ಅಗ್ನಿಪಥ್: ಸಮಾಜದ ಮಿಲಿಟರೀಕರಣ

Prasthutha|

ನರೇಂದ್ರ ಮೋದಿಯವರ ಸರಕಾರವು ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲ. ನೋಟು ಅಮಾನ್ಯ, ಕೃಷಿ ತಿದ್ದುಪಡಿ ಕಾಯ್ದೆಗಳು, 370ನೇ ವಿಧಿ ರದ್ದು ಕುರಿತ ಕಾಶ್ಮೀರದ ಬಗೆಗಿನ ತೀರ್ಮಾನಗಳು, ಪೌರತ್ವ ತಿದ್ದುಪಡಿ ಕಾಯ್ದೆ, ಕೋವಿಡ್ ಲಾಕ್ ಡೌನ್ ಎಂದು ಜನರು ಮೋದಿ ಸರಕಾರದ ಮೂರ್ಖ ತಪ್ಪು ತೀರ್ಮಾನಗಳಿಂದ ಸಂಕಷ್ಟಗಳಿಗೆ ಒಳಗಾಗಿದ್ದು ಕಣ್ಣೆದುರಿಗಿದ್ದರೂ ಈ ಸರಕಾರ ಬುದ್ಧಿ ಕಲಿತಿಲ್ಲ. ಸರಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬಾರದು ಎನ್ನುವುದಕ್ಕೆಲ್ಲ ಇದು ಉದಾಹರಣೆಯಾಗಿತ್ತು. ಈಗ ಮತ್ತೊಂದು ತೀರ್ಮಾನ; ಜನರನ್ನಾಗಲೀ, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ನೇರವಾಗಿ ಇದನ್ನು ತರಲಾಗಿದೆ. ಅದೇ ಅಗ್ನಿಪಥ.

- Advertisement -

 ಅಗ್ನಿಪಥ ಎನ್ನುವುದು ಬಾಲಿವುಡ್ ಸಿನಿಮಾದ ಜನಪ್ರಿಯ ಹೆಸರಾಗಿದ್ದು, ಸರಕಾರ ಇದನ್ನು ಜಾರಿಗೆ ತರುತ್ತಲೇ ಜನರು ದೇಶದೆಲ್ಲೆಡೆ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಇಂದಿನ ಹಣಕಾಸು ದುಸ್ಥಿತಿಯಲ್ಲಿ ಪ್ರಧಾನಿ ಘೋಷಿಸಿರುವ ಈ ಯೋಜನೆಯು ಮಿಲಿಟರಿಯಲ್ಲಿ ಮುಂದೆ ಯುವಜನರ ಉದ್ಯೋಗಾವಕಾಶವನ್ನು ಕಸಿದುಕೊಳ್ಳಲಿದೆ. ಹಂಗಾಮಿ ಬಾಡಿಗೆ ಒಪ್ಪಂದದಂಥ ವೆಚ್ಚ ಉಳಿಸುವ ನೇಮಕಾತಿಗಳು ಸೇನೆಯಲ್ಲಿ ಭವಿಷ್ಯದಲ್ಲಿ ಸಮರ್ಥ ವೃತ್ತಿಪರರ ಕೊರತೆಗೆ ಕಾರಣವಾಗಿ ವೃತ್ತಿಪರ ಪೈಪೋಟಿಯನ್ನು ಕುಗ್ಗಿಸುತ್ತದೆ.

