ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್ ಟಿಎಸ್ ಸಿ-2 ನ್ಯಾಯಾಲಯವು 10 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಅಬ್ದುಲ್ ಲತೀಫ್ (45) ಶಿಕ್ಷೆಗೊಳಗಾದ ಆರೋಪಿ ಎಂದು ತಿಳಿದು ಬಂದಿದೆ.
ಪ್ರಕರಣ ಏನು?
ಅಬ್ದುಲ್ ಲತೀಫ್ ಕೈಕಂಬದಲ್ಲಿ ಬಟ್ಟೆ ಅಂಗಡಿಯನ್ನು ಹೊಂದಿದ್ದ. ಈತನ ಅಂಗಡಿಗೆ ಬಾಲಕಿ ಕೆಲಸಕ್ಕೆ ಸೇರಿದ್ದಳು. 2017ರ ಎಪ್ರಿಲ್ ನಲ್ಲಿ ಮಧ್ಯಾಹ್ನ ವೇಳೆ ಬಾಲಕಿ ತಲೆನೋವೆಂದು ಹೇಳಿದಾಗ ಔಷಧಿ ತರುವುದಾಗಿ ಹೇಳಿದ ಅಬ್ದುಲ್ ಲತೀಫ್ ಯಾವುದೋ ಒಂದು ಮಾತ್ರೆ ಮತ್ತು ಜ್ಯೂಸ್ ತಂದುಕೊಟ್ಟಿದ್ದ ಎಂದು ಆರೋಪಿಸಲಾಗಿತ್ತು. ಬಾಲಕಿಯು ಆ ಮಾತ್ರೆಯನ್ನು ಸೇವಿಸಿ ಮತ್ತು ಜ್ಯೂಸ್ ಕುಡಿದ ಬಳಿಕ ಪ್ರಜ್ಞೆ ತಪ್ಪಿದ್ದಳು. ಆ ಸಂದರ್ಭ ಆರೋಪಿಯು ಅತ್ಯಾಚಾರ ಎಸಗಿದ್ದ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳಬಾರದು. ಎಲ್ಲವನ್ನೂ ವೀಡಿಯೋ ಮಾಡಿದ್ದೇನೆ. ಹೇಳಿದರೆ ಅದನ್ನು ವೈರಲ್ ಮಾಡುತ್ತೇನೆ. ನಾನು ಹೇಳಿದಂತೆ ಮುಂದೆಯೂ ಕೇಳಬೇಕು ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಆ ಬಳಿಕವೂ ಆರೋಪಿ ಬಾಲಕಿಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. 2017 ರಲ್ಲಿ ಬಜ್ಪೆ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಪೊಲೀಸರು ಡಿಎನ್ ಎ ಪರೀಕ್ಷೆಗೆ ಒಳಪಡಿಸಿದಾಗ ಅಬ್ದುಲ್ ಲತೀಫ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್ ಟಿಎಸ್ ಸಿ -2 ನ್ಯಾಯಾಲಯವು 10 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.