ಪಂಜಾಬ್: ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ; ಕೊಳಕು ಹಾಸಿಗೆಯಲ್ಲಿ ಮಲಗುವಂತೆ ಆಸ್ಪತ್ರೆಯ ಅಧಿಕಾರಿಗೆ ಆದೇಶಿಸಿದ ಆರೋಗ್ಯ ಸಚಿವ ಚೇತನ್ ಸಿಂಗ್

Prasthutha|

ಚಂಡೀಗಢ : ಆಸ್ಪತ್ರೆಯ ವಾರ್ಡ್ ಗಳಲ್ಲಿ ಸ್ವಚ್ಛತೆಯ ಕೊರತೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಫರೀದ್ ಕೋಟ್ ನ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ನಿಗದಿಪಡಿಸಿದ ಕೊಳಕು ಹಾಸಿಗೆಯ ಮೇಲೆ ಮಲಗುವಂತೆ ಸಂಸ್ಥೆಯ ಉಪಕುಲಪತಿಗಳಿಗೆ ಸೂಚಿಸಿದ್ದಾರೆ.

- Advertisement -

ಪತ್ರಕರ್ತರು ಮತ್ತು ಛಾಯಾಗ್ರಾಹಕರೊಂದಿಗೆ, ಆಸ್ಪತ್ರೆಗೆ ಭೇಟಿ ನೀಡಿದ ಜೌರಮಜ್ರಾ  ಆಸ್ಪತ್ರೆಯ ಮೂಲಸೌಕರ್ಯ ಮತ್ತು ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ಆಸ್ಪತ್ರೆಯ ಹಾಸಿಗೆಗಳ ದಯನೀಯ ಸ್ಥಿತಿಯನ್ನು ಗಮನಿಸಿದ ಸಚಿವರು ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜ್ ಬಹದ್ದೂರ್ ಅವರಿಗೆ ಹಾಸಿಗೆಯ ಮೇಲೆ ಮಲಗಲು ಆದೇಶಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಮಾತನಾಡಿ ಅವರ ದೂರುಗಳನ್ನು ಆಲಿಸಿದ ಜೌರಮಜ್ರಾ ಅವರು “ಇದೆಲ್ಲವೂ ನಿಮ್ಮ ಕೈಯಲ್ಲಿದೆ, ಏನು ಇದರ ಅವಸ್ಥೆ ” ಎಂದು ಬಹದ್ದೂರ್ ಅವರನ್ನು ಕೇಳುವ ಹಾಗೂ ಹಾಸಿಗೆಯನ್ನು ಮೇಲೆತ್ತಿ ಅದರ ಕಳಪೆ ಸ್ಥಿತಿಯನ್ನು ತೋರಿಸುವುದನ್ನು ವೀಡಿಯೋದರಲ್ಲಿ  ಕಾಣಬಹುದು.

- Advertisement -

ಸಚಿವರ ಈ ವರ್ತನೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

“ಆಮ್ ಆದ್ಮಿ ಪಕ್ಷದ ಅಗ್ಗದ ಸಿದ್ಧಾಂತಗಳು ಎಂದಿಗೂ ನಿಲ್ಲುವುದಿಲ್ಲ. ಇಂದು ಬಾಬಾ ಫರೀದ್ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ರಾಜ್ ಬಹದ್ದೂರ್ ಸಿಂಗ್ ಅವರನ್ನು ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ರೀತಿಯ ಜನಸಮೂಹದ ವರ್ತನೆಯು ನಮ್ಮ ವೈದ್ಯಕೀಯ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ” ಎಂದು ಕಾಂಗ್ರೆಸ್ ನ ಪರ್ಗತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Join Whatsapp