‘ಟೈಮ್’ ಮ್ಯಾಗಜಿನ್ ನಲ್ಲಿ ಜಾಹೀರಾತು ನೀಡಿ, ‘ವರದಿ’ ಬಂದಿದೆ ಎಂದ ಯೋಗಿ ಆದಿತ್ಯನಾಥ್!

Prasthutha|

ಲಖನೌ : ಕೊರೊನ ಬಿಕ್ಕಟ್ಟನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನಿರ್ವಹಿಸಿದ ರೀತಿಯನ್ನು ಹೊಗಳಿ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್ ವರದಿ/ಲೇಖನ ಪ್ರಕಟಿಸಿದೆ ಎಂದು ಝೀ ನ್ಯೂಸ್, ಎಬಿಪಿ ಗಂಗಾ, ನ್ಯೂಸ್18ಯುಪಿ ಸೇರಿದಂತೆ ಹಲವು ಸುದ್ದಿವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡಿ ಮುಖಭಂಗಕ್ಕೊಳಗಾಗಿವೆ.

- Advertisement -

ಟೈಮ್ ಮ್ಯಾಗಜಿನ್ ನಲ್ಲಿ ನೀಡಲಾಗಿದ್ದ ಜಾಹೀರಾತನ್ನು ತೋರಿಸಿ, ಮುಖ್ಯಮಂತ್ರಿ ಆದಿತ್ಯನಾಥ್ ಅವರ ಆಡಳಿತದ ಕುರಿತು ಪ್ರತಿಷ್ಠಿತ ಮ್ಯಾಗಜಿನ್ ವರದಿ ಮಾಡಿದೆ ಎಂದು ಎಲ್ಲಾ ಚಾನೆಗಳ ನಿರೂಪಕರು ಹೊಗಳಿದ್ದೇ ಹೊಗಳಿದ್ದು. ಟಿವಿ ಪರದೆಯ ಮೇಲೆ ಆದಿತ್ಯನಾಥ್ ಶ್ಲಾಘಿಸುವ ಭರದಲ್ಲಿ ಅವರಿಗೆ ಸಾಕಷ್ಟು ಬಿರುದು, ಗುಣನಾಮಗಳನ್ನೂ ನೀಡಿದ್ದವು. ಇದನ್ನೇ ಮಾದರಿಯ ಸುದ್ದಿಗಳನ್ನು ಕೆಲವು ಮುದ್ರಣ ಮಾಧ್ಯಮಗಳೂ ಮಾಡಿದ್ದವು.

ವಾಸ್ತವದಲ್ಲಿ ‘ಟೈಮ್’ನಲ್ಲಿ ಬಂದಿದ್ದು, ಉತ್ತರ ಪ್ರದೇಶ ಸರಕಾರ ನೀಡಿದ್ದ ಜಾಹೀರಾತು. ಅದನ್ನು ಲೇಖನ ರೂಪದಲ್ಲಿ ಪ್ರಕಟಿಸಲಾಗಿತ್ತು. ಇಂತಹ ಜಾಹೀರಾತುಗಳನ್ನು ‘ಅಡ್ವೊಟೋರಿಯಲ್’ ಎಂದೇ ಕರೆಯಲಾಗುತ್ತದೆ. ಇದರ ಮೇಲುಗಡೆ ‘ಉತ್ತರಪ್ರದೇಶದ ಕಂಟೆಂಟ್’ ಎಂದೂ ಉಲ್ಲೇಖಿಸಲಾಗಿದೆ.

- Advertisement -

ಈ ‘ಅಡ್ವಟೋರಿಯಲ್’ ‘ಟೈಮ್’ನ ಇಂಟರ್ ನೆಟ್ ಆವೃತ್ತಿಯಲ್ಲಿ ಪ್ರಕಟವಾಗಿಲ್ಲ. ವಿದೇಶಿ ಮತ್ತು ಅಮೆರಿಕನ್ ಪ್ರಿಂಟ್ ಆವೃತ್ತಿಯಲ್ಲೂ ಇದನ್ನು ಪ್ರಕಟಿಸಲಾಗಿಲ್ಲ.

‘Hang in there, better times are ahead’ ಎಂಬ ತಲೆಬರಹದ ಈ ‘ಅಡ್ವೊಟೋರಿಯಲ್’ ಅನ್ನು ಡಿ.15ರಂದು ಆದಿತ್ಯನಾಥ್ ಶೇರ್ ಮಾಡಿ, ಅದನ್ನು ಲೇಖನ ಎಂಬಂತೆ ಬಿಂಬಿಸಿದ್ದರು. ಆ ಸಮಯದಲ್ಲಿ ಅದು ಯಾರ ಗಮನ ಸೆಳೆದಿರಲಿಲ್ಲ. ನಂತರ ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಡಲ್ಪಟ್ಟಿದೆ. ಎರಡು ವಾರಗಳ ನಂತರ ಏಕಾಏಕಿ ಎಚ್ಚೆತ್ತುಕೊಂಡು ಚಾನೆಲ್ ಗಳು ವರದಿ ಕುರಿತಂತೆ ಯೋಗಿ ಕುರಿತು ಪ್ರಶಂಸೆಯ ಸುರಿಮಳೆಗೈದಿದ್ದವು.

ಒಂದೆರಡು ತಿಂಗಳ ಹಿಂದೆಯಷ್ಟೇ, ‘ಟೈಮ್’ ನಲ್ಲಿ ಭಾರತದ ಕೊರೊನ ನಿರ್ವಹಣೆಯ ವಿಫಲತೆ ಕುರಿತು ಬರೆಯಲಾಗಿತ್ತು. ಅದರಲ್ಲಿ ಕೊರೊನ ಕುರಿತು ತಪ್ಪು ಮಾಹಿತಿ ಹರಡುತ್ತಿರುವವರ ಕುರಿತ ಬಾಕ್ಸ್ ನಲ್ಲಿ ಆದಿತ್ಯನಾಥ್ ಕೂಡ ಇದ್ದರು. ‘ಯೋಗದಿಂದ ಕೊರೊನ ನಿವಾರಿಸಬಹುದು’ ಎಂಬ ಅವರ ಹೇಳಿಕೆಯನ್ನು ‘ಟೈಮ್’ ಟೀಕಿಸಿತ್ತು.

‘ಅಡ್ವಟೋರಿಯಲ್’ಗಳು ದುಡ್ಡು ಕೊಟ್ಟು ಪ್ರಕಟಿಸುವ ಲೇಖನಗಳಾಗಿದ್ದು, ಅವು ಜಾಹೀರಾತಿನಂತಿರದೆ ‘ಎಡಿಟೋರಿಯಲ್’ ಶೈಲಿಯಲ್ಲಿ ನಿರೂಪಿತಗೊಂಡಿರುತ್ತವೆ.     

Join Whatsapp