January 14, 2021
ಯತ್ನಾಳ್ ಸೇರಿದಂತೆ ಹಲವರಲ್ಲಿ CD ಇದೆ; ಸಂಕ್ರಾಂತಿ ಬಳಿಕ ಬಿಡುಗಡೆ : ವಿಶ್ವನಾಥ್

ರಾಯಚೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರ ಬಳಿ ಸಿಡಿ ಇದೆ. ಸಂಕ್ರಾಂತಿ ಬಳಿಕ ಒಬ್ಬೊಬ್ಬರಾಗಿ ಸಿಡಿ ಬಿಡುಗಡೆ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಇಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮ ಹೆಸರನ್ನು ಕೈಬಿಟ್ಟಿರುವುದಕ್ಕೆ ಆಕ್ರೋಶಿತರಾಗಿರುವ ಹಲವು ಶಾಸಕರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿ ಕೆಲವರು ಸಚಿವರಾಗಿದ್ದಾರೆ ಎಂದು ನಿನ್ನೆ ಎಚ್. ವಿಶ್ವನಾಥ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಆಪಾದಿಸಿದ್ದರು. ಸಂಕ್ರಾಂತಿ ಬಳಿಕ ಸಿಡಿ ಬಿಡುಗಡೆಯಾಗಲಿದೆ ಎಂದು ವಿಶ್ವನಾಥ್ ನಿನ್ನೆಯೂ ಹೇಳಿದ್ದರು.