ಜನಸಂಖ್ಯಾ ಹೆಚ್ಚಳ ಸತ್ಯ ಮತ್ತು ಮಿಥ್ಯ

Prasthutha|

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಉತ್ತರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಈಗಾಗಲೇ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸಲು ತೀರ್ಮಾನಿಸಿವೆ. ಉತ್ತರಪ್ರದೇಶ ಸರಕಾರವು ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಏಕೆ ಪ್ರಯತ್ನಿಸುತ್ತಿದೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಅಲ್ಲಿ ಚುನಾವಣೆಗೆ ಕೇವಲ 6 ತಿಂಗಳು ಬಾಕಿ ಇದೆ. ಅಲ್ಲಿಯ ಮುಖ್ಯಮಂತ್ರಿ ತಮ್ಮ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಸಂಪೂರ್ಣ ವಿಫಲವಾಗಿರುವುದರಿಂದ ಮುಂದಿನ ಚುನಾವಣೆಯನ್ನು ಎದುರಿಸಲು ಇಂಥದ್ದು ಬೇಕು. ಜನಸಂಖ್ಯಾ ನಿಯಂತ್ರಣ ಕಾಯಿದೆ ಅದರ ಒಂದು ಭಾಗವಾಗಿದೆ.

- Advertisement -

ಹಾಗೆಯೇ ಕೇಂದ್ರ ಸರಕಾರವೂ ಕಳೆದ ಏಳು ವರ್ಷಗಳ ತನ್ನ ವೈಫಲ್ಯಗಳನ್ನು ಕೂಡಾ ‘ಜನಸಂಖ್ಯೆ‘ಯ ತಲೆಗೆ ಕಟ್ಟುವ ಪ್ರಯತ್ನ ನಡೆಸುತ್ತಿದೆ. 2019ರ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಭಾಷಣದಲ್ಲಿ ‘ಯಾವ ಕುಟುಂಬ ಕಡಿಮೆ ಮಕ್ಕಳನ್ನು ಹೊಂದುತ್ತದೋ ಅದು ದೇಶ ಭಕ್ತಿಯ ಸಂಕೇತ ಅಥವಾ ಚಿಕ್ಕ ಕುಟುಂಬ ದೇಶ ಪ್ರೇಮದ ಕುರುಹು’ ಎಂದಿದ್ದರು. ಇದರ ಅರ್ಥ ನಮ್ಮ ದೇಶದಲ್ಲಿ ಜನಸಂಖ್ಯಾ ಸ್ಫೋಟಗೊಳ್ಳುತ್ತಿದೆ. ಜನಸಂಖ್ಯಾ ಸ್ಫೋಟದಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಬಡತನ, ನಿರುದ್ಯೋಗ, ಅನಾರೋಗ್ಯ, ಅಪೌಷ್ಟಿಕತೆ ಹೆಚ್ಚುತ್ತಿರುವುದೆಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪಕ್ಷ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟೇ ಚುನಾವಣೆಯನ್ನು ಎದುರಿಸುತ್ತಿದೆ. ಮುಸ್ಲಿಮರಿಂದಾಗಿ ಜನಸಂಖ್ಯೆ ಹೆಚ್ಚುತ್ತಿದೆ. ಈ ರಾಷ್ಟ್ರವನ್ನು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವನ್ನಾಗಿ ಮಾಡುವುದೇ ಅವರ ಉದ್ದೇಶವಾಗಿರುವುದರಿಂದ ತಮ್ಮ ಜನಸಂಖ್ಯೆಯನ್ನು ವರ್ಧಿಸುತ್ತಿದ್ದಾರೆಂದು ಜನರ ಮಧ್ಯೆ ವಿಷ ಬೀಜ ಬಿತ್ತಲಾಗುತ್ತಿದೆ. ಆದುದರಿಂದಲೇ ಉತ್ತರಪ್ರದೇಶದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ‘ಹಿಂದೂಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು’. ಬಿಜೆಪಿಯ ತೇಜಸ್ವಿನಿ ಗೌಡ ‘ಪ್ರತಿಯೊಬ್ಬ ಹಿಂದು ಹೆಣ್ಣು ಮಕ್ಕಳು ಐದೈದು ಮಕ್ಕಳನ್ನು ಹೆರಬೇಕು’. ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ‘ಈ ದೇಶದಲ್ಲಿ ಹಿಂದೂಗಳಿಗೆ ದೊಡ್ಡ ಅಪಾಯವಿದೆ. ಮುಸ್ಲಿಮರ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಕನಿಷ್ಠ 5 ಮಕ್ಕಳನ್ನು ಹೊಂದಬೇಕು’ ಸನಾತನ ಮಹಾಸಂಸ್ಥಾನ ಎಂಬ ಸಂಘಟನೆಯ ಪ್ರಭೋದಾನಂದಗಿರಿ ಎಂಬವರು ‘ಪ್ರತಿಯೊಬ್ಬ ಹಿಂದು 8ಮಕ್ಕಳನ್ನು ಮಾಡಬೇಕೆಂದು’ ಕರೆಕೊಟ್ಟಿದ್ದಾರೆ. ಆರ್ ಎಸ್ ಎಸ್ ಸರ ಸಂಘ ಚಾಲಕರಾದ ಮೋಹನ್ ಭಾಗವತ್, ‘ಮುಸ್ಲಿಮರ ಜನಸಂಖ್ಯೆ ಜಾಸ್ತಿಯಾಗುತ್ತಿದೆ, ಹಿಂದೂಗಳ ಜನಸಂಖ್ಯೆ ಏಕೆ ಜಾಸ್ತಿ ಮಾಡಬಾರದು, ಹಿಂದೂಗಳು ಕೂಡಾ ಜನಸಂಖ್ಯೆ ಜಾಸ್ತಿ ಮಾಡಿ’ ಎಂದು ಬಹಿರಂಗವಾಗಿ 2016ರಲ್ಲಿ ತನ್ನ ಭಾಷಣದಲ್ಲಿ ಕರೆ ಕೊಟ್ಟಿದ್ದಾರೆ.


