ವೇತನ ಕೊಡದ್ದಕ್ಕೆ ಆಕ್ರೋಶ | ಐಫೋನ್ ತಯಾರಿಕಾ ಘಟಕದಲ್ಲಿ ಕಾರ್ಮಿಕರಿಂದ ದಾಂಧಲೆ

Prasthutha|

ಕೋಲಾರ : ಕೇವಲ 5 ತಿಂಗಳ ಹಿಂದೆಯಷ್ಟೇ ಆರಂಭವಾದ ದೇಶದ ಮೊದಲ ಪ್ರತಿಷ್ಠಿತ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಕಂಪೆನಿ ನೌಕರರು ಇಂದು, ವೇತನ ನೀಡುವಲ್ಲಿ ವಿಳಂಬ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಆಪಾದಿಸಿ, ಕಂಪೆನಿ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಈ ಘಟಕದಲ್ಲಿ ಶನಿವಾರ ಕಾರ್ಮಿಕರು ಕ್ರೋಧಿತರಾಗಿ, ಸಂಸ್ಥೆಯ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

- Advertisement -

ಈಗಾಗಲೇ ಕಂಪೆನಿಯಲ್ಲಿ ಕೋಲಾರ ಜಿಲ್ಲೆಯವರು ಸೇರಿದಂತೆ ನೆರೆ ರಾಜ್ಯಗಳ ಮತ್ತು ಹೊರಜಿಲ್ಲೆಗಳ ಸುಮಾರು 6 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ನಾಲ್ಕು ತಿಂಗಳಿನಿಂದ ಸ್ಥಳೀಯರಿಗೆ ವೇತನವನ್ನೇ ಕೊಟ್ಟಿಲ್ಲ ಎಂದು ಕಾರ್ಮಿಕರು ಹೇಳಿದ್ದಾರೆ. ಹೊರ ರಾಜ್ಯಗಳ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಿ, ಸ್ಥಳೀಯರಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -

ಶನಿವಾರ ಬೆಳಗ್ಗೆ ಸಾವಿರಾರು ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಆಡಳಿತ ವ್ಯವಸ್ಥೆ ಇವರ ಅಹವಾಲು ಸಿದ್ಧವಾಗದ ಕಾರಣ, ಆಕ್ರೋಶಗೊಂಡ ಕಾರಣ ಕಾರ್ಮಿಕರು ಕಾರ್ಖಾನೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಲು ಶುರು ಮಾಡಿದ್ದಾರೆ. ಕಂಪೆನಿಯ ಮುಂದಿದ್ದ ಐಶಾರಾಮಿ ಕಾರುಗಳು, ಕಾರ್ಮಿಕರನ್ನು ಕರೆದೊಯ್ಯುವ ಬಸ್ ಗಳು ಕಾರ್ಮಿಕರ ಆಕ್ರೋಶಕ್ಕೆ ಬಲಿಯಾಗಿವೆ. ಕೈಗೆ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಆಗಮಿಸಿದ್ದಾರೆ. ಘಟನೆಗೆ ಕಾರಣರಾದ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.   

Join Whatsapp