ಸೇನಾ ಹಿರಿಯರೆಲ್ಲ ಈ ಬಗೆಗೆ ಚರ್ಚೆ ನಡೆಸಿ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಪಾವಧಿಗೆ ನೇಮಕಗೊಳ್ಳುವ ಇವರಲ್ಲಿ 75% ತರಬೇತಿ ಮುಗಿಸುತ್ತಲೇ ನಾಲ್ಕು ವರ್ಷದಲ್ಲಿ ಸೇನೆಯ ಒಪ್ಪಂದ ಮುಗಿಯುತ್ತಲೇ ಸರಳವಾಗಿ ನಿರುದ್ಯೋಗಿಗಳಾಗುತ್ತಾರೆ. ಅವರು ಸ್ಥಳೀಯ ಪೊಲೀಸ್ ಪಡೆಗೆ, ಇತರ ಕೆಲಸಗಳಿಗೆ ನೇಮಕಗೊಳ್ಳಬಹುದು ಎಂದು ಸರಕಾರದ ಪರ ಹೇಳುವುದೆಲ್ಲ ಅರ್ಧ ಸತ್ಯಗಳಾಗಿವೆ. ಹೆಚ್ಚಿನವರನ್ನು ಖಾಸಗಿಯವರು ತಮ್ಮ ಕಾವಲುಗಾರ, ಸೆಕ್ಯೂರಿಟಿ ಗಾರ್ಡ್ ಗಳಾಗಿ ನೇಮಿಸಿಕೊಂಡು ಅವರ ಶೋಷಣೆ ಮಾಡುವುದು ಖಚಿತ. ತುಂಬ ಅಪಾಯಕಾರಿ ಅಂಶವೆಂದರೆ ರಾಜಕೀಯ ಪಕ್ಷಗಳು ಅವರನ್ನು ಕಾಲಾಳು ಪಡೆಗಳಾಗಿ ತಮ್ಮ ಹಿಂಸಾಚಾರಗಳಿಗೆ ಬಳಸಿಕೊಳ್ಳುವುದಾಗಿದೆ.

- Advertisement -

ಇದರ ಇನ್ನೊಂದು ಮಜಲು ಎಂದರೆ ಸರಕಾರವು ವೆಚ್ಚ ತಗ್ಗಿಸಲು ಎಲ್ಲ ಇಲಾಖೆಗಳಲ್ಲೂ ಕೆಳ ದರ್ಜೆಗಳಲ್ಲಿ ಎಲ್ಲ ಹಂತದಲ್ಲೂ ಗುತ್ತಿಗೆ, ಬಾಡಿಗೆ, ತಾತ್ಕಾಲಿಕ, ಅಲ್ಪಾವಧಿಗೆ ಒಪ್ಪಂದದ ನೌಕರರನ್ನೇ ನೇಮಿಸಿಕೊಳ್ಳಲಿದ್ದಾರೆ. ಸರಕಾರದ ಕ್ರಮಬದ್ಧ ನೇಮಕಾತಿ ನಿಂತು ಬಿಡುವ ಸಾಧ್ಯತೆಯೂ ಇದೆ. ಹೀಗಿರುವಾಗ ಈ ಸರಕಾರ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಯಾವುದರ ಆಧಾರದ ಮೇಲೆ ಹೇಳಬೇಕು? ಬಿಕ್ಕಟ್ಟಿನ ನಡುವೆ ನಾಲ್ಕು ವರುಷದ ಅನಿಶ್ಚಿತತೆಯ ನಡುವೆ ಒಬ್ಬನು ತನ್ನ ಕುಟುಂಬದ ಬಗೆಗೆ ಯಾವುದಾದರೂ ಖಚಿತ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಿದೆಯೇ? ಅಲ್ಲಿ ಸಾಮಾಜಿಕ ಅಭದ್ರತೆಯಷ್ಟೆ ಉಳಿಯುವುದು.

ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳು ದೇಶದ ಕೆಲವು ಉದ್ಯೋಗಾವಕಾಶಗಳನ್ನು ವಿದೇಶೀಯರಿಗೆ ಮುಕ್ತವಾಗಿಸಿವೆ. ಖಾಸಗಿ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್  ಗಿರಿ, ಪೈಲಟ್ ಗಳು, ಐಪಿಎಲ್ ಕ್ರಿಕೆಟ್ ಆಟಗಾರರು, ನಾನಾ ಕ್ರೀಡೆಗಳ ಕೋಚ್ ಹುದ್ದೆಗಳಿತ್ಯಾದಿ ಅವರಿಗೆ ಮುಕ್ತವಾಗಿವೆ. ಸಶಸ್ತ್ರ ಪಡೆಗಳೂ ಅದೇ ದಾರಿ ಹಿಡಿದರೆ ಇನ್ನೇನು ಉಳಿದಿದೆ? ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಭಾರತೀಯ ಯುವಕರನ್ನು ಇದಕ್ಕಿಂತ ಉತ್ತಮ ಸೇವೆಗೆ ನೇಮಿಸಿಕೊಳ್ಳಬಹುದು. ನಿಜ, ಯಾರೇನು ಮಾಡುವುದಕ್ಕುಂಟು, ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟಿನವರು ಮೂಲದಲ್ಲಿ ನೇಪಾಳಿಗರು.

