ಕಾಮನ್‌ವೆಲ್ತ್ ಗೇಮ್ಸ್; ಭಾರತ ಮಹಿಳಾ ಹಾಕಿ ತಂಡಕ್ಕೆ ಕಂಚು

Prasthutha|

ಬರ್ಮಿಂಗ್‌ಹ್ಯಾಮ್‌: ನಾಯಕಿ, ಗೋಲ್‌ ಕೀಪರ್‌ ಸವಿತಾ ಪೂನಿಯಾ ಅವರ ಅಮೋಘ ಪ್ರದರ್ಶನದ ಬಲದಲ್ಲಿ ಮಿಂಚಿದ ಭಾರತದ ಮಹಿಳಾ ಹಾಕಿ ತಂಡ, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ.

- Advertisement -

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್‌ ತಂಡವನ್ನು ಶೂಟೌಟ್‌ನಲ್ಲಿ 2-1 ಅಂತರದಲ್ಲಿ ಸೋಲಿಸಿತು.

ಪೂರ್ಣಾವಧಿಯ ವೇಳೆಗೆ ಪಂದ್ಯವು ತಲಾ 1-1 ಗೋಲುಗಳ ಅಂತರದಲ್ಲಿ ಸಮಬಲದಲ್ಲಿ ಅಂತ್ಯ ಕಂಡಿತ್ತು. ಹೀಗಾಗಿ ವಿಜೇತರನ್ನು ನಿರ್ಣಯಿಸಲು ನೀಡಲಾದ ಶೂಟೌಟ್‌ನಲ್ಲಿ ಭಾರತ 2 ಗೋಲು ಗಳಿಸಿದರೆ, ನ್ಯೂಜಿಲೆಂಡ್‌ ತಂಡ ಕೇವಲ 1 ಗೋಲು ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 16 ವರ್ಷಗಳ ಬಳಿಕ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ, ಮಹಿಳೆಯರ ಹಾಕಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

- Advertisement -

ಪೆನಾಲ್ಟಿ ಶೂಟೌಟ್‌ ವೇಳೆ ನ್ಯೂಜಿಲೆಂಡ್‌ ಆಟಗಾರ್ತಿಯರಿಗೆ ತಡೆಗೋಡೆಯಾದ ಸವಿತಾ ಪೂನಿಯಾ, ಮೂರು ಶೂಟೌಟ್‌ಗಳನ್ನು ತಡೆಯುವ ಮೂಲಕ  ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಪಂದ್ಯದ ಎರಡನೇ ಕ್ವಾರ್ಟರ್‌ ಅವಧಿಯಲ್ಲಿ ಗೋಲು ದಾಖಲಿಸಿದ್ದ ಸಲೀಮಾ ಟೆಟೆ, ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆ ನಂತರದಲ್ಲಿ ಪಂದ್ಯದಲ್ಲಿ ಬಹುತೇಕ ಭಾರತದ ವನಿತೆಯರು ಹಿಡಿತ ಸಾಧಿಸಿದ್ದರು. ಆದರೆ ಇನ್ನೇನು ಪಂದ್ಯ ಮುಗಿಯಲು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಿದ್ದ ವೇಳೆ ಪೆನಾಲ್ಟಿ ಅವಕಾಶ ಪಡೆದ ನ್ಯೂಜಿಲೆಂಡ್‌, ಒಲಿವಿಯಾ ಮೇರಿ ಮೂಲಕ ಗೋಲು ದಾಖಲಿಸಿ ಸಮಬಲ ಸಾಧಿಸಿತು.

ಸೆಮಿಫೈನಲ್‌ ಪಂದ್ಯದಲ್ಲಿ ಟೈಮರ್‌ ಪ್ರಮಾದದಿಂದಾಗಿ ಸೋಲು ಕಂಡಿದ್ದ ಭಾರತ, ಫೈನಲ್‌ ಫೈಟ್‌ನಿಂದ ಹೊರನಡೆದಿತ್ತು.

Join Whatsapp