ಆಳಂದ್ ನಲ್ಲಿ ಶಾಂತಿ ಕದಡುವ ಸಂಘಪರಿವಾರದ ಕೃತ್ಯಕ್ಕೆ ಆಡಳಿತ ವರ್ಗದ ಬೆಂಬಲ: ಪಾಪ್ಯುಲರ್ ಫ್ರಂಟ್ ಆಕ್ರೋಶ

Prasthutha|

ಕಲಬುರಗಿ: ಸಂಘಪರಿವಾರವು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಗುಲ್ಬರ್ಗಾದ ಅಳಂದ್ ನಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಬೆಂಬಲ ನೀಡುತ್ತಿರುವ ಆಡಳಿತ ವರ್ಗದ ನಡೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಗುಲ್ಬರ್ಗಾ ಜಿಲ್ಲಾಧ್ಯಕ್ಷ ಶೇಖ್ ಇಜಾಝ್ ಅಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಆಲಂದ್ ನಲ್ಲಿರುವ ಹಝ್ರತ್ ಲಾಡ್ಲೆ ಮಶಾಯಿಕ್ ಅನ್ಸಾರಿ ಶರೀಫ್ ದರ್ಗಾದ ವಿರುದ್ಧ ಸಂಘಪರಿವಾರವು ನಿರಂತರ ಅಪಪ್ರಚಾರ ನಡೆಸುತ್ತಿದೆ. ಈ ದರ್ಗಾವು ವಕ್ಫ್ ಆಸ್ತಿಯಾಗಿದ್ದು, ಶಿವಲಿಂಗ ಪರವಾದ ಅರ್ಜಿಯನ್ನು ವಕ್ಫ್ ಟ್ರಿಬುನಲ್ ಎರಡೆರಡು ಬಾರಿ ತಿರಸ್ಕರಿಸಿದೆ. ಮಾತ್ರವಲ್ಲ, ದರ್ಗಾದೊಳಗೆ ಶಿವಲಿಂಗ ಇರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬುದನ್ನು ಹೈಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ವಾಸ್ತವ ಸ್ಥಿತಿ ಹೀಗಿರುವಾಗಲೂ ಜಿಲ್ಲೆಯ ಜನರನ್ನು ಕೋಮು ಆಧಾರಿತವಾಗಿ ವಿಭಜಿಸಲು ಸಂಘಪರಿವಾರವು ಈ ವಿಚಾರವನ್ನು ಆಗಾಗ್ಗೆ ಕೆದಕಿ ಗಲಭೆ ನಡೆಸಲು ಸಂಚು ರೂಪಿಸುತ್ತಿದೆ. ಅಲ್ಲದೇ ಈ ಬಾರಿ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿಯೇ ದರ್ಗಾದಲ್ಲಿ ಶಿವಲಿಂಗ ಪೂಜೆ ನಡೆಸಲಾಗಿದ್ದು, ಕಾನೂನುಬದ್ಧವಾಗಿ ಕಾರ್ಯಾಚರಣೆ ನಡೆಸಬೇಕಾದ ಜಿಲ್ಲಾಧಿಕಾರಿಯವರು ಸಂಘಪರಿವಾರದ ಪಿತೂರಿಕೋರರೊಂದಿಗೆ ಕೈಜೋಡಿಸಿರುವುದು ಆಘಾತಕಾರಿಯಾಗಿದೆ.  ಈ ನಡುವೆ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿರುವ ಸಂಘಪರಿವಾರದ ದುಷ್ಕರ್ಮಿಗಳನ್ನು ನಿಗ್ರಹಿಸುವ ಬದಲು ಪೊಲೀಸರು ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಿಕೊಂಡು ಮಹಿಳೆಯರು ಸಹಿತ ನೂರಕ್ಕೂ ಅಧಿಕ ಯುವಕರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಅಮಾಯಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂತಹ ತಾರತಮ್ಯ ಮತ್ತು ಪೂರ್ವಗ್ರಹಪೀಡಿತ ಬಂಧನಗಳು ಮುಸ್ಲಿಮ್ ಸಮುದಾಯದಲ್ಲಿ ಭೀತಿ ಸೃಷ್ಟಿಸುವ ಪ್ರಯತ್ನದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೋರ್ಟ್ ಆದೇಶ ಸ್ಪಷ್ಟವಾಗಿದ್ದರೂ ಆಳಂದ್ ದರ್ಗಾದಲ್ಲಿ ವಿವಾದ ಸೃಷ್ಟಿಸಿ ಶಾಂತಿ ಕದಡುತ್ತಿರುವ ಸಂಘಪರಿವಾರದ ನಾಯಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳಿಂದ ಬೆದರಿಕೆ ಎದುರಿಸುತ್ತಿರುವ ದರ್ಗಾಕ್ಕೆ ಸಂಪೂರ್ಣ ಪೊಲೀಸ್ ಭದ್ರತೆ ಒದಗಿಸಬೇಕು. ಪೊಲೀಸ್ ಇಲಾಖೆ ಮುಸ್ಲಿಮ್ ಸಮುದಾಯದ ವಿರುದ್ಧ ನಡೆಸುತ್ತಿರುವ ಪೂರ್ವಗ್ರಹಪೀಡಿತ ಬಂಧನಗಳನ್ನು ಕೂಡಲೇ ನಿಲ್ಲಿಸಬೇಕು. ಇಬ್ಬರ ಸಾವಿಗೆ ಸರಕಾರವು 10 ಲಕ್ಷ ರೂಪಾಯಿ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿರುವ ಶೇಖ್ ಇಜಾಝ್ ಅಲಿ, ಇಂತಹ ದುರುದ್ದೇಶಪೂರಿತ ಕಾರ್ಯಾಚರಣೆಗಳು ಮುಂದುವರಿದರೆ ಜಿಲ್ಲಾದ್ಯಂತ ಹೋರಾಟ ಅನಿವಾರ್ಯವಾಗುವುದು ಎಂದು ಎಚ್ಚರಿಸಿದ್ದಾರೆ.

- Advertisement -

Join Whatsapp