ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಟೀಕೆಗೆ ಆಕ್ರೋಶ | ಮಾದಕ ದ್ರವ್ಯ ಪೋಷಕರು ಮೋದಿ, ಅಮಿತ್ ಶಾ: ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ

Prasthutha|

ಗುಜರಾತ್ ಮಾದಕ ದ್ರವ್ಯದ ತಾಣ

- Advertisement -

ಬೆಂಗಳೂರು; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್, ಪೆಡ್ಲರ್ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿರುವ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ನಿಜವಾದ ಡ್ರಗ್ ಡೀಲರ್, ಡ್ರಗ್ ಪೆಡ್ಲರ್ ಎಂದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಟೀಕಿಸಿದ್ದಾರೆ.


ರಾಹುಲ್ ಗಾಂಧಿ ಅವರ ಮೇಲೆ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಗುಜರಾತ್ ನ ಅದಾನಿ ವಿಮಾನ ನಿಲ್ದಾಣದಲ್ಲಿ ಮೂರು ಸಾವಿರ ಕೆ.ಜಿ. ಹೆರಾಯಿನ್ ಪತ್ತೆಯಾಗಿದ್ದು, ಈ ಬಗ್ಗೆ ಯಾವುದಾದರೂ ತನಿಖೆ ನಡೆಯುತ್ತಿದೆಯೇ?. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ. ಗುಜರಾತ್ ಅತಿ ಹೆಚ್ಚು ಮಂದಿ ಡ್ರಗ್ ಪೆಡ್ಲರ್ ಗಳ ತಾಣವಾಗಿದೆ. ಇವರನ್ನು ದೊಡ್ಡ ದೊಡ್ಡ ರಾಜಕಾರಣಿಗಳು ಪೋಷಿಸುತ್ತಿದ್ದಾರೆ. ತಮ್ಮ ರಾಜ್ಯದ ಈ ಅಕ್ರಮ ವ್ಯವಹಾರದ ಬಗ್ಗೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -


ಅದಾನಿ ಏರ್ ಪೋರ್ಟ್ ನಲ್ಲಿ ದೊರೆತ ಮಾದಕ ದ್ರವ್ಯದ ಬಗ್ಗೆ ಬಿಜೆಪಿ ಮಟ್ಟದಲ್ಲಿ ಏನಾದರೂ ಚರ್ಚೆಯಾಗಿದೆಯೇ?. ಯಾವುದಾದರೂ ಮಾಹಿತಿ ಬಿಡುಗಡೆ ಮಾಡಲಾಗಿದೆಯೇ?. ಗುಜರಾತ್ ನಲ್ಲಿ ಅತಿ ಹೆಚ್ಚು ಮಾದಕ ದ್ರವ್ಯ ದೊರೆಯುತ್ತಿದೆ. ನಿಷೇಧಿತ ಕ್ಯಾಟಮೈನ್ ಮಾದಕ ವಸ್ತು ವಿಶ್ವದಲ್ಲಿಯೇ ಅತಿ ಹೆಚ್ಚು ದೊರೆಯುವ ತಾಣ ಎಂದರೆ ಅದು ಗುಜರಾತ್, ಹೀಗಿರುವಾಗ ರಾಹುಲ್ ಗಾಂಧಿ ಅವರ ಮೇಲೆ ಯಾವ ಉದ್ದೇಶದಿಂದ ಟೀಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಗುಜರಾತ್ ನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದ್ದರೂ, ಕಾಳಸಂತೆಯಲ್ಲಿ ಅತಿ ಹೆಚ್ಚು ಮದ್ಯ ಸಿಗುತ್ತಿದೆ. ಮದ್ಯ ಮಾರಾಟ ತಡೆಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ?. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಅರ್ಥಮಾಡಿಕೊಂಡು ಇನ್ನೊಬ್ಬರ ಬಗ್ಗೆ ಸದಾಶಯದಿಂದ ಮಾತನಾಡಬೇಕು. ಕಟೀಲ್ ಅವರದ್ದು ಅತ್ಯಂತ ಕೀಳು ಅಭಿರುಚಿಯ ಮತ್ತು ಹತಾಶೆಯ ಹೇಳಿಕೆಯಾಗಿದೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.


ಅದಾನಿ ವಿಮಾನ ನಿಲ್ದಾಣದಲ್ಲಿ ಮೂರು ಸಾವಿರ ಕೆ.ಜಿಗೂ ಹೆಚ್ಚು ಮಾದಕ ದ್ರವ್ಯ ಪತ್ತೆಯಾಗಿತ್ತು. ಈ ಬಗ್ಗೆ ಯಾವ ತನಿಖೆ ನಡೆಯುತ್ತಿದೆ. ಗುಜರಾತ್ ಮಾದಕ ದ್ರವ್ಯದ ತಾಣವಾಗಿದ್ದು, ಇದು ಗುಜರಾತ್ ಮಾದರಿಯ ಆಡಳಿತವೇ?. ಗಾಂಧಿ ನಾಡು ಗುಜರಾತ್ ನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದ್ದರೂ ಸಹ ಕಾಳಸಂತೆಯಲ್ಲಿ ಅತಿ ಹೆಚ್ಚು ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ. ಇದನ್ನು ಮೊದಲು ನಿಯಂತ್ರಿಸಲು ಬಿಜೆಪಿ ನಾಯಕರು ಮುಂದಾಗಲಿ. ನಂತರ ಇನ್ನೊಬ್ಬರ ಬಗ್ಗೆ ಟೀಕಿಸಲಿ ಎಂದಿದ್ದಾರೆ.


ನಳೀನ್ ಕುಮಾರ್ ಕಟೀಲ್ ಅವರನ್ನು ನಿಮ್ಹಾನ್ಸ್ ಗೆ ಸೇರಿಸಲು ನಮ್ಮ ಪಕ್ಷದಿಂದ ಈಗಾಗಲೇ ಆಂಬುಲೆನ್ಸ್ ಅನ್ನು ಬಿಜೆಪಿ ಕಚೇರಿಗೆ ಕಳುಹಿಸಲಾಗಿದೆ. ಇದೇ ರೀತಿ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಮತ್ತೊರ್ವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಮ್ಹಾನ್ಸ್ ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು. ಯತ್ನಾಳ್ ಅವರಿಗೂ ಸಹ ಮಾನಸಿಕ ಚಿಕಿತ್ಸೆ ಕೊಡಿಸುತ್ತೇವೆ. ನಳೀನ್ ಕುಮಾರ್ ಕಟೀಲ್ ಹಾಗೂ ಬಸನಗೌಡ ಪಾಟೀಲ್ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಬಿಜೆಪಿ ನಾಯಕರ ಇಂತಹ ಧೋರಣೆಯನ್ನು ಯುವ ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Join Whatsapp