►ಶಿಕ್ಷಣ ಇಲಾಖೆಯ ಕ್ರಮ ಖಂಡಿಸಿ ಶಾಲೆಯ ಎದುರು ಪ್ರತಿಭಟನೆ
ಮೈಸೂರು: ಲೀಸ್ ಅವಧಿ ಮುಗಿದಿದೆ ಎಂದು ಆರೋಪಿಸಿ ಮೈಸೂರಿನ ಫಾರೂಖಿಯಾ ಗರ್ಲ್ಸ್ ಹೈಸ್ಕೂಲ್ ಗೆ ಏಕಾಏಕಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಇದರಿಂದ 450ಕ್ಕೂ ಅಧಿಕ ಮಕ್ಕಳು, ಶಿಕ್ಷಕರು ಬೀದಿಪಾಲಾಗಿದ್ದು, ಶಿಕ್ಷಣ ಇಲಾಖೆಯ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಶಾಲೆಯ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಜಾಗದಲ್ಲಿ ಇರುವ ಫಾರೂಖಿಯಾ ಗರ್ಲ್ಸ್ ಹೈಸ್ಕೂಲ್ ರಿಫಾವುಲ್ ಮುಸ್ಲಿಮೀನ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು, 30 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ತೆರಳಿದ್ದಾರೆ. ಆದರೆ ಲೀಸ್ ಅವಧಿ ಮುಗಿದಿದೆ ಎಂದು ಆರೋಪಿಸಿ ಸರ್ಕಾರ ಈ ಸ್ಥಳದ ಮೇಲೆ ಕಣ್ಣಿಟ್ಟು ಜಾಗವನ್ನು ವಶಪಡಿಸಿಕೊಳ್ಳಲು ಹಿಂದಿನಿಂದಲೇ ಮಸಲತ್ತು ನಡೆಸುತ್ತಿದೆ. ಆದರೆ ಇದು ಮಕ್ಕಳಿಗೆ ಶಿಕ್ಷಣ ನೀಡುವ ಜಾಗ, ಇಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ನಡೆಸುತ್ತಿಲ್ಲ. ಸರ್ಕಾರ ಮಾಡಬೇಕಾದ ಸೇವೆಯನ್ನು ನಾವು ಮಾಡುತ್ತಿದ್ದೇವೆ, ನಮಗೆ ಸಹಕಾರ ನೀಡಬೇಕಾದ ಸರ್ಕಾರ ಶಾಲೆಗೆ ಬೀಗ ಹಾಕಿರುವುದು ಖಂಡನೀಯ ಎಂದು ಶಾಲಾಡಳಿತ ಮಂಡಳಿ ದೂರಿದೆ.
ಈಗಾಗಲೇ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಶಾಲೆಗೆ ಬೀಗ ಹಾಕುವುದರ ವಿರುದ್ಧ ಸ್ಥಳೀಯ ನ್ಯಾಯಾಲಯದಿಂದ ಇಂಜೆಕ್ಷನ್ ತರಲಾಗಿದೆ. ಆದರೂ ಡಿಡಿಪಿಐ ಮತ್ತು ಬಿಇಒ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶಾಲೆಗೆ ಬೀಗ ಹಾಕಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಶಾಲಾಡಳಿತ ಪರ ವಕೀಲರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶ ಜಾರಿಗೆ ಮುಂದಾಗಬೇಕಾದ ಪೊಲೀಸರು ಕೂಡ ಡಿಡಿಪಿಐ ಪರ ಕೆಲಸ ಮಾಡಿರುವುದು ಸರಿಯಲ್ಲ. ಈ ಬಗ್ಗೆಯೂ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.
ಮಕ್ಕಳ ಭವಿಷ್ಯದ ಮೇಲೆ ಶಿಕ್ಷಣ ಇಲಾಖೆ ಚೆಲ್ಲಾಟ ವಾಡುತ್ತಿದೆ. ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ರಸ್ತೆಯಲ್ಲೇ ಕುಳಿತ ವಿದ್ಯಾರ್ಥಿಗಳು
ಎಂದಿನಂತೆ ಸೋಮವಾರ ಬೆಳಗ್ಗೆ ಫಾರೂಖಿಯಾ ಶಾಲೆಗೆ ಬಂದ ವಿದ್ಯಾರ್ಥಿಗಳು, ಗೇಟ್ ಗೆ ಬೀಗ ಹಾಕಿರುವುದು ಕಂಡು ಶಾಕ್ ಆಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಗೇಟ್ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯ ಮುಖಂಡರು ಶಾಲೆ ಮುಂಭಾಗ ಆಗಮಿಸಿ ಪ್ರತಿಭಟನೆ ನಡೆಸಿದರು.
ಸದ್ಯ ನ್ಯಾಯಾಲಯಕ್ಕೆ ತುರ್ತು ಅರ್ಜಿ ಸಲ್ಲಿಸಲಾಗಿದೆ. ಶಾಲೆಯ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.