ಒಂದು ಕಡೆಯಲ್ಲಿ ಒಂದು ಕುಟುಂಬಕ್ಕೆ 2ಕ್ಕಿಂತ ಜಾಸ್ತಿ ಮಕ್ಕಳಾದರೆ ಶಿಕ್ಷಿಸುತ್ತೇವೆ ಎಂದು ಹೇಳುವ ಯೋಗಿ ಆದಿತ್ಯನಾಥ್ ರ ಪ್ರಸ್ತಾಪ, ಮತ್ತೊಂದು ಕಡೆ ಅವರ ಶಾಸಕ, ಸಂಸದ ಮತ್ತು ಅವರ ಸೈದ್ಧಾಂತಿಕ ಮಾರ್ಗದರ್ಶಿಗಳೇ ಹಿಂದೂಗಳಿಗೆ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಕರೆ ನೀಡುವ ವೈರುಧ್ಯತೆಯನ್ನು ನಾವು ನೋಡುತ್ತಿದ್ದೇವೆ. ಹಾಗಾದರೆ ಈ ಕಾಯಿದೆಯ ಉದ್ದೇಶ ಏನು? ಎಂಬುದು ಚಿಂತನಾರ್ಹ ವಿಷಯವಾಗಿದೆ.
ನಿಜವಾಗಿಯೂ ನಮ್ಮ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಜಾಸ್ತಿಯಾಗುತ್ತಿದೆಯೇ ಎಂದು ಸರಕಾರದ ಅಂಕಿಅಂಶಗಳಿಂದಲೇ ನಾವು ಪರಿಶೀಲಿಸೋಣ. ಜನಸಂಖ್ಯೆ ಏರಿಕೆಯಗತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಜಗತ್ತಿನ ಜನಸಂಖ್ಯಾಶಾಸ್ತ್ರಜ್ಞರು Fertility Rate ಮಾಪನವನ್ನು ಬಳಸುತ್ತಾರೆ. ಈ Fertility Rate ಎಂದರೆ ಒಂದು ದೇಶದ ಒಂದು ಹೆಣ್ಣು ಆಕೆಯ 18 ವಯಸ್ಸಿನಿಂದ 49ವಯಸ್ಸಿನ ಅವಧಿಯನ್ನು ಫಲವಂತಿಕೆಯ ಅವಧಿ (Fertility Period) ಎಂದು ಕರೆಯುತ್ತಾರೆ. 18ರಿಂದ 49 ವಯಸ್ಸಿನ ಈ ಅವಧಿಯಲ್ಲಿ ಒಬ್ಬ ಹೆಣ್ಣು ಎಷ್ಟು ಮಕ್ಕಳಿಗೆ ಜನ್ಮ ಕೊಡುತ್ತಾಳೆ ಎಂಬುದನ್ನು Fertility Rate ಎನ್ನುತ್ತಾರೆ. ಈ Fertility Rate 2.1ಕ್ಕಿಂತ ಮೇಲಿದ್ದರೆ ಜನಸಂಖ್ಯೆ ಹೆಚ್ಚುತ್ತಿದೆ, ಅದಕ್ಕಿಂತ ಕೆಳಗಿದ್ದರೆ ಜನಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಅದಕ್ಕೆ ಸಮಾನಾಗಿದ್ದರೆ ಅಂದರೆ 2.1ಇದ್ದರೆ ಸ್ಥಿರಗೊಂಡಿದೆ ಎಂದು ಅರ್ಥೈಸುತ್ತಾರೆ. ಯಾವುದೇ ದೇಶ ಅಥವಾ ರಾಜ್ಯದ Fertility Rate 2.1 ಆಗಿದ್ದರೆ ವಿಶ್ವಸಂಸ್ಥೆಯ ತಜ್ಞರು ಅದನ್ನು ಪುನರ್ ಸ್ಥಾಪನೆ ದರ replacement Rate ಎನ್ನುತ್ತಾರೆ. ಈ replacement Rate 2.1 ಇರಬೇಕು. ಈಗ ಅಪ್ಪಅಮ್ಮಂದಿರು ಇಬ್ಬರು, ಮಕ್ಕಳು ಇಬ್ಬರು. ಈ ಅಪ್ಪಅಮ್ಮಂದಿರು ಸಾಯುತ್ತಾರೆ. ಆ ಜಾಗದಲ್ಲಿ ಈ ಇಬ್ಬರು ಮಕ್ಕಳು ಬರುತ್ತಾರೆ. ಹೀಗಾಗಿ ದೇಶಾದ್ಯಂತ ಜನಸಂಖ್ಯೆ ಎಷ್ಟು ಇರುತ್ತೊ ಅಷ್ಟೇ ಇರುತ್ತೆ. replacement Rate ಅನ್ನುವಂತಹದು 2.1 ಇರಬೇಕು. ಯಾವ ಯಾವ ದೇಶದಲ್ಲಿ ಅಥವಾ ರಾಜ್ಯಗಳಲ್ಲಿ replacement Rate 2.1ಕ್ಕಿಂತ ಕಡಿಮೆಯಾಗುತ್ತದೆಯೋ ಆ ದೇಶದಲ್ಲಿ ಒಟ್ಟಾರೆ ಜನಸಂಖ್ಯೆಯೂ ನಿಧಾನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ.


