ಮಲಪ್ಪುರಂ: ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣದಿಂದ ಗರ್ಭಿಣಿ ಮಹಿಳೆಯೋರ್ವರ ಅವಳಿ ಮಕ್ಕಳು ಹೊಟ್ಟೆಯಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ಮಲಪ್ಪುರಂನಲ್ಲಿ ರವಿವಾರ ನಡೆದಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.
ಮಹಿಳೆ ಕೋವಿಡ್ 19ರಿಂದ ಗುಣಮುಖರಾಗಿದ್ದು ಸೆ.15ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಅವರನ್ನು ಸೇರಿಸಿಕೊಳ್ಳಲು ನಿರಾಕರಿಸಿದೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ ತಾನು ನೆಗಟೀವ್ ಎಂಬುದನ್ನು ಸಾಬೀತುಪಡಿಸಲು ಬೇಕಾದ ಆರ್.ಟಿ-ಪಿಸಿಆರ್ ಪರೀಕ್ಷೆ ವರದಿಯನ್ನು ಆಕೆ ಹೊಂದಿರಲಿಲ್ಲ ಎಂಬುದಾಗಿ ಮೂರು ಆಸ್ಪತ್ರೆಗಳು ಹೇಳಿವೆ. ಮಹಿಳೆಯ ಪತಿ ಶರೀಫ್ ಆಕೆಯನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ 14 ಗಂಟೆಗಳ ಕಾಲ ತೀವ್ರ ಪ್ರಯತ್ನ ಪಟ್ಟಿದ್ದರು.
ಪತ್ನಿಯನ್ನು ಆಸ್ಪತ್ರೆಯಲ್ಲಿ ದಾಖಲಿಸುವುದಕ್ಕಾಗಿ ತಾನು ಎರಡು ಜಿಲ್ಲೆಗಳ ಮಧ್ಯೆ ಓಡಾಡಿದ್ದು, ಅಂತಿಮವಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೇರಿಸಿಕೊಳ್ಳಲಾಯಿತು ಎಂದು ಪತಿ ಆಸಿಫ್ ಹೇಳಿದ್ದಾರೆ. ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.