754 ಕೋಟಿ ರೂ.ಗಳ ಕೆರೆ ತುಂಬಿಸುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ: ಬೊಮ್ಮಾಯಿ

Prasthutha|

ಚಾಮರಾಜನಗರ: ಚಾಮರಾಜನಗರ ಮತ್ತು ಗುಂಡ್ಲುಪೇಟೆಯ 754 ಕೋಟಿ ರೂ.ಗಳ ಯೋಜನೆಯ ಎರಡು ಪ್ರಸ್ತಾವನೆಗಳನ್ನು ಮಂಡಳಿ ಸಭೆಗೆ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಅವರು ಇಂದು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ತಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು.

ಸಮಗ್ರ ಜಿಲ್ಲೆಯ ಕೆರೆಗಳನ್ನು ತುಂಬಿಸಲು 1100 ಕೋಟಿ ರೂ.ಗಳ ಡಿಪಿಆರ್ ಸಿದ್ಧವಾಗಿದ್ದು, ಇದಕ್ಕೆ ಅನುಮೋದನೆಯಾದರೆ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆಯಾಗಲಿದ್ದು, ಈ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.  ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇಡೀ ಜಿಲ್ಲೆಯ ಕೆರೆ ತುಂಬಿಸುವ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ನೀರಾವರಿಯ ಐದು ಯೋಜನೆಗಳಿಗೆ ಮಂಜೂರಾತಿ ನೀಡಿ 694 ಕೋಟಿ ರೂ.ಗಳ ವೆಚ್ಚದಲ್ಲಿ 63 ಕೆರೆಗಳನ್ನು 2 ಯೋಜನೆಗಳಲ್ಲಿ ಪೂರ್ಣಗೊಳಿಸಿದ್ದು, ಗುಂಡ್ಲುಪೇಟೆ, ಮಟೇಹಳ್ಳ, ಕುಡ್ತರಿಹಳ್ಳ ಸೇರಿದಂತೆ ಇನ್ನೂ 3 ಯೋಜನೆಗಳನ್ನು 121 ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದರು.

- Advertisement -

ಚಾಮರಾಜನಗರ ಕೈಗಾರಿಕಾ ಟೌನ್ ಶಿಪ್ :

ನೀರಾವರಿ ಯೋಜನೆಗಳಿಂದ ಅಂತರ್ಜಲ ಹೆಚ್ಚಳವಾಗಿ, ಕೃಷಿ, ಕುಡಿಯುವ ನೀರು ಇವುಗಳಿಗೆ ಸಹಕಾರಿಯಾಗಲಿದೆ.  ಇದರಿಂದ ಇಲ್ಲಿ ಜನವಸತಿ ಆರೋಗ್ಯವಂತರಾಗುತ್ತಾರೆ. ಚಾಮರಾಜನಗರ ಜಿಲ್ಲೆಯನ್ನು ಕೈಗಾರಿಕಾ ಜಿಲ್ಲೆಯಾಗಿ ಪರಿವರ್ತಿಸಲು ಸಾಧ್ಯವಿದೆ.  ಈಗಾಗಲೇ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.   ಜಿಲ್ಲೆಯಲ್ಲಿ ಕೈಗಾರಿಕಾ ಟೌನ್‍ಶಿಪ್ ಸ್ಥಾಪಿಸಿ, ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳನ್ನು ಮಂಜೂರಾತಿ ಮಾಡಲಾಗುವುದು. ಯುವಕರ ಕೈಗೆ ಕೆಲಸ ಸಿಗಬೇಕು ಎಂಬ ಕಾರಣದಿಂದ ಚಾಮರಾಜನಗರಕ್ಕೆ ಈ  ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದರು. 

ದುಡಿಯುವ ವರ್ಗಕ್ಕೆ ಮಹತ್ವ :