ಕಳೆದ 2011ರ ವರದಿಗಳನ್ನು ನೋಡುವುದಾದರೆ ಎಲ್ಲೆಲ್ಲಿ ಯಾವ ಯಾವ ರಾಜ್ಯಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವದ್ಧಿ ಜಾಸ್ತಿಯಾಗಿದೆಯೋ ಅಲ್ಲಿ ಮುಸ್ಲಿಮರ Fertility Rate ಕಡಿಮೆಯಾಗಿದೆ. National Family Health Survey ಅದರ ಅಂಕಿಅಂಶ ಪ್ರಕಾರ 2005 -06ರಲ್ಲಿ ಹಿಂದೂಗಳ ಒಟ್ಟಾರೆ Fertility Rate 2.59 ಇತ್ತು. ಅದು 2015 – 16ರಲ್ಲಿ 2.13ಕ್ಕೆ ಇಳಿಯಿತು. ಅಂದರೆ ಇಳಿಕೆಯ ದರ 0.46 ಆದರೆ ಮುಸ್ಲಿಮರದ್ದು 2005-06 ರಲ್ಲಿ Fertility Rate 3.40. ಅದು ಹತ್ತು ವರ್ಷಗಳ ನಂತರ 2015-16ರಲ್ಲಿ 2.16ಕ್ಕೆ ಇಳಿದಿದೆ. ಅಂದರೆ ಇಳಿಕೆಯ ವೇಗ 0.79. ಹಿಂದೂಗಳ ಜನಸಂಖ್ಯೆ ಇಳಿಕೆಯ ವೇಗ 0.46. ಆದರೆ ಮುಸ್ಲಿಮರ ಜನಸಂಖ್ಯೆ ಇಳಿಕೆಯ ವೇಗ 0.79. ಅಂದರೆ ಜನಸಂಖ್ಯೆ ಇಳಿಕೆಯ ವೇಗ ಹಿಂದೂಗಳಿಗಿಂತ ಹೆಚ್ಚು ಕಡಿಮೆ ಒಂದುವರೆ ಪಟ್ಟು ವೇಗವಾಗಿಮುಸ್ಲಿಮರ ಜನಸಂಖ್ಯೆ ಇಳಿಕೆಯಾಗುತ್ತಿದೆ. ಭಾರತದ ಒಟ್ಟು ಜನಸಂಖ್ಯೆ 140 ಕೋಟಿ. ಅದರಲ್ಲಿ 25ಕೋಟಿಯಷ್ಟು ಮುಸ್ಲಿಮರು 79 ಕೋಟಿಯಷ್ಟು ಹಿಂದೂಗಳು. ಮುಸ್ಲಿಮರ ಜನಸಂಖ್ಯೆ ಯಾವತ್ತೂ ಕೂಡಾ ಜಾಸ್ತಿಯಾಗಲ್ಲ.


