ಕೊಡಗು: ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತವು ಮಡಿಕೇರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಸಂಬಂಧ ಪಾಪ್ಯುಲರ್ ಫ್ರಂಟ್ ನ ಹೆಸರು ಕೆಡಿಸುತ್ತಿರುವ ಬಿಜೆಪಿಯ ನಡೆ ಹತಾಶೆಯ ಪ್ರತಿಫಲನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾಧ್ಯಕ್ಷ ಶೌಕತ್ ಅಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿಗೆ ಬಿಜೆಪಿ ಕಾರ್ಪೊರೇಟರ್ ಸಹಿತ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆಯ ಬಳಿಕ ಬಿಜೆಪಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ‘ಮಡಿಕೇರಿ ಚಲೋ’ ನಡೆಸುವುದಾಗಿ ಘೋಷಿಸುತ್ತಿದ್ದಂತೆಯೇ ಪ್ರತಿಭಟನೆಯನ್ನು ಹತ್ತಿಕ್ಕಲು ತುರ್ತಾಗಿ ನಿಷೇಧಾಜ್ಞೆ ಹೊರಡಿಸಲಾಗಿದೆ. ತನ್ನ ವಿರುದ್ಧದ ಜನಾಕ್ರೋಶ ಮತ್ತು ಪ್ರತಿಭಟನೆಯ ಕಾವನ್ನು ತಣಿಸಲು ಬಿಜೆಪಿ ಇದೀಗ ಪಾಪ್ಯುಲರ್ ಫ್ರಂಟ್ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿದೆ ಎಂದು ಹೇಳಿದರು .
ಇತ್ತೀಚಿನ ದಿನಗಳಲ್ಲಿ ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬಿಜೆಪಿಗೆ ಚಾಳಿಯಾಗಿ ಬಿಟ್ಟಿದೆ. ಈ ಹಿಂದೆ ಮೈಸೂರಿನಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಮೇಲೆ ಸುಳ್ಳಾರೋಪ ಹೊರಿಸಿದಾಗ ಸ್ವತಃ ಹೈಕೋರ್ಟ್ ಬಿಜೆಪಿ ಸರಕಾರಕ್ಕೆ ಚಾಟಿ ಬೀಸಿತ್ತು. ಮಾತ್ರವಲ್ಲ, 50,000 ರೂಪಾಯಿ ದಂಡವನ್ನೂ ವಿಧಿಸಿತ್ತು ಎಂದು ತಿಳಿಸಿದರು.
ಟಿಪ್ಪು ಜಯಂತಿ ವೇಳೆ ಕುಟ್ಟಪ್ಪ ಎಂಬವರು ಸಾವನ್ನಪ್ಪಿದಾಗ, ಅದನ್ನೂ ಪಾಪ್ಯುಲರ್ ಫ್ರಂಟ್ ತಲೆಗೆ ಕಟ್ಟಲಾಗಿತ್ತು. ಆದರೆ ಅದು ಕಾಲು ಜಾರಿ ಬಿದ್ದು ಸಂಭವಿಸಿದ ಸಾವು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ಇದೀಗ ಮಡಿಕೇರಿಯ ವಿಚಾರಕ್ಕೆ ಸಂಬಂಧಿಸಿ ಕೆಲವೊಂದು ಮಾಧ್ಯಮಗಳಲ್ಲೂ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸಂಘಟನೆಯ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ವಿರುದ್ಧ ಸಾಕ್ಷ್ಯಾಧಾರಗಳಿದ್ದರೆ ಅದನ್ನು ಬಹಿರಂಗಪಡಿಸಲಿ. ಅದರ ಬದಲಿಗೆ ಸತ್ಯಕ್ಕೆ ದೂರವಾದ ಇಂತಹ ವರದಿಗಳನ್ನು ಪ್ರಕಟಿಸುತ್ತಿರುವುದು ಬಿಜೆಪಿಯನ್ನು ರಕ್ಷಿಸುವ ಪಿತೂರಿ ಮಾತ್ರವಲ್ಲ, ಬಿಜೆಪಿಯ ಹತಾಶೆಯ ಪ್ರತಿಫಲನವೂ ಆಗಿದೆ.ತನ್ನ ಕಾರ್ಯಕರ್ತರ ವಿಕೃತಿಯಿಂದಾದ ಮುಖಭಂಗವನ್ನು ಮರೆಮಾಚಲು ಬಿಜೆಪಿಯು ಪಾಪ್ಯುಲರ್ ಫ್ರಂಟ್ ಹೆಸರು ಅನಗತ್ಯವಾಗಿ ಎಳೆದು ತರುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಡಿಕೇರಿ ಘಟನೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು. ಅದೇ ರೀತಿ ಪಾಪ್ಯುಲರ್ ಫ್ರಂಟ್ ವಿರುದ್ಧದ ಈ ತೇಜೋವಧೆಯ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಘಟನೆಯು ಇದರ ವಿರುದ್ಧ ಕಾನೂನು ಹೋರಾಟ ನಡೆಸಲಿದೆ ಎಂದು ಶೌಕತ್ ಅಲಿ ಎಚ್ಚರಿಸಿದ್ದಾರೆ.