ದುಡಿಯುವ ವರ್ಗಕ್ಕೆ ಅತ್ಯಂತ ಮಹತ್ವ ಕೊಡುತ್ತಿರುವ ಮೊಟ್ಟ ಮೊದಲು ಸರ್ಕಾರ ನಮ್ಮದು. ರೈತ ವಿದ್ಯಾ ನಿಧಿ, ಕುಶಲಕರ್ಮಿಗಳಿಗೆ ಸಹಾಯಧನ ಯೋಜನೆ, ಸ್ತ್ರೀ ಸಾಮಥ್ರ್ಯ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ರಾಜ್ಯದ ಜನ ಹಾಗೂ ಚಾಮರಾಜನಗರ ಜಿಲ್ಲೆಯು  ಆರ್ಥಿಕವಾಗಿ ಸಲರಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ಅಭಿವೃದ್ಧಿಯಲ್ಲಿ ಪಕ್ಷಬೇಧವಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕ ಸಾಮರಸ್ಯ ಮೂಡಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿದೆ.  ಜನಶಕ್ತಿಯ ಪರವಾಗಿ ರಾಜಶಕ್ತಿ ಸದಾ ಇರಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.  ಇದೊಂದು ಸಾಮಾಜಿಕ ಬದಲಾವಣೆಯ, ವೈಚಾರಿಕ ಕ್ರಾಂತಿಯಾಗಲಿದೆ. ಜನರಿಗೆ ನ್ಯಾಯ ಸಿಗಬೇಕಾಗಿರುವುದು ಮುಖ್ಯ. ಅಂತಿಮವಾಗಿ ಸತ್ಯವೇ ಗೆಲ್ಲಲಿದೆ ಎಂದರು.

1048 ಕೋಟಿ ರೂ.ಗಳ ಯೋಜನೆಗಳು :

ಅಮೃತ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ 205 ಕೋಟಿ ರೂ., ಹನೂರು 435, ಕೊಳ್ಳೇಗಾಲಕ್ಕೆ 116 ಕೋಟಿ ಸೇರಿದಂತೆ ಒಟ್ಟು  1048 ಕೋಟಿ ರೂ.ಗಳ ಯೋಜನೆಗಳನ್ನು  ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಚಾಮರಾಜನಗರದ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳು:

ಚಾಮರಾಜನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಎಂದು ಪರಿಗಣಿಸಲಾಗಿದೆ. ಇಲ್ಲಿ ಆರೋಗ್ಯ, ಮಹಿಳಾ  ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣದ ಬಗ್ಗೆ ಗಮನಹರಿಸಲಾಗಿದೆ. ಒಂದೇ ವರ್ಷದಲ್ಲಿ ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 100 ಪಿಹೆಚ್ ಸಿ ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಚಿಕಿತ್ಸೆ, ಕನ್ನಡಕ, ಶ್ರವಣ ಸಾಧನಗಳನ್ನು ಒದಗಿಸಲಾಗುತ್ತಿದೆ. ಡಯಾಲಿಸಿಸ್ ಸೈಕಲ್ಸ್ ಹೆಚ್ಚಳ, ಕ್ಯಾನ್ಸರ್ ಚಿಕಿತ್ಸೆ ಕೇಂದ್ರಗಳ ಹೆಚ್ಚಳ  ಮಾಡಲಾಗಿದೆ. ಆರೋಗ್ಯ  ಅಭಿವೃದ್ಧಿ ಮತ್ತು ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗುತ್ತಿದೆ. ಕೃಷಿಕರು ಆರ್ಥಿಕವಾಗಿ ಸದೃಢರಾಗಬೇಕು. ಶೂನ್ಯಬಡ್ಡಿದರದಲ್ಲಿ ಕೃಷಿ ಸಾಲ, ಯಶಸ್ವಿನಿ ಯೋಜನೆ ಪುನರಾರಂಭ, 600 ಕೋಟಿ ರೂ. ವೆಚ್ಚದಲ್ಲಿ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಜಾರಿ ಮಾಡಲಾಗಿದೆ. ಕುಂಬಾರರು, ಕಮ್ಮಾರ ಸೇರಿದಂತೆ ಕುಲಕಸುಬುದಾರರಿಗೆ ಧನಸಹಾಯ ಮಾಡುವ ಯೋಜನೆ ಜಾರಿ ಮಾಡಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗಳಿಂದ 5 ಲಕ್ಷ ಮಹಿಳೆಯರಿಗೆ ಹಾಗೂ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.

ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಶಾಸಕರಾದ ಸಿ.ಪುಟ್ಟರಂಗ ಶೆಟ್ಟಿ, ಎಸ್.ನಿರಂಜನ ಕುಮಾರ್, ಮರಿತಿಬ್ಬೇಗೌಡ, ಸಂಸದ ಶ್ರೀನಿವಾಸ ಪ್ರಸಾದ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Join Whatsapp