ಗೋಹತ್ಯೆ ನಿಷೇಧ ಕಾನೂನು ಜಾರಿ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ: ಪಾಪ್ಯುಲರ್ ಫ್ರಂಟ್

Prasthutha|

- Advertisement -

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರವು ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾನೂನು ಜನವಿರೋಧಿಯಾಗಿರುವುದು ಮಾತ್ರವಲ್ಲದೆ, ಅದನ್ನು ಜಾರಿಗೆ ತಂದಿರುವ ವಿಧಾನವು ಕೂಡ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಗೋವುಗಳನ್ನೇ ಜೀವನೋಪಾಯವಾಗಿ ಆಶ್ರಯಿಸಿರುವ ರೈತಾಪಿ ವರ್ಗದ ವಿರೋಧದ ನಡುವೆಯೂ ವಿಧಾನಪರಿಷತ್ ನಲ್ಲಿ ಚರ್ಚೆಗೂ ಅವಕಾಶ ನೀಡದೆ ಧ್ವನಿ ಮತದ ಮೂಲಕ ಕಾನೂನು ಜಾರಿಗೆ ತಂದಿರುವುದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಖಂಡಿಸಿದ್ದಾರೆ.

ವಿಧಾನಪರಿಷತ್ ನಲ್ಲಿ ಬಿಜೆಪಿ ಸರಕಾರಕ್ಕೆ ಬಹುಮತ ಇಲ್ಲದೇ ಇದ್ದರೂ ವಿರೋಧ ಪಕ್ಷಗಳ ಗೈರು ಹಾಜರಾತಿ ಮತ್ತು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಧ್ವನಿ ಮತದ ಮೂಲಕ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವುದು ಬಿಜೆಪಿಯ ಮೋಸದ ರಾಜಕಾರಣವಾಗಿದೆ. ಇದೇ ವೇಳೆ ಬಿಜೆಪಿಗಿಂತಲೂ ಹಚ್ಚಿನ ಸದಸ್ಯ ಬಲ ಇರುವ ಬಿಜೆಪಿಯೇತರ ಪಕ್ಷಗಳು ಬಿಜೆಪಿಯ ಇಂತಹ ವಂಚನೆಯ ನಡೆಯನ್ನು ತಡೆಯುವಲ್ಲಿ ವಿಫಲವಾಗಿರುವುದರ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕು. ತಮ್ಮ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕಿದ ರಾಜ್ಯ ಸರಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸಿದೆ.  

- Advertisement -

ಗೋಹತ್ಯೆ ನಿಷೇಧ ಕಾನೂನು ಸುಘ್ರೀವಾಜ್ಞೆ ಮೂಲಕ ಜಾರಿಗೆ ತರಲೆತ್ನಿಸಿದ ಬಿಜೆಪಿ ಸರಕಾರದ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಈಗಾಗಲೇ ಅದರ ಕಾನೂನು ಸಿಂಧುತ್ವದ ಬಗ್ಗೆ ಹೈಕೋರ್ಟು ನೋಟೀಸು ಜಾರಿಗೊಳಿಸಿದೆ. ಆದಾಗ್ಯೂ ಬಿಜೆಪಿ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮೆರೆದಿದ್ದು, ಅಧಿಕಾರದ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಕಾನೂನು ಜಾರಿಗೊಳಿಸಿದೆ. ಗೋಹತ್ಯೆ ಎಂಬುದು ಒಂದು ಧರ್ಮದ ಅನಿವಾರ್ಯತೆ ಎಂಬಂತೆ ಫ್ಯಾಶಿಷ್ಟರು ಆರಂಭದಿಂದಲೇ ಪ್ರಚಾರಪಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದು ಜನಸಾಮಾನ್ಯರ ಜೀವನೋಪಾಯದ ಮಾರ್ಗವಾಗಿದೆ ಎಂಬುದು ಗೋಹತ್ಯೆ ನಿಷೇಧ ಕಾನೂನು ಜಾರಿಯ ಹಾನಿಯಿಂದಾಗುವ ಪರಿಣಾಮವು ಸಾಬೀತುಪಡಿಸಲಿದೆ. ಇನ್ನೊಂದೆಡೆ ಗೋರಕ್ಷಕರು ಎಂಬ ನೆಪದಲ್ಲಿ ನಡೆಯುವ ಗೂಂಡಾಗಿರಿ, ನೈತಿಕ ಪೊಲೀಸ್ ಗಿರಿ ಮತ್ತು ದರೋಡೆಗೆ ಬಿಜೆಪಿ ಸರಕಾರವು ಪರವಾನಿಗೆ ನೀಡಿದಂತಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆಯ ಕುರಿತಂತೆ ಜಾತ್ಯತೀತ ಪಕ್ಷಗಳ ಮೌನ ಸಮ್ಮತಿಯೂ ಆತಂಕಕಾರಿಯಾಗಿದೆ. ರಾಜ್ಯದ ಜನಸಾಮಾನ್ಯರ ಜೀವನೋಪಾಯದ ಮೇಲೆ ಭಾರೀ ಪರಿಣಾಮ ಬೀರುವ ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಇಂತಹ ಕರಾಳ ಕಾನೂನುಗಳ ವಿರುದ್ಧ ಬೀದಿಗಿಳಿದು ಜನರು ಹೋರಾಟ ನಡೆಸಬೇಕಾಗಿದೆ. ಸರಕಾರವು ತನ್ನ ಸರ್ವಾಧಿಕಾರಿ ಧೋರಣೆಯನ್ನು ಬದಿಗಿಟ್ಟು ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಗೋಹತ್ಯೆ ನಿಷೇಧ ಕಾನೂನು ಹಿಂತೆಗೆಯಬೇಕು. ಯಾವುದೇ ಕಾರಣಕ್ಕೂ ರಾಜ್ಯಪಾಲರು ಇಂತಹ ಜನವಿರೋಧಿ ಕಾನೂನಿಗೆ ಸಹಿ ಹಾಕದೆ  ಮತ್ತೆ ವಿಧಾನಪರಿಷತ್ ನಲ್ಲಿ ಚರ್ಚೆಗೆ ಕಳುಹಿಸಿಕೊಡಬೇಕು ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.



Join Whatsapp