ಶಿವಮೊಗ್ಗ: ನಿಟ್ಟೂರು ಹಿಡ್ಲುಮನೆ ಜಲಪಾತವನ್ನು ಸಂಪರ್ಕಿಸುವ ಕಿರು ಸೇತುವೆ ಸಂಪೂರ್ಣವಾಗಿ ಹದಗೆಟ್ಟಿದೆ. ಸೇತುವೆಯ ಬದಿಗಳಲ್ಲಿ ತುಂಬಿಸಿದ್ದ ಮಣ್ಣು ಸರಿಯಾಗಿ ಕೂರದೇ ಅಪಾಯಕಾರಿ ಸ್ಥಿತಿಯಲ್ಲಿದೆ.
2 ವರ್ಷಗಳ ಹಿಂದೆ ಈ ಸೇತುವೆಯನ್ನು ಗೃಹಸಚಿವರು ಉದ್ಘಾಟಿಸಿದ್ದರು. ಇದೀಗ ಸೇತುವೆಯ ಗೋಡೆ ಬಳಿ ನಿರ್ಮಾಣವಾಗಿರುವ ಹೊಂಡಕ್ಕೆ ಜೀಪೊಂದು ಬಿದ್ದಿದ್ದು, ಸೇತುವೆ ಮೇಲೆ ಬೈಕ್ ಹೊರತು ಬೇರೆ ಯಾವ ವಾಹನಗಳೂ ಸಂಚರಿಸದಂತಾಗಿದೆ.
ಕಳೆದ ಬೇಸಿಗೆಯಲ್ಲಿಯೇ ಸೇತುವೆ ಕಾಮಗಾರಿ ಮುಗಿದಿದೆ ಎಂದು ಬಿಟ್ಟುಕೊಟ್ಟಿದ್ದರೂ, ಮಣ್ಣುಕುಸಿಯದಂತೆ ಭದ್ರ ಮಾಡಿರಲಿಲ್ಲ. ಮಳೆಯ ರಭಸಕ್ಕೆ ಸೇತುವೆಗೆ ಭದ್ರತೆ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಗೃಹಸಚಿವರು ಉದ್ಘಾಟಿಸಿದ ಬ್ರಿಡ್ಜ್ನಲ್ಲಿ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.