ಪ್ರಚಾರ ಬಿಟ್ಟು, ಭಾರತೀಯರನ್ನು ರಕ್ಷಿಸಲಿ: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ಉಕ್ರೇನ್ ನಲ್ಲಿ ಭಾರತದ ಸುಮಾರು 4 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಲಿಬಿಯಾದಲ್ಲಿ ದಾಳಿ ಉಂಟಾದಾಗ 15 ಸಾವಿರ ಜನರನ್ನು ಯಾವುದೇ ಪ್ರಚಾರ ಇಲ್ಲದೆ ಭಾರತಕ್ಕೆ ವಾಪಸ್ ಕರೆತಂದಿದ್ದರು. ಇವರು ಇನ್ನು ಐನೂರು ಜನರನ್ನು ಕರೆತಂದಿಲ್ಲ. ಆಗಲೇ ಪ್ರಚಾರಕ್ಕೆ ಮುಂದಾಗಿದ್ದಾರೆ. ಮಂತ್ರಿಗಳು ಫೋಟೋ ಶೂಟ್ ನಲ್ಲಿ ಮುಳುಗಿದ್ದಾರೆ. ಮೌನಿಸಿಂಗ್ ಎಂದು ಇವರು ಟೀಕೆ ಮಾಡಿದ ಮನಮೋಹನ್ ಸಿಂಗ್ ಅವರು 15 ಸಾವಿರ ಜನರನ್ನು ಕರೆತಂದಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಟೀಕಾಪ್ರಹಾರ ನಡೆಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಇವರು ವಿಫಲವಾಗಿದ್ದು, ನವೀನ್ ಎಂಬ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇದಕ್ಕೆ ಸರ್ಕಾರವೇ ಹೊಣೆ. ಪ್ರಧಾನಮಂತ್ರಿಗಳು ಚುನಾವಣಾ ಪ್ರಚಾರ ಬದಿಗಿರಿಸಿ ನಮ್ಮ ದೇಶದ ವಿದ್ಯಾರ್ಥಿಗಳನ್ನು ವಾಪಸ್ ಕರೆತರಬೇಕು. ಉತ್ತರರಂತೆ ವರ್ತಿಸಿ ಪ್ರಚಾರ ಪಡೆಯುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.

ಯುದ್ಧ ನಡೆಯುತ್ತದೆ ಎಂದು ಇಡೀ ವಿಶ್ವಕ್ಕೆ ಗೊತ್ತಿದ್ದರೂ ಇವರು ಚುನಾವಣೆಯಲ್ಲಿ ನಿರತರಾಗಿದ್ದರು. ಕೇಂದ್ರ ಸರ್ಕಾರ ವಿದ್ಯರ್ಥಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಅಲ್ಲಿರುವ ಜನರಿಗೆ ಕುಡಿಯಲು ನೀರು, ತಿನ್ನಲು ಆಹಾರ ಸಿಗುತ್ತಿಲ್ಲ. ಅಲ್ಲಿ ರೋಗ ಹರಡುವ ಭೀತಿ ಎದುರಾಗುತ್ತಿದೆ. ಹೀಗಾಗಿ ಸರ್ಕಾರ ಇನ್ನಾದರೂ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

- Advertisement -

ಮುಖ್ಯಮಂತ್ರಿಗಳ ಹೇಳಿಕೆ ನಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ ರಾಮಲಿಂಗಾ ರೆಡ್ಡಿ, ‘ಮೊದಲ ಹಂತ ಬಂದಿದ್ದು ನಿಜಲಿಂಗಪ್ಪ ಅವರ ಕಾಲದಲ್ಲಿ. ನಂತರ ದೇವರಾಜ ಅರಸು, ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಬಂದಿದೆ. ಐದನೇ ಹಂತ ಸಿದ್ದರಾಮಯ್ಯ ಅವರು ಐದನೇ ಹಂತ ಕಾವೇರಿ ನೀರು ತಂದಿದ್ದಾರೆ. ಈ ಐದು ಹಂತಗಳನ್ನು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ತರಲಾಗಿದೆ. ಇನ್ನು ಚಿಕ್ಕಮಗಳೂರಿನಿಂದ ಎತ್ತಿನಹೊಳೆ ನೀರು ತಂದಿದ್ದು ಸಿದ್ದರಾಮಯ್ಯ ಅವರ ಕಾಲದಲ್ಲಿ ಇವರಿಗೆ ಹಣ ನೀಡಲು ಆಗುತ್ತಿಲ್ಲ. ಬೆಂಗಳೂರಿಗೆ ಇದುವರೆಗೂ ನೀರು ತಂದಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು, ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ. ಅವರು ಯಾವುದಾದರೂ ಒಂದು ತೋರಿಸಲಿ. ಇವರು ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಂದಿದ್ದಾರಾ?’ ಎಂದು ಪ್ರಶ್ನಿಸಿದರು.

