ಬದೌನ್ ರೇಪ್ ಕೇಸ್ | ಸಂಜೆ ಹೊತ್ತು ಹೊರಹೋಗಿರದಿದ್ದರೆ ಅತ್ಯಾಚಾರ ತಪ್ಪಿಸಬಹುದಿತ್ತು : NCW ಸದಸ್ಯೆಯ ಆಘಾತಕಾರಿ ಹೇಳಿಕೆ

Prasthutha|

ಲಖನೌ : ಉತ್ತರ ಪ್ರದೇಶದ ಬದೌನ್ ನಲ್ಲಿ ಇತ್ತೀಚೆಗೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿಡಬ್ಲ್ಯೂ)ದ ಸದಸ್ಯೆಯೊಬ್ಬರು ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹಿಳೆಯು ಸಂಜೆ ವೇಳೆ ಒಬ್ಬರೇ ಹೊರಗೆ ಹೋಗಿರದಿದ್ದರೆ, ಅತ್ಯಾಚಾರ ಮತ್ತು ಕೊಲೆಯಾಗುವುದರಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ಎನ್ ಸಿಡಬ್ಲ್ಯೂ ಸದಸ್ಯೆ ಚಂದ್ರಮುಖಿ ದೇವಿ ಹೇಳಿದ್ದಾರೆ.

- Advertisement -

“ಯಾರದೋ ಪ್ರಭಾವಕ್ಕೊಳಗಾಗಿ ಹೊತ್ತಲ್ಲದ ಹೊತ್ತಲ್ಲಿ ಮಹಿಳೆಯರು ಒಬ್ಬರೊಬ್ಬರೇ ಹೊರಗೆ ಹೋಗಬಾರದೆಂದು ನಾನು ಮಹಿಳೆಯರಿಗೆ ಪದೇಪದೇ ಹೇಳುತ್ತಿರುತ್ತೇನೆ” ಎಂದು ಚಂದ್ರಮುಖಿ ದೇವಿ ಹೇಳಿದ್ದಾರೆ.

“ಆಕೆ ಸಂಜೆ ಹೊತ್ತಲ್ಲಿ ಹೊರಗೆ ಹೋಗಿರದಿದ್ದರೆ ಅಥವಾ ಯಾರಾದರೂ ಮಕ್ಕಳನ್ನು ಜೊತೆಗೆ ಕರೆದೊಯ್ದಿದ್ದರೆ, ನನ್ನ ಪ್ರಕಾರ ಇಂತಹ ಘಟನೆಯಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ, ಇದು ಪೂರ್ವ ಯೋಜಿತವಾಗಿತ್ತು. ಆಕೆಗೆ, ಫೋನ್ ಮಾಡಲಾಗಿತ್ತು, ಆಕೆ ಹೊರಹೋದಳು ಮತ್ತು ಈ ಸ್ಥಿತಿಯಲ್ಲಿ ಮರಳಿದಳು ಎಂದು ಚಂದ್ರಮುಖಿ ಹೇಳಿದ್ದಾರೆ.

- Advertisement -

ಭಾನುವಾರ ಸಂಜೆ ಬದೌನ್ ನ ಹಳ್ಳಿಯೊಂದರ ದೇವಸ್ಥಾನಕ್ಕೆ 50ರ ಹರೆಯದ ಅಂಗನವಾಡಿ ಮಹಿಳೆ ತೆರಳಿದ್ದರು. ಈ ವೇಳೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯನ್ನು ಅತ್ಯಂತ ಭೀಕರವಾಗಿ ಹಿಂಸಿಸಲಾಗಿತ್ತು. ಇದರಿಂದಾಗಿ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ಸಂಬಂಧ ದೇವಸ್ಥಾನದ ಅರ್ಚಕ ಸಹಿತ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು, ಅರ್ಚಕನನ್ನು ಬಂಧಿಸಲಾಗಿದೆ.

ಚಂದ್ರಮುಖಿ ದೇವಿ ಮೃತ ಮಹಿಳೆಯ ಕುಟುಂಬಸ್ಥರನ್ನು ಭೇಟಿಯಾಗಿ, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಅವರ ಹೇಳಿಕೆಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.    

Join Whatsapp