ಸಾಂಪ್ರದಾಯಿಕವಾಗಿಯೇ ನಮ್ಮ ನಾಗರಿಕ ಸಮಾಜ ಮತ್ತು ಸಶಸ್ತ್ರ ಪಡೆಗಳು ಪರಸ್ಪರ ಅಂತರ ಕಾಯ್ದುಕೊಂಡಿವೆ. ಸಾಧಕ ಮಹಿಳೆ, ಪುರುಷರನ್ನು ಗೌರವಿಸುವಾಗ ಮಾತ್ರ ಮಿಲಿಟರಿ ಉಡುಗೆಯಲ್ಲಿ ಅವರ ಬೆರೆಯುವಿಕೆ ನಡೆಯುತ್ತದೆ. ಸಾಮಾನ್ಯ ಭಾರತೀಯನಿಗೆ ಸಶಸ್ತ್ರ ಯುದ್ಧ ನಡೆಗಳೆಲ್ಲ ನಿತ್ಯ ಕರ್ಮವೇನಲ್ಲ. ಕೆಲವೇ ಕೆಲವು ಸನ್ನಿವೇಶಗಳನ್ನು ಬಿಟ್ಟರೆ ಮಿಲಿಟರಿಯವರು ನಾಗರಿಕ ಸೇವೆಗಳಲ್ಲಿ, ರಾಜಕೀಯದ ಉನ್ನತ ಹುದ್ದೆಗಳನ್ನು ಪಡೆಯಲು ಅವಕಾಶಗಳೂ ಭಾರತದಲ್ಲಿಲ್ಲ. ಮಿಲಿಟರಿ ಶಿಕ್ಷಣಕ್ಕೂ ಸಮಾಜದಲ್ಲಿ ಅವಕಾಶವಾಗಿಲ್ಲ. ಆದರೂ ನಾವು ಸ್ಪರ್ಧಾತ್ಮಕ ಭಾರತೀಯ ಸೇನೆಯನ್ನು ಕಟ್ಟಿದ್ದು, ಅದು ಸ್ವತಂತ್ರ ಭಾರತವನ್ನು ರಕ್ಷಿಸುತ್ತಿದೆ.

ಆದರೆ ಹಿಂದುತ್ವವಾದಿಗಳು ಅಧಿಕಾರಕ್ಕೆ ಬಂದ ಮೆಲೆ ಸಶಸ್ತ್ರ ಪಡೆಗಳು, ಭದ್ರತಾ ವಿಷಯಗಳನ್ನು ಅತಿರಂಜಿತವಾಗಿಸಲಾಗಿದೆ; ರಾಜಕೀಯದ ಮುಖ್ಯ ವಿಷಯವಾಗಿ ವಿವರಿಸಲಾಗುತ್ತಿದೆ. ಆಳುವವರು ಪ್ರತಿಯೊಬ್ಬ ಭಾರತೀಯನೂ ಕಲ್ಪಿತ ದಾಳಿ, ಮಿಲಿಟರಿ ಸುತ್ತುವರಿಕೆಯ ಭಯದಲ್ಲಿರಬೇಕೆಂದು ಈಗಿನ ಆಳುವವರು ರಾಜಕೀಯ ಬೆರೆಸಿಡುತ್ತಿದ್ದಾರೆ. ದಿಢೀರನೆ ಮಾಜಿ ಮಿಲಿಟರಿ ಜನರಲ್ ಗಳು ಟೀವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ; ಮಂತ್ರಿಗಳಾಗುತ್ತಾರೆ; ಇಲ್ಲವೇ ರಾಷ್ಟ್ರೀಯತೆಯ ಪ್ರಚಾರಕರಾಗುತ್ತಾರೆ.

