರುವ ಪ್ರತಿಯೊಬ್ಬರು ಸಹ ಬಂದು ನನ್ನ ಜೊತೆ ಕೂತಿದ್ದರು. ಹಾಗಿರುವಾಗ ನಾನು ಆಯಾಸಗೊಳ್ಳಲು ಹೇಗೆ ಸಾಧ್ಯ? ಎಂದು ರಾಹುಲ್ ಪ್ರಶ್ನಿಸಿದರು.


ನೀವು ಇಷ್ಟೊಂದು ತಾಳ್ಮೆಯಿಂದ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀರಿ, ಪ್ರತಿಯೊಂದು ಪ್ರಶ್ನೆಯನ್ನು ಕೇಳಿಸಿಕೊಂಡು ಉತ್ತರ ಕೊಟ್ಟಿದ್ದೀರಿ, ಬಳಿಕ ಪರಿಶೀಲನೆ ಕೂಡ ಮಾಡಿದ್ದೀರಿ. ಇಷ್ಟೊಂದು ತಾಳ್ಮೆ ನಿಮಗೆ ಎಲ್ಲಿಂದ ಸಿಕ್ಕಿದೆ ಎಂದು ಅಧಿಕಾರಿಗಳು ನನ್ನೊಂದಿಗೆ ಕೇಳಿದರು. ಆದರೆ ತಾಳ್ಮೆಯ ರಹಸ್ಯ ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ತಾಳ್ಮೆ ಎಲ್ಲಿಂದ ಬಂತು ಎಂದು ನಿಮಗೆ ಗೊತ್ತಾ? ನಾನು 2004ರಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ತಾಳ್ಮೆ ಬರದೆ ಮತ್ತೇನೆ ಬರುತ್ತದೆ ಹೇಳಿ? ಈ ಮಾತನ್ನು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರಿಗೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಇ.ಡಿ ವಿಚಾರಣೆಯಿಂದ ನನ್ನಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ, ಆಗುವುದೂ ಇಲ್ಲ. ನನ್ನನ್ನು ವಿಚಾರಣೆ ಮಾಡಿದ್ದ ಇ.ಡಿ ಅಧಿಕಾರಿಗಳಿಗೂ ಅದು ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಒತ್ತಡ ಹಾಕಲು ಅವರನ್ನು ಬೆದರಿಸಲು ಸಾಧ್ಯವಿಲ್ಲ. ಯಾಕಂದರೆ ಕಾಂಗ್ರೆಸ್ ಪಕ್ಷ ಸತ್ಯದ ಪರ ಹೋರಾಡುತ್ತಿದೆ. ಸತ್ಯದಲ್ಲಿ ತಾಳ್ಮೆಗೆ ಕೊರತೆಯಾಗಲ್ಲ. ಸತ್ಯಕ್ಕೆ ಯಾವತ್ತೂ ಸುಸ್ತಾಗಲ್ಲ, ಆದರೆ ಸುಳ್ಳುಗಳು ಖಂಡಿತವಾಗಿಯೂ ಆಯಾಸಗೊಳ್ಳಲಿದೆ. ಸತ್ಯ ಯಾವತ್ತೂ ಸುಸ್ತಾಗಲ್ಲ, ಸತ್ಯದಲ್ಲಿ ತಾಳ್ಮೆಗೆ ಯಾವತ್ತೂ ಕೊರತೆಯಾಗಲ್ಲ. ನಾನು ನಿಮಗೆ ಹೃದಯದಿಂದ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.

Join Whatsapp