ಬೆಂಗಳೂರು: ತನ್ನ ಮನೆಯ ಮೇಲೆ ಕಾನೂನುಬಾಹಿರವಾಗಿ ದಾಳಿ ನಡೆಸಿ ಲ್ಯಾಪ್‌ಟಾಪ್ ಮತ್ತು ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲು ತಾನು ಬಂಧನದ ವೇಳೆ ಹೊರಗೆಡಹಿರುವ ಹೇಳಿಕೆಯನ್ನು ಆಧರಿಸಲಾಗಿತ್ತು ಎಂದು ದೆಹಲಿ ಪೊಲೀಸರು ಮತ್ತು ತನಿಖಾಧಿಕಾರಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅಲ್ಟ್ ನ್ಯೂಸ್ ಜಾಲತಾಣದ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. 2018ರಲ್ಲಿ ತಾನು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಪ್ರಕರಣದ ವಿಚಾರಣೆ ವೇಳೆ ಅವರು ಈ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದ್ದಾರೆ.
ತಾನು ಪೊಲೀಸ್ ವಶದಲ್ಲಿದ್ದಾಗ ಅಥವಾ ತನಿಖೆ ವೇಳೆ ಪೊಲೀಸರಿಗೆ ಯಾವುದೇ ಮಾಹಿತಿ ಬಹಿರಂಗಪಡಿಸುವ ಹೇಳಿಕೆ ನೀಡಿಲ್ಲ ಎಂದು ಝುಬೈರ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಪೊಲೀಸರ ಅಂತಹ ಹೇಳಿಕೆ ಶುದ್ಧಸುಳ್ಳು, ತಪ್ಪು, ನಕಲಿ ಹಾಗೂ ಕಾನೂನಿನ ಪ್ರಕಾರ ಸ್ವೀಕಾರಾರ್ಹವಲ್ಲ. ಹೀಗಾಗಿ ಶೋಧ, ವಶಪಡಿಸಿಕೊಳ್ಳುವಿಕೆ ಸೇರಿದಂತೆ ನಂತರದ ಎಲ್ಲಾ ಪ್ರಕ್ರಿಯೆಗಳು ಕೂಡ ಕಾನೂನುಬಾಹಿರ ಎಂದು ಝುಬೈರ್ ವಾದಿಸಿದ್ದಾರೆ.
ತನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಮತ್ತು ತನ್ನ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲು ಅನುಮತಿ ನೀಡಿದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜುಬೈರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜುಬೈರ್ 1983ರಲ್ಲಿ ಬಿಡುಗಡೆಯಾಗಿದ್ದ ಹಿಂದಿ ಸಿನಿಮಾವೊಂದರ ದೃಶ್ಯವೊಂದನ್ನು ಟ್ವೀಟ್ ಮಾಡಿದ್ದು ಇದು ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಸಂದೇಶ ನೀಡುತ್ತದೆ ಎಂದು ದೆಹಲಿ ಪೊಲೀಸರು ಕಳೆದ ತಿಂಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸಿದ್ದರು.
ಟ್ವೀಟ್ ಪೋಸ್ಟ್ ಮಾಡಲು ಬಳಸಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ತನ್ನ ಬೆಂಗಳೂರಿನ ನಿವಾಸದಲ್ಲಿದೆ ಎಂದು ತಾನು ಪೊಲೀಸರಿಗೆ ಮಾಹಿತಿ ಬಹಿರಂಗಪಡಿಸಿ ಹೇಳಿಕೆ ನೀಡಿದ್ದೇನೆ ಎನ್ನುವ ಪೊಲೀಸರ ಹೇಳಿಕೆಯನ್ನು ಝುಬೈರ್ ಅಲ್ಲಗಳೆದಿದ್ದಾರೆ. ಜುಬೈರ್ ತಾನು 2018ರ ಆ ದಿನಾಂಕದಂದು ಅಂತಹ ಟ್ವೀಟ್ ಮಾಡಿರಲಿಲ್ಲ. ಅಲ್ಲದೆ ತಾನು ಆಗ ಬಳಸುತ್ತಿದ್ದ ಮೊಬೈಲ್ ಫೋನ್ ಕಳೆದು ಹೋಗಿದ್ದು, ಈ ಬಗೆಗಿನ ಕಳೆದು ಹೋಗಿರುವ ವಸ್ತುವಿನ ಕುರಿತಾದ ಸ್ಥಳೀಯ ಪೊಲೀಸರ ವರದಿಯನ್ನೂ ತಾನು ಸಲ್ಲಿಸಿರುವುದಾಗಿ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಪೊಲೀಸರು ಆಕ್ಷೇಪಿಸಿರುವ ಟ್ವೀಟನ್ನು ಆಂಡ್ರಾಯ್ಡ್ ಫೋನ್‌ನಿಂದ ಮಾಡಲಾಗಿದ್ದು ಅದಕ್ಕೂ ಲ್ಯಾಪ್‌ಟಾಪ್‌ಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು ಜನಪ್ರಿಯತೆಗಾಗಿ ನಾನು ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತೇನೆ ಎಂಬ ಪೊಲೀಸರ ಹೇಳಿಕೆಯನ್ನು ಕೂಡ ನಿರಾಕರಿಸಿದ್ದಾರೆ.
ನ್ಯಾ. ಪುರುಷೈಂದ್ರ ಕುಮಾರ್ ಕೌರವ್ ಅವರಿದ್ದ ಏಕಸದಸ್ಯ ಪೀಠದೆದುರು ಇಂದು ಪ್ರಕರಣವನ್ನು ಪಟ್ಟಿ ಮಾಡಲಾಗಿತ್ತಾದರೂ, ನ್ಯಾಯಾಲಯ ಅದನ್ನು ಮಾರ್ಚ್ 9ಕ್ಕೆ ಮುಂದೂಡಿತು.
ಟ್ವೀಟ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಉತ್ತರಪ್ರದೇಶ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜುಬೈರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್)