ಪುಲ್ವಾಮಾ ದಾಳಿಗೆ ಎದುರಾಗಿ ಬಾಲಕೋಟ್ ಮೇಲಿನ ಸರ್ಜಿಕಲ್ ಸ್ಟ್ರೈಕ್  ನಡೆಸಿದ್ದೇವೆ, ಅದರ ಮೆಲೆ ನಮಗೆ ಮತ ಹಾಕಿ ಎಂದು ನರೇಂದ್ರ ಮೋದಿ ಯುವಕರಲ್ಲಿ ಕೇಳಿಕೊಂಡಿದ್ದರು. ಅಂಥ ರಾಜಕೀಯ ನಿಚ್ಚಳತೆಯ ಪರಿಸರದ ಮೇಲೆ ನಾವು ಅಗ್ನಿಪಥ ಯೋಜನೆಯನ್ನು ವಿವೇಚಿಸಬೇಕಾಗಿದೆ. ಇಪ್ಪತ್ತರ ಹರೆಯದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು, ವಿವೇಚನೆ ಬಲಿಯದ 30 ವರುಷ ತುಂಬುವುದರೊಳಗೆ ಅವರನ್ನು ನಿರುದ್ಯೋಗಿ ಮಾಡಿ ಆಡಂಭರದ ದೇಶಭಕ್ತಿಯ ನಾಯಕರೊಬ್ಬರು ಏನು ಸಾಧಿಸಬೇಕೆಂದುಕೊಂಡಿದ್ದಾರೆ?

ರಾಜಕೀಯ ಒಳಗುರಿಯ ಜೊತೆಗೆ ಅಗ್ನಿವೀರ ಎಂದರೆ ಕುದುರೆಕೊಂಬು ಎಂದಿತ್ಯಾದಿಯಾಗಿ ಏರಿಸಿಟ್ಟು ನಡೆಸುವ ನೇಮಕಾತಿಯು ಒಂದು ಕೆಟ್ಟ ಆಲೋಚನೆಯಾಗಿದೆ. ಸೈನಿಕರ ಬಲಿದಾನ, ಅವರ ಧೈರ್ಯ ಸಾಹಸ, ಸಿನಿಮಾ ಸೂಪರ್ ಹೀರೋಗಳ ಜೊತೆ ಸಮೀಕರಿಸಿ ಭಾರೀ ವಾಟ್ಸ್ ಆ್ಯಪ್ ಪ್ರಚಾರ ನಡೆದಿರುವುದು ಕಾಣುತ್ತಿದೆ. ನಾವು ನಮ್ಮ ಮುಂದಿನ ತಲೆಮಾರು ಕಲ್ಪಿತ ಶತ್ರುಗಳ ಜೊತೆ ಹೋರಾಡುವುದನ್ನು ಇಲ್ಲವೇ ಹಿಂಸೆಯ ಫ್ಯಾಂಟಸಿ ಲೋಕದಲ್ಲಿ ಬದುಕುವುದನ್ನು ನಾವು ಬಯಸಿಲ್ಲ. ಸರಿಯಾಗಿ ಗನ್ ಬಳಸಲು ಬಾರದೆ, ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲಾಗದ ಅನ್ವೇಷಕ ಹಂತದಲ್ಲೇ ಉಳಿಯುವ ಯುವ ಜನಾಂಗವನ್ನು ನಾವು ನೋಡಬೇಕೆ?

