ಬೆಳ್ತಂಗಡಿ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ವೇಳೆ ತಾಲೂಕಿನ ಉಜಿರೆ ಮತ ಕೇಂದ್ರದ ಹೊರಗೆ ವಿವಿಧ ಪಕ್ಷಗಳು ವಿಜಯೋತ್ಸವ ಆಚರಿಸುತ್ತಿದ್ದ ವೇಳೆ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣದ ಮೂಲಕ ತಾಲೂಕಿನ ಜನತೆಯ ಸೌಹಾರ್ಧತೆ, ಶಾಂತಿ ಹಾಗೂ ನೆಮ್ಮದಿಯನ್ನು ಕದಡುವ ಷಡ್ಯಂತ್ರವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿ ಅಭಿಪ್ರಾಯ ಪಟ್ಟಿದೆ.
ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಎಸ್.ಎಂ. ತಂಙಳ್ ಉಜಿರೆ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ ಬೆಳ್ತಂಗಡಿ ಅವರು ಈ ಕುರಿತು ಜಂಟಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಈ ಘಟನೆಯ ಹಿಂದಿರುವ ನೈಜ್ಯತೆಯನ್ನು ಸಮಾಜದ ಮುಂದೆ ಅನಾವರಣಗೊಳಿಸಿ, ಘಟನೆಗೆ ಕಾರಣರಾದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ತಾಲೂಕಿನ ಶಾಂತಿ ಸೌಹಾರ್ಧತೆಯನ್ನು ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳು ಪ್ರತ್ಯೇಕ ಗಮನ ಹರಿಸಿಕೊಳ್ಳಬೇಕೆಂದು ಸಮಿತಿ ಆಗ್ರಹಿಸಿದೆ.
ದೇಶ ವಿರೋಧಿ ಚಟುವಟಿಕೆಗಳ ಮೂಲಕ ಈ ದೇಶದ ನಿಷ್ಠೆಗೆ ಸವಾಲಾಗಿರುವ ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿಗಳಾದರೂ, ಅಂತಹ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ಕಾರಣಕ್ಕೂ ಅಮಾಯಕರಿಗೆ ಶಿಕ್ಷೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಮಿತಿಯ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.