ಕಳೆದ ಮೂವತ್ತು ವರ್ಷಗಳಲ್ಲಿ ಹಿಂದೂಗಳ Fertility Rate 3.3ರಿಂದ 2.1ಕ್ಕೆ ಇಳಿಯಿತು. ಮುಸ್ಲಿಮರದ್ದು 4.4ರಿಂದ 2.6ಕ್ಕೆ ಇಳಿಯಿತು. ಮೂವತ್ತು ವರ್ಷಗಳ ಹಿಂದೆ ಹಿಂದು ಮತ್ತು ಮುಸ್ಲಿಮರ ಫಲವಂತಿಕೆಯ ವ್ಯತ್ಯಾಸ 1.1 ಇದ್ದರೆ ಅದು ಇವತ್ತು ಕೇವಲ 0.5 ಮತ್ತು ಇಳಿಕೆಯ ವೇಗ ಎಷ್ಟು ಇದೆ ಎಂದರೆ 0.75 ರಷ್ಟು ಇಳಿಕೆಯವೇಗ. ಹಿಂದೂಗಳದ್ದು 0.4 ಇದ್ದರೆ ಮುಸ್ಲಿಮರದ್ದು 0.7 ಇರುವುದರಿಂದ ಮುಸ್ಲಿಮರ ಜನಸಂಖ್ಯೆ ಇನ್ನೂ ವೇಗವಾಗಿ ಇಳಿಯುತ್ತಾ ಹೋಗುತ್ತದೆ. ಭಾರತದ ನಿವತ್ತ ಮುಖ್ಯ ಚುನಾವಣಾಧಿಕಾರಿ ಎಸ್.ವೈ. ಕುರೇಶಿಯವರು Population ಬಗ್ಗೆ ಅಧ್ಯಯನ ಮಾಡಿ ಒಂದು ಪುಸ್ತಕ ಬರೆದಿದ್ದಾರೆ. ‘The population myth islam Family Planing and Politics in India’ ‘ಪುಸ್ತಕದಲ್ಲಿ ಅವರು ಸ್ಪಷ್ಟವಾಗಿ ಹೇಳುತ್ತಾರೆ. ನಮ್ಮ ದೇಶದಲ್ಲಿ ಯಾವ ಶತಮಾನದಲ್ಲೂ ಮುಸ್ಲಿಮರ ಜನಸಂಖ್ಯೆ ಹಿಂದೂಗಳ ಜನಸಂಖ್ಯೆಯನ್ನು ಮೀರಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಹಿಂದೂಗಳ ಜನಸಂಖ್ಯೆಯ ಏರಿಕೆಯ ವೇಗಕ್ಕಿಂತ ಮುಸ್ಲಿಮರ ಜನಸಂಖ್ಯೆ ಏರಿಕೆಯ ವೇಗ ಕಡಿಮೆಯಾಗುತ್ತಾ ಬರುತ್ತಿದೆ ಕುಂಠಿತವಾಗುತ್ತಿದೆ. ಇನ್ನು ಹತ್ತು ವರ್ಷ ದಾಟಿದ ಮೇಲೆ ಇಬ್ಬರದ್ದು ಕೂಡಾ ಏರಿಕೆಯ ವೇಗ ಒಂದೇ ಆಗಿ ಬಿಡುತ್ತದೆ. ಆನಂತರ ಅದು ಕುಸಿಯುತ್ತಾ ಹೋಗುತ್ತದೆ. ಅಂದಾಜು ಈ ದೇಶದಲ್ಲಿ 2060ರ ವೇಳೆಗೆ 100 ಕೋಟಿಯಷ್ಟು ಹಿಂದೂಗಳು 26-28 ಕೋಟಿಯಷ್ಟು ಮುಸ್ಲಿಮರಿರುತ್ತಾರೆ. 2060ರ ನಂತರ ಇವೆರಡೂ ಕುಸಿತವಾಗುತ್ತಾ ಹೋಗುತ್ತದೆ. 2100ರಲ್ಲಿ ಭಾರತದ ಜನಸಂಖ್ಯೆ ಒಟ್ಟಾರೆ 109 ಕೋಟಿಯಷ್ಟಿರುತ್ತದೆ. ಆಗ proportionate (ಅನುಪಾತವಾಗಿ) ಮುಸ್ಲಿಮರ ಜನಸಂಖ್ಯೆ 16-17 ಕೋಟಿಯಷ್ಟು ಮಾತ್ರ ಇರುತ್ತದೆ. ಆಗಲೂ ಹಿಂದೂಗಳೇ ಪ್ರಧಾನವಾಗಿ ಬಹುಸಂಖ್ಯಾತರಾಗಿಯೇ ಇರುತ್ತಾರೆ. ಈ ಎಲ್ಲಾ ಅಂಕಿಅಂಶಗಳ ಪ್ರಕಾರ ಮುಸ್ಲಿಮರ ಫಲವಂತಿಕೆ ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ ಈ ದೇಶದಲ್ಲಿ ಮುಸ್ಲಿಮರು ಹಿಂದೂಗಳಿಗಿಂತ ಜನಸಂಖ್ಯೆಯಲ್ಲಿ ಜಾಸ್ತಿಯಾಗಲು ಸಾಧ್ಯವೇ ಇಲ್ಲ.


ಯಾವ ರಾಜ್ಯಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವದ್ಧಿಯಾಗಿದೆಯೋ ಆ ರಾಜ್ಯಗಳಲ್ಲಿ ಹಿಂದೂಗಳ Fertility Rate ಗಿಂತ ಮುಸ್ಲಿಮರ Fertility Rate ಸಾಪೇಕ್ಷವಾಗಿ ಕಡಿಮೆಯಾಗಿದೆ. ಹೀಗಾಗಿ ಮುಸ್ಲಿಮರು ವಿಶೇಷವಾಗಿ ಜನಸಂಖ್ಯೆಯನ್ನು ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಯಾವ ಪುರಾವೆಯನ್ನು ಅದು ಕೊಡುವುದಿಲ್ಲ. ಈ ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗಲು ಹಿಂದೂಗಳದ್ದು ಎಷ್ಟು ಕೊಡುಗೆ ಇದೆಯೋ ಅದರ ಒಂದೂವರೆ ಪಟ್ಟು ಜಾಸ್ತಿ ಕೊಡುಗೆ ಮುಸ್ಲಿಮರದ್ದು ಇದೆ. ಮುಸ್ಲಿಮರ ಜನಸಂಖ್ಯೆ ಜಾಸ್ತಿಯಾಗುವ ಯಾವ ಅಪಾಯವೂ ಇಲ್ಲ.