ನಾವು ವೀಡಿಯೋಗೇಮ್ ಮನೋವಿಕಲರ ಸಂಸ್ಕೃತಿಯವರು ಶಾಲೆಗೆ ಸೇರುವುದನ್ನು, ಮುಗ್ಧರನ್ನು ಕೊಲ್ಲುವುದನ್ನು ನೋಡಲು ಬಯಸಿಲ್ಲ. ಇತ್ತೀಚಿನ ವರುಷಗಳಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಶಾಲೆಗಳಲ್ಲಿ ನಡೆದ ಶೂಟ್ ಔಟ್ ಕೊಲೆಗಳನ್ನು ನೋಡಿ ಗನ್ ಪರವಾನಗಿ ಬಗೆಗೆ ಆ ದೇಶ ತುಂಬ ಬೇಸತ್ತುಕೊಂಡಿದೆ. ಪಾಕಿಸ್ತಾನವೂ ಸಹ ಮಕ್ಕಳನ್ನು ಕೊಲ್ಲುವಂಥ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಸರಕಾರವು ಉಗ್ರರನ್ನು ಬೆಂಬಲಿಸುತ್ತಿರುವುದು ತೆರೆದ ಪುಸ್ತಕವಾಗಿದೆ. ಅದರ ದುಷ್ಫಲವನ್ನು ಆ ದೇಶವೇ ಪಡೆಯುತ್ತಿದೆ.

ಇಂದಿನ ಅಂತರ್ಜಾಲ ಯುಗದಲ್ಲಿ ಶಸ್ತ್ರಾಸ್ತ್ರಗಳ ಒಳ ಮಾಹಿತಿಗಳು ಮಿಂಚಿನ ವೇಗದಲ್ಲಿ ಒಂದು ಮೊಬೈಲ್ ನಿಂದ ಇನ್ನೊಂದಕ್ಕೆ ಸಂಚರಿಸುತ್ತದೆ. ಹಾಗಿರುವಾಗ ನಾಗರಿಕ ಸಮಾಜದಲ್ಲಿ ಸಶಸ್ತ್ರ ಪಡೆಗಳನ್ನು ಉಬ್ಬಿಸಿ ತೋರಿಸುವುದು ಸರಿಯೇ? ಬಿಹಾರದ ಮುಂಗರ್ ಮೊದಲಾದ ಕಡೆ ಕಳ್ಳ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ನಾಡ ಪಿಸ್ತೂಲುಗಳು, ಗನ್ನಗಳು, ಅದಕ್ಕೆ ಬೇಕಾದ ಸಿಡಿತಗಳು ಸಿಗುವಾಗ ಇಂಥ ನೇಮಕಾತಿಯು ಹಿಂಸಾ ವಾತಾವರಣವನ್ನು ವೃದ್ಧಿಸುವ ಸಾಧ್ಯತೆಯಿದೆ.

ದೇಶದ ಭದ್ರತೆಯ ಹೆಸರಿನಲ್ಲಿ ಶಸ್ತ್ರ, ಹಿಂಸೆ ಇವುಗಳ ಪ್ರಚಾರವು ದೇಶದ ಆಂತರಿಕ ಭದ್ರತೆಗೆ ಹಾನಿಯುಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ನೆಲೆನಾಟುತ್ತದೆ.

ಸೇನೆಗೆ ಜನರ ಬೆಂಬಲ ಮತ್ತು ಪ್ರೋತ್ಸಾಹ ಬೇಕು. ಆದರೆ ಸೇನೆಯು ವಿವೇಚನೆಯಿಲ್ಲದೆ ಕಾರ್ಯವೆಸಗುವಂತಿಲ್ಲ. ದೇಶದ ಗಡಿಯಲ್ಲಾಗಲಿ, ದೇಶದ ಒಳಗಾಗಲಿ ರಾಜಕೀಯ ಮತ್ತಿತರ ಸಂಘರ್ಷಗಳನ್ನು ಕೊನೆಗಾಣಿಸುವಲ್ಲಿ ನಮಗಿರುವ ಕೊನೆಯ ಆಸರೆ ಸೇನಾ ದಂಡು. ಅವು ಸ್ವತಂತ್ರವಾಗಿ ಕಾರ್ಯವೆಸಗಲು ಬಿಡೋಣ.

Join Whatsapp