ಮಂಗಳೂರು : ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿಯವರಿಗೆ ಮಂಗಳೂರಿನ ಅಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಪ್ರಕರಣ 2008ಕ್ಕೆ ಸಂಬಂಧಿಸಿದ್ದು, ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ್ ಎಂಬವರು ಜಯಂತ್ ಶೆಟ್ಟಿಯವರ ವಿರುದ್ಧ ಖಾಸಗಿ ದಾವೆ ಹೂಡಿದ್ದರು.
ಈ ಪ್ರಕರಣದಲ್ಲಿ ಕಬೀರ್ ಉಳ್ಳಾಲ ಅವರು ಇಬ್ಬರು ಪೊಲೀಸರ ವಿರುದ್ಧ ದಾವೆ ಹೂಡಿದ್ದರು. 2008ರ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ರೌಡಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಜಯಂತ್ ಶೆಟ್ಟಿ ಮತ್ತು ಉಳ್ಳಾಲ ಪಿಎಸ್ಐ ಆಗಿದ್ದ ಶಿವಪ್ರಕಾಶ್ ವಿರುದ್ಧವೂ ಖಾಸಗಿ ಪ್ರಕರಣ ದಾಖಲಿಸಿದ್ದರು. ಇದೀಗ ನಾಯಾಯಲಯದ ವಿಚಾರಣೆಗೆ ಸತತವಾಗಿ ಹಾಜರಾಗದೇ ತಪ್ಪಿಸಿಕೊಂಡಿದ್ದ ಜಯಂತ್ ಶೆಟ್ಟಿಯವರ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.
2008 ರ ವೇಳೆ ಜಯಂತ್ ಶೆಟ್ಟಿ ಮತ್ತು ಶಿವಪ್ರಕಾಶ್ ತಂಡ ಉಳ್ಳಾಲ ಪರಿಸರದಲ್ಲಿ ದಾಳಿ ನಡೆಸಿ ಹಲವು ಅಮಾಯಕ ಯುವಕರನ್ನು ಗುರಿಪಡಿಸಿ ಬಂಧಿಸಿದ್ದರು. ಪೊಲೀಸರ ದೌರ್ಜನ್ಯದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರನಾಗಿದ್ದ ಕಬೀರ್ ಉಳ್ಳಾಲ್ ಅವರು ಕಾನೂನು ಹೋರಾಟ ನಡೆಸಿದ್ದರು. ಈ ಕಾರಣಕ್ಕಾಗಿ ಅವರನ್ನು ಪೊಲೀಸ್ ತಂಡ ಟಾರ್ಗೆಟ್ ಮಾಡಿತ್ತು ಎನ್ನಲಾಗಿದೆ. ಇದೇ ಸಮಯದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಕಬೀರ್ ಉಳ್ಳಾಲ್ ಅವರನ್ನು ಕಾರಣವಿಲ್ಲದೆ ಬಂಧಿಸಿ ಬಳ್ಳಾರಿ ಜೈಲಿಗೆ ತಳ್ಳಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡು ಈ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಬೀರ್ ಉಳ್ಳಾಲ್ ಅವರು ಖಾಸಗಿ ದಾವೆ ಹೂಡಿದ್ದರು.
ಕೋರ್ಟಿನಲ್ಲಿ ಸತತ ವಿಚಾರಣೆಯ ಬಳಿಕ ಪಿಎಸ್ಐ ಆಗಿದ್ದ ಶಿವಪ್ರಕಾಶ್ ಜಾಮೀನು ಪಡೆದಿದ್ದರು. ಆದರೆ ಜಯಂತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಪದೇ ಪದೇ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರೂ, ಹಾಜರಾಗದೇ ಇರುವುದಕ್ಕಾಗಿ ಜೂನ್ 20ರಂದು ಮಂಗಳೂರಿನ ನ್ಯಾಯಾಲಯ ಜಯಂತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ ಎಂದು ಕಬೀರ್ ಉಳ್ಳಾಲ್ ಅವರು ಮಾಹಿತಿ ನೀಡಿದ್ದಾರೆ. ಕಬೀರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಎಸ್.ಎಸ್. ಖಾಝಿ ಅವರು ನ್ಯಾಯಾಲಯದಲ್ಲಿವಾದಿಸಿದ್ದರು.