ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಜಾಗ ಬೇರೆ ಉದ್ದೇಶಕ್ಕೆ ಬಳಸದಂತೆ ಶಕುಂತಳಾ ಶೆಟ್ಟಿ ಜಿಲ್ಲಾಧಿಕಾರಿಗೆ ಮನವಿ

Prasthutha|

ಮಂಗಳೂರು : ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಮೀನನ್ನು ಸೀ ಫುಡ್ ಪಾರ್ಕ್ ಗೆ ವರ್ಗಾಯಿಸಲು ನಡೆಸುತ್ತಿರುವ ಯತ್ನವನ್ನು ಖಂಡಿಸಿ, ಕ್ಯಾಂಪಸ್ ಫ್ರಂಟ್ ಗುರುವಾರ ತೀವ್ರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ವಿದ್ಯಾರ್ಥಿ ಸಂಘಟನೆಯ ಧ್ವನಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಧ್ವನಿಗೂಡಿಸಿದ್ದಾರೆ. ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸಬಾರದೆಂದು ಒತ್ತಾಯಿಸಿ, ಸಮಾನ ಮನಸ್ಕ ಸಂಘಟನೆಗಳೊಡಗೂಡಿ ಅವರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಪುತ್ತೂರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮನವಿ ಸಲ್ಲಿಸಿದ ಬಳಿಕ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರತಿಕ್ರಿಯೆ ನೀಡಿ, ತಾವು ಶಾಸಕಿಯಾಗಿದ್ದ ಸಂದರ್ಭ 40 ಎಕರೆ ಜಮೀನನ್ನು ಕಾದಿರಿಸಲಾಗಿತ್ತು. ಆದರೆ, ಇದೀಗ ಅದೇ ಜಾಗದಲ್ಲಿ ಕೇಂದ್ರ ಸರಕಾರದ ಸೀ ಫುಡ್ ಪಾರ್ಕ್ ಸ್ಥಾಪನೆಗೆ ಮುಂದಾಗಿರುವ ಬಗ್ಗೆ ವಿಚಾರ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಸರಕಾರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಕೆಲವೊಂದು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಆರೋಗ್ಯ, ಉದ್ಯಮವೂ ಸೇರಿಕೊಂಡಿದೆ. ಶೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಸೀ ಫುಡ್ ಪಾರ್ಕ್ ಮಾಡುವ ಯಾವುದೇ ಯೋಜನೆ ಸರಕಾರ ಮುಂದಿಲ್ಲ. ಉದ್ಯಮಕ್ಕಾಗಿ ಪರ್ಯಾಯ ಜಾಗ ಹುಡುಕುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ವಿವಿಧ ಸಂಘಟನೆಗಳ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು. ಸರಕಾರಿ ಮಡಿಕಲ್ ಕಾಲೇಜ್ ಸ್ಥಾಪನೆಗೆ ಮೀಸಲಿಟ್ಟಿದ್ದ ಜಾಗವನ್ನು ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗುರುವಾರ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ಕಾರ್ಯ ನಡೆಸಿತ್ತು. ಈ ವೇಳೆ ಅನುಮತಿ ವಿಚಾರದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆದಿತ್ತು. ಓರ್ವ ಪೊಲೀಸ್ ಅಧಿಕಾರಿ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರ ಮೈ ಮೇಲೆ ಕೈ ಹಾಕಿ ತಳ್ಳಿದುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.  

- Advertisement -