‘ಪಾಪುಲೇಶನ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆ’ ಭಾರತದಲ್ಲಿ ಜನಸಂಖ್ಯೆ ಈಗಾಗಲೇ ಕುಸಿತ ಕಂಡಿರುವುದರಿಂದ ಜನಸಂಖ್ಯೆ ನಿಯಂತ್ರಣ ಕಾಯಿದೆಯ ಅವಶ್ಯಕತೆಯೇ ಇಲ್ಲ ಎಂದಿದೆ. ನಮ್ಮ ದೇಶದಲ್ಲಿ 1950ರಲ್ಲಿ Fertility Rate 5.9 ಇತ್ತು. ಅದು ಇವತ್ತು ಸರಾಸರಿ ಕೇವಲ 2.6 ಆಗಿದೆ. ಅಂದರೆ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಜನಸಂಖ್ಯೆ ಏರಿಕೆಯ ದರದಲ್ಲಿ ಪ್ರತೀ ದಶಕದಲ್ಲೂ ಕಡಿಮೆಯಾಗುತ್ತಾ ಬರುತ್ತಿದೆ. 2030ಕ್ಕೆ Fertility Rate 1.8ಕ್ಕೆ ಇಳಿಯುತ್ತದೆ. ಈಗ ಸುಮಾರು 25 ರಾಜ್ಯಗಳಲ್ಲಿ Fertility Rate Replacement Rate ಗಿಂತ ಕಡಿಮೆಯಿದೆ. ಅಲ್ಲಿ ಯಾವುದೇ ಕಾನೂನಿನ ಅಗತ್ಯವಿಲ್ಲ. ಈ ರೀತಿ Replacement Rate ಗಿಂತ ಕಡಿಮೆಯಾಗುತ್ತಾ ಹೋಗಿಬಿಟ್ಟರೆ ಒಬ್ಬ ದುಡಿಯುವ ಯುವಕ ಅಥವಾ ಯುವತಿಯ ಮೇಲೆ ನಾಲ್ಕಕ್ಕೂ ಅಧಿಕ ಮಂದಿ ಅವಲಂಬಿಸುವ ಪರಿಸ್ಥಿತಿ ಬಂದು ಬಿಡುತ್ತದೆ. ಅವರ ಅಪ್ಪಅಮ್ಮ ಮತ್ತು ಅಜ್ಜ ಅಜ್ಜಿ. ಈಗ ಚೀನಾ ದೇಶ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.


1978ರಲ್ಲಿ ಚೀನಾ ದೇಶ ‘ಒಂದೇ ಮಗು‘ ಎಂಬ ನೀತಿಯನ್ನು ಜಾರಿಗೊಳಿಸಿತು, ಅಲ್ಲಿ ಕಠಿಣ ಜನಸಂಖ್ಯಾ ನಿಯಂತ್ರಣ ಕ್ರಮಗಳಿಂದಾಗಿ ಜನಸಂಖ್ಯೆ ಶೇಕಡವಾರು ಇಳಿಕೆಯಾಗುತ್ತಾ ಬಂತು. 60 ವರ್ಷ ಮೇಲ್ಪಟ್ಟವರ ಸಂಖ್ಯೆ 26ಕೋಟಿಗೆ ಹೆಚ್ಚಳವಾಯಿತು. ಇದರಿಂದ ದೇಶವೇ ವದ್ಧಾಶ್ರಮವಾಗುವ ಭೀತಿಯಲ್ಲಿತ್ತು. ಅಲ್ಲದೆ ಇದು ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮವನ್ನು ಬೀರುತ್ತದೆಂದು ತಜ್ಞರು ಅಭಿಪ್ರಾಯಪಟ್ಟರು. ಜನಸಂಖ್ಯೆ ಗಂಭೀರ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದನ್ನು ಮನಗಂಡು 2016ರಲ್ಲಿ ‘ಒಂದು ಮಗು‘ ನಿಯಮ ಸಡಿಲಿಸಿ ‘ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಲಾಯಿತು. ಆದರೆ ಇದೂ ಕೂಡಾ ಹೆಚ್ಚಿನ ಫಲ ಕೊಟ್ಟಿಲ್ಲ. 2016 ರಿಂದ 2020 ರವರೆಗೆ ಚೀನಾದಲ್ಲಿ ಜನನ ಪ್ರಮಾಣ ಸತತವಾಗಿ ಕುಸಿಯುತ್ತಿದೆ. ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯ ರಾಷ್ಟ್ರವಾದ ಚೀನಾದಲ್ಲಿ ಮುಂದಿನ ವರ್ಷದಿಂದ ದೊಡ್ಡ ಪ್ರಮಾಣದ ಕಾರ್ಮಿಕರ ಕೊರತೆ ಹಾಗೂ ಬಳಕೆಗಾರರ ಕೊರತೆ ಎದುರಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದರು. ಅಲ್ಲದೆ ನುರಿತ ಕಾರ್ಮಿಕರ ಸಂಖ್ಯೆಯಲ್ಲಿನ ತೀವ್ರ ಕುಸಿತವು ವಿಶ್ವದ ಪ್ರಥಮ ಆರ್ಥಿಕ ಶಕ್ತಿಯಾಗಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೇಶದ ಜನಸಂಖ್ಯೆಯು ವೇಗವಾಗಿ ವದ್ಧಾಪ್ಯದತ್ತ ಚಲಿಸುತ್ತಿರುವುದು ಜನಗಣತಿಯಲ್ಲಿ ಬೆಳಕಿಗೆ ಬಂದ ಬಳಿಕ ದಂಪತಿ ಗರಿಷ್ಠ ಮೂರು ಮಕ್ಕಳನ್ನು ಪಡೆಯಬಹುದೆಂದು ತನ್ನ ಕುಟುಂಬ ಯೋಜನೆ ನೀತಿಯಲ್ಲಿ ಮಾರ್ಪಾಡು ಮಾಡಿತು. ಮೂರು ಮಕ್ಕಳನ್ನು ಪಡೆಯಬಹುದು ಎಂದು ಹೇಳಿದರೂ ಯುವಕರು ಮಕ್ಕಳನ್ನು ಮಾಡಿಕೊಳ್ಳವುದಿರಲಿ, ಮದುವೆಯೇ ಬೇಡ ಎನ್ನುತ್ತಿದ್ದಾರೆ. ಯುವಕರು ವಿವಾಹವಾಗಲು ಮತ್ತು ಮಕ್ಕಳನ್ನು ಪಡೆಯಲು ಅಲ್ಲಿನ ಸರಕಾರ ವಿವಿಧ ಯೋಜನೆಗಳ ಮೂಲಕ ಪ್ರೋತ್ಸಾಹಿಸುತ್ತಿದೆ.
1978ರಲ್ಲಿ ಚೀನಾ ‘ಒಂದು ಮಗು‘ ಕಾಯಿದೆ ಜಾರಿಗೊಳಿಸಿದಾಗ ಮಹಿಳೆಯರನ್ನು ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಚೀನಾ ಅದರ ಸೈಡ್ ಎಫೆಕ್ಟ್ ನ್ನು ಈಗ ಎದುರಿಸುತ್ತಿದೆ. ಚೀನಾದ ‘ಜಿಯಾಂಗ್ಜಿ ಯಾಟೊಂಗ್’ ವಿಶ್ವವಿದ್ಯಾನಿಲಯದ ತಜ್ಞ ಡಾ. ರೆಲ್ಬ್ರಿಕರ್ ‘ಗರ್ಭಧಾರಣೆ, ಸಂತಾನೋತ್ಪತ್ತಿಯಂತಹ ಸೂಕ್ಷ್ಮ ವಿಷಯಗಳಿಗೆ ಶಿಕ್ಷಿಸುವ ಮನೋಭಾವದ ಯಾವುದೇ ಕಾನೂನು ಮಾನವಹಕ್ಕುಗಳ ಉಲ್ಲಂಘನೆ’ ಎಂದು ಹೇಳಿದ್ದಾರೆ. ಬೇರೆ ದೇಶಗಳು ಚೀನಾದಂತೆ ಮಾಡುವುದು ಬೇಡ ಎಂದಿದ್ದಾರೆ. ಪೋಲೆಂಡ್, ಹಂಗೇರಿ, ದಕ್ಷಿಣ ಕೊರಿಯಾದಂತಹ ದೇಶಗಳು ಅವರ ಪ್ರಜೆಗಳಿಗೆ ‘ಹೆಚ್ಚು ಹಡೆಯಿರಿ, ದೇಶ ಕಾಪಾಡಿರಿ‘ ಎನ್ನುವ ಸಂದೇಶ ನೀಡಿವೆ. 2016ರಲ್ಲಿ ಗರ್ಭಪಾತವನ್ನು ನಿಷೇಧಿಸಿರುವ ಪೋಲೆಂಡ್, ತಾಯಿಯ ಗರ್ಭದ ಪ್ರತೀ ಮಗುವನ್ನು ಕಾಪಾಡಲು ಪಣ ತೊಟ್ಟಿದೆ. ಹಂಗೇರಿ ಸಹ ಕಾನೂನು ಜಾರಿಮಾಡಿದೆ. ದಕ್ಷಿಣ ಕೊರಿಯಾ ಕಾನೂನಿನ ಜೊತೆ ದಂಪತಿಗಳಿಗೆ ಪ್ರಿಯವಾಗುವ ಅನೇಕ ಲಾಭದಾಯಕ ಯೋಜನೆಗಳನ್ನು ಘೋಷಿಸಿದೆ. ತೆರಿಗೆ ವಿನಾಯಿತಿ, ಮನೆಕಟ್ಟಲು, ನಿವೇಶನ ಕೊಳ್ಳಲು ಬಡ್ಡಿರಹಿತ ಸಾಲ, ಹೆಚ್ಚು ಮಕ್ಕಳ ಹಡೆದರೆ ಉಚಿತ ಫ್ಲಾಟ್, ದಂಪತಿಗಳು ಲೈಂಗಿಕ ಕ್ರಿಯೆ ನಡೆಸಲು ವಿಶೇಷ ರಜೆ, ಹುಟ್ಟಿದ ಮಕ್ಕಳಿಗೆ, ಬಾಣಂತಿಯರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಹೀಗೆ ಜನಸಂಖ್ಯೆ ಹೆಚ್ಚಿಸಲು ಹತ್ತು ಹಲವು ಆಮಿಷ ಒಡ್ಡುತ್ತಿದೆ. ಚೀನಾ ಕೂಡಾ ಇಂಥದ್ದೇ ಕೆಲವು ಪ್ರಯತ್ನ ಮಾಡುತ್ತಿದೆ. ಚೀನಾದ ಕ್ರಾಂತಿಕಾರಿ ನಾಯಕ ಮಾವೋ ‘ಹೆಚ್ಚು ಜನರಿದ್ದರೆ ಅದು ಸಮಸ್ಯೆಯೇ ಅಲ್ಲ‘. ಅವರೆಲ್ಲ ಇಟ್ಟಿಗೆಗಳಿದ್ದಂತೆ, ಅದನ್ನು ಸರಿಯಾಗಿ ಜೋಡಿಸುವ ಕಲೆಗಾರನಿಗೆ ಮಾತ್ರ ಅದರ ಮಹತ್ವ ಗೊತ್ತಿರುತ್ತದೆ.‘ ಎಂದು ಹೇಳಿದ್ದಾರೆ. ‘ಜನಸಂಖ್ಯೆ ಕಡಿಮೆಯಾಗುತ್ತಾ ಹೋಗಿ ಕೋಣೆಯ ದೀಪವನ್ನಾರಿಸಲು ಒಬ್ಬನೇ ಒಬ್ಬ ಇರುವುದಿಲ್ಲ. ಶೀಘ್ರವಾಗಿ ಏನಾದರೂ ಮಾಡಿ ನಮ್ಮ ಸಂತತಿ ಅಳಿಯುವುದನ್ನು ತಡೆಯಿರಿ‘ ಎಂದು ಹಂಗರಿಯ ಪ್ರಧಾನಿ ವಿಕ್ಟರ್ ಒರ್ಬನ್ 2020 ಸಪ್ಟೆಂಬರ್ ನಲ್ಲಿ ವೈದ್ಯರ, ಸಮಾಜವಿಜ್ಞಾನಿಗಳ ಸಮಾವೇಶದಲ್ಲಿ ಕರೆ ನೀಡಿದರು.


ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ ಎಂದು ಕಾನೂನು ರೂಪಿಸಿದ ಭಾರತದ 12 ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳು ಈಗಾಗಲೇ ಅದನ್ನು ಹಿಂಪಡೆದಿವೆ. ವಿಶ್ವದ ಇತರ ದೇಶಗಳಲ್ಲೂ ಇಂತಹ ಕಾನೂನುಗಳು ವೈಫಲ್ಯ ಕಂಡಿವೆ. ಕಾಯಿದೆಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿದ ಮಧ್ಯಪ್ರದೇಶ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ನಿರ್ಮಲಾ ಭಟ್, ‘ಇಂತಿಷ್ಟೇ ಮಕ್ಕಳನ್ನು ಮಾಡಿಕೊಳ್ಳಿ ಎಂದು ಒತ್ತಾಯ ಮಾಡುವ ಕಾನೂನು ಜಾರಿ ಮಾಡುವುದು, ಪಾಲಿಸದಿದ್ದರೆ ಸೌಲಭ್ಯ ಕಡಿತಗೊಳಿಸುವುದೆಲ್ಲ ಪ್ರಜಾಪ್ರಭುತ್ವ ಮತ್ತು ಸಂತಾನೋತ್ಪತ್ತಿಯ ಹಕ್ಕನ್ನು ಕಸಿದುಕೊಂಡಂತೆ. ಇದು ಸಂವಿಧಾನ ವಿರೋಧಿ ಕ್ರಮ. ಇಂಥ ಕಾನೂನಿನಿಂದ ಶೇ.41ರಷ್ಟು ಕುಟುಂಬಗಳು ಸರ್ಕಾರ ನೀಡುವ ವಿವಿಧ ಸೌಲಭ್ಯಗಳಿಂದ ವಂಚಿತವಾಗುತ್ತವೆ’ ಎಂದಿದ್ದಾರೆ. ಇದರಲ್ಲಿ ದಲಿತರೇ ಹೆಚ್ಚಾಗಿರುವುದರಿಂದ ಇದು ಸಾಮಾಜಿಕ ತಾರತಮ್ಯದ ಪರಮಾವಧಿ, ಇಂಥ ಕಾನೂನುಗಳು ಈಗಲೇ ರದ್ದಾಗಬೇಕು ಎಂದು ಒತ್ತಾಯಿಸಿದ್ದಾರೆ.


