ಖಾಸಗಿ ಆಸ್ಪತ್ರೆಗಳಿಂದ ಹೆಚ್ಚುವರಿ ಹಣ ವಸೂಲಿಗೆ ಡಿ.ಸಿ. ಕ್ರಮ ಸ್ವಾಗತಾರ್ಹ, ಸಂತ್ರಸ್ತೆ ಜಾಸ್ಮೀನ್ ಗೂ ನ್ಯಾಯ ಒದಗಿಸಿ: SDPI

Prasthutha|

ಮಂಗಳೂರು: ನಿಗದಿಪಡಿಸಿದ ದರಕ್ಕಿಂತ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳಿಂದ ಹಣ ಹಿಂದಿರುಗಿಸಲು ದ.ಕ. ಜಿಲ್ಲಾಧಿಕಾರಿ ಕೈಗೊಂಡ ಕ್ರಮವನ್ನು ಸ್ವಾಗತಿಸಿರುವ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಖಾಸಗಿ ಆಸ್ಪತ್ರೆಯ ಮಾಫಿಯಾದಿಂದ ತೀವ್ರ ಸಂಕಷ್ಟ ಅನುಭವಿಸಿದ ಖತೀಜಾ ಜಾಸ್ಮಿನ್ ಅವರಿಗೂ ನ್ಯಾಯ ಒದಗಿಸಿಕೊಡಲು ಜಿಲ್ಲಾಧಿಕಾರಿ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಂದ ಹೆಚ್ಚುವರಿ ಹಣ ವಸೂಲು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ರವರು ಹೆಚ್ಚುವರಿ ಹಣ ಪಡೆದ ಮಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಕೂಡಲೇ ಆ ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸಬೇಕೆಂದು ಆದೇಶಿಸಿದ್ದಾರೆ. ಇದನ್ನು ಎಸ್ ಡಿ ಪಿ ಐ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.


ಮಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ವಿವಿಧ ರೀತಿಯಲ್ಲಿ ಸುಲಿಯುತ್ತಿರುವ ಬಗ್ಗೆ ಎಸ್ ಡಿಪಿಐ ಮತ್ತು ಜಿಲ್ಲೆಯ ಜನತೆ ಹಲವಾರು ಬಾರಿ ದೂರುಗಳನ್ನು ಸರಕಾರಕ್ಕೆ ನೀಡಿದ್ದರೂ ಇದೀಗ ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ದಿಟ್ಟತನ ಪ್ರದರ್ಶಿಸುವ ಮೂಲಕ ಆರೋಗ್ಯ ಕ್ಷೇತ್ರವನ್ನು ಅಪ್ಪಟ ವ್ಯಾಪಾರಿ ಕೇಂದ್ರವನ್ನಾಗಿಸಿದ ಮಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸರಿಯಾದ ಬಿಸಿ ಮುಟ್ಟಿಸಿದ್ದಾರೆ ಎಂದು ಅವರು ಪ್ರಶಂಸಿಸಿದ್ದಾರೆ.

- Advertisement -

ಇಂತಹ ಕ್ರಮಗಳ ಮೂಲಕ ಜಿಲ್ಲಾಡಳಿತ ಜಿಲ್ಲೆಯ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಿದೆ. ಮಂಗಳೂರಿನ ಮೆಡಿಕಲ್ ಮಾಫಿಯಾದ ವಿರುದ್ಧ ಇತ್ತೀಚೆಗೆ ಎಸ್ ಡಿ ಪಿ ಐ ಧ್ವನಿಯೆತ್ತಿತು. ಖತೀಜಾ ಜಾಸ್ಮಿನ್ ಎಂಬ ತುಂಬು ಗರ್ಭಿಣಿ ಮಹಿಳೆಗೆ ಆದ ಅನ್ಯಾಯದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಇದುವರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಇದರ ಬಗ್ಗೆ ಕೂಡಾ ಜಿಲ್ಲಾಡಳಿತ ಸೂಕ್ತ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲಾಧಿಕಾರಿಗಳು ಜನರಲ್ಲಿ ಆತ್ಮವಿಶ್ವಾಸ ಹಾಗೂ ಭರವಸೆ ಮೂಡಿಸಬೇಕೆಂದು ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

Join Whatsapp