ಬಿಜೆಪಿ ಬಂದರೆ ಮಾತ್ರ ಬೆಂಗಳೂರಿಗೆ ನೀರು ಸಿಗಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಕುಡಿಯುತ್ತಿರುವ ನೀರು ತಂದಿದ್ದು ಯಾರು? ಐದು ಹಂತಗಳಲ್ಲಿ ನೀರು ತಂದಿದ್ದು ನಾವೇ. ಇವರು ಒಂದು ಲೋಟ ನೀರು ತರಲು ಯೋಗ್ಯತೆ ಇವರಿಗಿಲ್ಲ. ಸಿಎಂ ರಾಜಕೀಯಕ್ಕಾಗಿ ಭಾಷಣ ಮಾಡುತ್ತಿದ್ದಾರೆ’ ಎಂದರು.

ಪಾದಯಾತ್ರೆ ಕುರಿತು ಮಾತನಾಡಿದ ಅವರು,  ಇಂದು ಕೂಡ ಸುಮಾರು 18 ಕಿ.ಮೀ ಪಾದಯಾತ್ರೆ ಕ್ರಮಿಸಲಿದೆ. ನಾಳೆ ಅಂತಿಮ ದಿನ ಅರಮನೆ ಮೈದಾನದಿಂದ ಚಾಮರಾಜಪೇಟೆ ತಲುಪುತ್ತೇವೆ. ಬಿಜೆಪಿಯವರು ಮೊದಲೇ ಹೊಟ್ಟೆಕಿಚ್ಚಿನ ಜನ. ಅವರು ಕಳೆದ ಎರಡೂವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಪರಿಸರ ಇಲಾಖೆ ಅನುಮತಿ ಕೊಟ್ಟಿದ್ದರೆ ನಾವು ಪಾದಯಾತ್ರೆ ಮಾಡುವ ಪ್ರಮೇಯ ಇರುತ್ತಿರಲಿಲ್ಲ. ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಇಂಜಿನ್ ಸರ್ಕಾರ. ನಿಮ್ಮ ಸಿಎಂ ಅವರು ಕಾಂಗ್ರೆಸ್ ಪಾದಯಾತ್ರೆಯಿಂದ ಜನರಿಗೆ ತೊಂದೆ ಆಗುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿಯವರು ಉತ್ತರ ಕುಮಾರರಂತೆ. ಉತ್ತರನ ಪೌರುಷ ಒಲೆ ಮುಂದೆ ಎನ್ನುವ ಹಾಗೆ, ಅವರು ಪೇಪರ್ ಟೈಗರ್ ಗಳು. ಕೇಂದ್ರ ಸರ್ಕಾರದ ಬಳಿ ಹೋಗಿ 25 ಸಂಸದರನ್ನು ಕರೆದುಕೊಂಡು ಹೋಗಿ ಒಂದು ಅನುಮತಿ ನೀಡಲು ಆಗುತ್ತಿಲ್ಲ. ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಪ್ರಾರಂಭದಿಂದಲೂ ಪಾದಯಾತ್ರೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಈಗಲೂ ಪ್ರಯತ್ನಿಸುತ್ತಿದ್ದಾರೆ. ಕಳೆದ 28ರಂದೆ ಕೇಂದ್ರ ಸರ್ಕಾರ ಕೋವಿಡ್ ನಿರ್ಬಂಧ ವಾಪಸ್ ಪಡೆಯಿರಿ ಎಂದು ಹೇಳಿರುವಾಗ ಮೊನ್ನೆ ರಾಮನಗರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ. ಪಂಚರಾಜ್ಯ ಚುನಾವಣೆ ನಡೆಯುವಾಗ ಇದೇ ಮೋದಿ, ಕೇಂದ್ರ ಸಚಿವರು ಸಮಾವೇಶ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೋವಿಡ್ ಕಡಿಮೆ ಇದ್ದರೂ ಕಾಂಗ್ರೆಸ್ ನ 37 ನಾಯಕರ ಮೇಲೆ ಕೇಸ್ ದಾಖಲಿಸಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

Join Whatsapp