National Family Health Survey ಯ ಅಧ್ಯಯನಗಳು ಹೇಳುವ ಪ್ರಕಾರ ಶೇಕಡಾ 5ರಷ್ಟು ಜನರಿಗೆ 2 ಮಕ್ಕಳಿಲ್ಲ. 2 ಮಕ್ಕಳಿಗಿಂತ ಜಾಸ್ತಿಯಿರುವಂತಹ ಶೇಕಡಾ 36ರಷ್ಟು ಕುಟುಂಬಗಳಲ್ಲಿ ಈ ಸರ್ವೆ ಪ್ರಕಾರ, ಶೇಕಡಾ 83ರಷ್ಟು ಹಿಂದೂ ಕುಟುಂಬಗಳಿದ್ದರೆ, ಶೇಕಡಾ 14ರಷ್ಟು ಮುಸ್ಲಿಂ ಕುಟುಂಬಗಳಾಗಿವೆ. ಹೀಗಾಗಿ 2 ಮಕ್ಕಳಿಗಿಂತ ಹೆಚ್ಚಿರುವವರಿಗೆ ಶಿಕ್ಷೆವಿಧಿಸುತ್ತೇವೆ ಎಂದರೆ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿಸುವುದು ಹಿಂದೂ ಕುಟುಂಬಗಳನ್ನಾಗಿದೆ. ಇದರಲ್ಲಿ ಮೇಲ್ಜಾತಿಯವರು ಇಲ್ಲ. ಮೇಲ್ಜಾತಿಯವರು ಶೇಕಡಾ 11 ಮಾತ್ರ. ಇದರಲ್ಲಿ ಒಬಿಸಿ ಶೇಕಡಾ 30ಕ್ಕಿಂತ ಜಾಸ್ತಿ ದಲಿತರು ಶೇಕಡಾ 2ಕ್ಕಿಂತ 25ಕ್ಕಿಂತ ಜಾಸ್ತಿ. ಅಂದರೆ ಸಾರಾಂಶದಲ್ಲಿ ಒಬಿಸಿ ಮತ್ತು ದಲಿತ ಹಿಂದುಳಿದ ಹಿನ್ನೆಲೆಯಿರುವವರೇ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೆ. ಇದು ಅವರು ಮಾಡಿದ ಪಾಪವಲ್ಲ. ಈ ದೇಶದ ಇತಿಹಾಸ ಅವರ ಸಂಪತ್ತು, ಶಿಕ್ಷಣ, ಅಕ್ಷರವನ್ನು ಕಸಿದುಕೊಂಡು ತಾರತಮ್ಯ ಮಾಡಿದ ಪರಿಣಾಮ ಅನುಭವಿಸುತ್ತಿದ್ದಾರೆ ಅಷ್ಟೇ. ಹೀಗಾಗಿಯೇ ಅವರಿಗೆ ಮಕ್ಕಳು ಜಾಸ್ತಿ ಇದ್ದಾರೆ. ಈಗ ನೀವು 2 ಮಕ್ಕಳಿಗಿಂತ ಜಾಸ್ತಿ ಇದ್ದವರಿಗೆ ಶಿಕ್ಷೆ ನೀಡಿದರೆ ಯಾರಿಗೆ ನೀವು ಪರಂಪರಾಗತವಾಗಿ ವಂಚನೆ ಮಾಡಿಕೊಂಡು ಬಂದಿರುವಿರೋ ಅವರಿಗೆ ಇನ್ನು ಮುಂದೆ ಕಾನೂನು ಮೂಲಕವೂ ಶಿಕ್ಷೆ ವಿಧಿಸುತ್ತೀರಿ ಎಂದರ್ಥ. ಅವರು ಮುಸ್ಲಿಮರಲ್ಲ, ದಲಿತರು ಮತ್ತು ಒಬಿಸಿಗಳೇ ಜಾಸ್ತಿಯಾಗಿದ್ದಾರೆಂದು National Family Health Survey ಹೇಳುತ್ತದೆ.


ಆದ್ದರಿಂದ ಕಾನೂನು ಮೂಲಕ ಜನಸಂಖ್ಯೆ ನಿಯಂತ್ರಿಸುವ ಬದಲು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವದ್ಧಿ ಪಡಿಸಿದರೆ ತನ್ನಿಂತಾನೆ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ದೇಶದ ಅಭಿವದ್ಧಿಗೆ ಜನಸಂಖ್ಯಾಸ್ಫೋಟ ಕಾರಣ ಎಂದು ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಿ ಕೋಮುವಾದ ರಾಜಕಾರಣ ಮಾಡುವುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ದೇಶವನ್ನು ಅಭಿವದ್ಧಿಯತ್ತ ಕೊಂಡೊಯ್ಯೋಣ.

- Advertisement -