ಮುಂಬೈ : ಚುನಾವಣಾ ರಣನೀತಿ ತಂತ್ರಜ್ಞ ಪ್ರಶಾಂತ್ ಕಿಶೋರ್ ಮಹಾರಾಷ್ಟ್ರದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಇಂದು ಭೇಟಿಯಾಗಿರುವುದು ಹಲವು ಚರ್ಚೆಗಳಿಗೆಡೆ ಮಾಡಿಕೊಟ್ಟಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಪರ ಚುನಾವಣಾ ರಣನೀತಿ ರೂಪಿಸಿ ಯಶಸ್ಸು ಗಳಿಸಿದ ಪ್ರಶಾಂತ್ ಅವರ ಶರದ್ ಪವಾರ್ ಭೇಟಿ, 2024ರ ಲೋಕಸಭಾ ಚುನಾವಣೆಗೆ ಹೊಸ ಮೈತ್ರಿಕೂಟ ರಚಿಸುವ ಮುನ್ಸೂಚನೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯಾಗಿದೆ.
ತಾಂತ್ರಿಕವಾಗಿ ಇದೊಂದು ಕೃತಜ್ಞತೆ ಸಮರ್ಪಣಾ ಭೇಟಿ. ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ರನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲು ಪ್ರಶಾಂತ್ ಕಿಶೋರ್ ಭೇಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಗಳ ಬಳಿಕ ತಾನು ಚುನಾವಣಾ ರಣನೀತಿ ತಂತ್ರಗಾರಿಕೆಯ ಕ್ಷೇತ್ರಗಳನ್ನು ತೊರೆಯಲು ನಿರ್ಧರಿಸಿರುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದರು. ತಾನು ಈ ಕಾರ್ಯದಲ್ಲಿ ಸಣ್ಣ ವಿರಾಮವೊಂದನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು. ಹೀಗಾಗಿ, ಪ್ರಶಾಂತ್ ಕಿಶೋರ್ ಮತ್ತೆ ಸಕ್ರಿಯ ರಾಜಕಾರಣಕ್ಕೆ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಅಥವಾ ತನ್ನ ಸ್ವಂತ ಪಕ್ಷ ಕಟ್ಟುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಗುತ್ತಿದೆ.