ಜಿಹಾದ್ ಪದದ ದುರ್ವ್ಯಾಖ್ಯಾನ | ಅಜಿತ್ ಹನುಮಕ್ಕನವರ್ ವಿರುದ್ಧ ಕಠಿಣ ಕ್ರಮಕ್ಕೆ ಇಮಾಮ್ಸ್ ಕೌನ್ಸಿಲ್ ಆಗ್ರಹ

Prasthutha News

ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡಲು ‘ಜಿಹಾದ್’ ಎಂಬ ಪದವನ್ನು ದುರ್ವ್ಯಾಖ್ಯಾನಗೊಳಿಸುತ್ತಿರುವ ಸುವರ್ಣ ನ್ಯೂಸ್ ಚಾನೆಲಿನ ಅಜಿತ್ ಹನುಮಕ್ಕನವರ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರಹ್ಮಾನ್ ಅಶ್ರಫೀ ಆಗ್ರಹಿಸಿದ್ದಾರೆ.

ನವೀನ್ ಎಂಬಾತ ಪ್ರವಾದಿ ನಿಂದನೆ ಮಾಡಿದ ಬಳಿಕ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೆ ಹಿಂಸಾಚಾರದ ಘಟನೆ ನಡೆದಿತ್ತು. ಅಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲವಾದರೂ, ಅಜಿತ್ ಹನುಮಕ್ಕನವರ್ ಎಂಬ ಪೂರ್ವಾಗ್ರಹಪೀಡಿತ ಪತ್ರಕರ್ತ ಜಿಹಾದ್ ಎಂಬ ಪದವನ್ನು ದುರ್ಬಳಕೆ ಮಾಡಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ನ್ಯಾಯಪರವಾದ ಹೋರಾಟಗಳಿಗೆ ಮಾತ್ರ ಬಳಸುವ ಕುರಾನ್ ನ ಪವಿತ್ರವಾದ ಜಿಹಾದ್ ಎಂಬ ಪದವನ್ನು ‘ಡ್ರಗ್ಸ್ ಜಿಹಾದ್’ ಎಂದು ಕರೆದು ಮುಸ್ಲಿಮರ ಭಾವನೆಗಳಿಗೆ ಆತ ಧಕ್ಕೆ ಉಂಟು ಮಾಡುತ್ತಿದ್ದಾರೆ.

ಅಜಿತ್ ಹನುಮಕ್ಕನವರ್ ವಿರುದ್ಧ ಪ್ರವಾದಿ ನಿಂದನೆಯ ಕುರಿತಾದ ಕೇಸು ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ವಿಚಾರಣೆಯಲ್ಲಿದೆ. ಇಂಥದ್ದರಲ್ಲಿ ಮತ್ತೊಮ್ಮೆ ಈತ ಇಸ್ಲಾಮ್ ಧರ್ಮದ ವಿರುದ್ಧ ದುರುದ್ದೇಶಪೂರ್ವಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದುದರಿಂದ ಮುಂದೆ ನಡೆಯಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಈತನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಕೂಡಲೇ ಬಂಧನಕ್ಕೆ ಒಳಪಡಿಸಬೇಕೆಂದು ಮೌಲಾನಾ ಅತೀಕುರಹ್ಮಾನ್ ಅಶ್ರಫೀ ಒತ್ತಾಯಿಸಿದ್ದಾರೆ.


Prasthutha News

Leave a Reply

Your email address will not be published. Required fields are marked *