ನವದೆಹಲಿ : ಪ್ರದಾನಿ ನರೇಂದ್ರ ಮೋದಿಯವರ ಆಪ್ತ ವಲಯದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸಿದ್ದ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅರವಿಂದ ಕುಮಾರ್ ಶರ್ಮಾ ಉತ್ತರ ಪ್ರದೇಶದ ಲಖನೌನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಶರ್ಮಾ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಉತ್ತರ ಪ್ರದೇಶ ಸರಕಾರದಲ್ಲಿ ಪ್ರಮುಖ ಸ್ಥಾನ ನೀಡುವ ನಿರೀಕ್ಷೆಯಿದೆ. ಜ.28ರಂದು 12 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೇಂದ್ರ ಎಂಎಸ್ಎಂಇ ಸಚಿವಾಲಯದಲ್ಲಿ ಶರ್ಮಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಈ ವಾರವಷ್ಟೇ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ.
1998ರ ಐಎಎಸ್ ಅಧಿಕಾರಿಗಳ ಗುಜರಾತ್ ಕೇಡರ್ ಅಧಿಕಾರಿಯಾದ ಶರ್ಮಾ ಉತ್ತರ ಪ್ರದೇಶದ ಮೌ ಮೂಲದವರು. ಈ ವಾರ ಅವರು ಏಕಾಏಕಿ ಸ್ವಯಂ ನಿವೃತ್ತಿ ಘೋಷಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಇದೀಗ ಅವರು ಬಿಜೆಪಿ ಸೇರ್ಪಡೆಯಾಗಿರುವುದರಿಂದ, ಉತ್ತರ ಪ್ರದೇಶದಲ್ಲಿ ಬಿಜೆಪಿಯಲ್ಲಿ ಅವರು ಪ್ರಮುಖ ರಾಜಕೀಯ ಪಾತ್ರ ನಿಭಾಯಿಸಲಿದ್ದಾರೆ ಎಂಬ ನಿರೀಕ್ಷೆಗಳು ಮೂಡಿವೆ.
ಶರ್ಮಾ ದೆಹಲಿಯಲ್ಲಿ 2014ರಿಂದ ಕೇಂದ್ರ ಸರಕಾರಕ್ಕೆ ಮಾತ್ರ ಕೆಲಸ ಮಾಡಿರುವುದಲ್ಲ, ಮೋದಿಯವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಅವರು ಕಾರ್ಯ ನಿರ್ವಹಿಸಿದ್ದಾರೆ. 2001ರಿಂದ ಪ್ರಧಾನಿ ಮೋದಿ ಜೊತೆ ಅವರು ನಿಕಟ ಸಂಪರ್ಕದಲ್ಲಿ ಸೇವೆ ಸಲ್ಲಿಸಿದ್ದಾರೆ.