ಪಿಎಂ ಕೇರ್ಸ್ ಫಂಡ್ ಯೋಜನೆಯ ವೆಂಟಿಲೇಟರ್ಸ್ ಗಳು ನಕಲಿ ! ಸರ್ಕಾರಿ ಆಸ್ಪತ್ರೆಗಳೇ ಬಳಸುತ್ತಿಲ್ಲ’

Prasthutha|

ಬೆಂಗಳೂರು : ಪ್ರಧಾನಿ ಪರಿಹಾರ ನಿಧಿ ಅಥವಾ ಪಿಎಂ ಕೇರ್ಸ್‌ ಫಂಡ್‌ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಬಂದಿರುವ 1500 ವೆಂಟಿಲೇಟರ್‌ಗಳು ನಕಲಿಯಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಕೂಡಾ ಈ ವೆಂಟಿಲೇಟರ್‌ಗಳನ್ನು ಬಳಸುತ್ತಿಲ್ಲ ಎನ್ನುವುದು ವಾಸ್ತವವಾಗಿದೆ. ಇದನ್ನು ನಾನೋರ್ವ ವೈದ್ಯನಾಗಿ ಹೇಳುತ್ತಿದ್ದೇನೆ ಎಂದು ಕುಣಿಗಲ್‌ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ ಅವರು, ನಮಗೆ ಬಂದಿರುವ ವೆಂಟಿಲೇಟರ್ಸ್ ಗಳೆಲ್ಲವೂ ನಕಲಿಯಾಗಿದೆ. ಬೇಕಿದ್ದರೆ ಯಾವುದೇ ಆಸ್ಪತ್ರೆಗೆ ಹೋಗಿ ವಿಚಾರಿಸಿ ನೋಡಿ. ಜನರ ಪ್ರಾಣ ಉಳಿಸಲು ಇನ್ವೇಸಿವ್‌ ವೆಂಟಿಲೇಟರ್‌ಗಳು ಬೇಕು. ಆಸ್ಪತ್ರೆಗಳಿಗೆ ನೀಡಿರುವ ವೆಂಟಿಲೇಟರ್‌ಗಳಲ್ಲಿ ಈ ಸೌಲಭ್ಯ ಇಲ್ಲ. ಸರ್ಕಾರ ಹೇಳುತ್ತಿರುವುದಕ್ಕೂ ವಾಸ್ತವ ಚಿತ್ರಣಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ. ಕೋವಿಡ್‌ ನಿಯಂತ್ರಣ, ಸೋಂಕಿತರಿಗೆ ಸೂಕ್ತ ಆರೋಗ್ಯ ಸೌಲಭ್ಯ, ಚಿಕಿತ್ಸೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಂಗನಾಥ್ ದೂರಿದ್ದಾರೆ.

- Advertisement -

ಈಗ ಎದುರಾಗಿರುವ ಕೊರೋನಾದ ಎರಡನೇ ಅಲೆಗೆ ನಮ್ಮ ಸರ್ಕಾರಗಳೇ ಕಾರಣ. ಆಕ್ಸಿಜನ್‌ ಕೊರತೆಗೆ ಸರ್ಕಾರವೇ ನೇರ ಹೊಣೆ. ರಾಜ್ಯದಲ್ಲಿ ಕೈಗಾರಿಕಾ ಆಕ್ಸಿಜನ್‌ ಸಾಕಷ್ಟಿದೆ. ಇದನ್ನು ಹಾಸ್ಪಿಟಲ್‌ ಆಕ್ಸಿಜನ್‌ ಗಾಗಿ ಪರಿವರ್ತಿಸಬಹುದು. ಆದರೂ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಸಂಶಯವಿಲ್ಲ ಎಂದು ರಂಗನಾಥ ಎಚ್ಚರಿಸಿದ್ದಾರೆ.

ವೆಂಟಿಲೇಟರ್ ಗಳು ನಕಲಿ ಎಂದಿದ್ದ ರಾಜಸ್ಥಾನ ಸರಕಾರ !

ಇದೀಗ ಪಿಎಂ ಕೇರ್ಸ್ ನ ವೆಂಟಿಲೇಟರ್ಸ್ ಗಳು ನಕಲಿ ಎಂದಿರುವ ಡಾ. ರಂಗನಾಥ್ ಅವರ ವಾದಕ್ಕೆ ಪೂರಕವಾಗಿ ರಾಜಸ್ಥಾನ ಸರಕಾರ ಕೂಡಾ ಕೇಂದ್ರಕ್ಕೆ ಪತ್ರ ಬರೆದಿದ್ದು,  ಕೊರೋನ ಸೋಂಕು ಚಿಕಿತ್ಸೆಯಲ್ಲಿ ಬಳಸಲು ಪಿಎಂ ಕೇರ್ಸ್ ನಿಧಿಯಡಿ ಪೂರೈಸಿರುವ ವೆಂಟಿಲೇಟರ್‌ಗಳು ದೋಷಯುಕ್ತವಾಗಿವೆ ಎಂದುಹೇಳಿದೆ. ಈ ಕುರಿತು ವಿವರಿಸಿರುವ ರಾಜಸ್ಥಾನ ಸರಕಾರ, ರಾಜ್ಯದಾದ್ಯಂತದ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಂದ ಮಾಹಿತಿ ಪಡೆದ ಬಳಿಕ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ರಾಜಸ್ಥಾನದ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವೈಭವ್ ಗಾಲ್ರಿಯಾ ಹೇಳಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಪಿಎಂ ಕೇರ್ಸ್ ಯೋಜನೆಯಡಿ ಒದಗಿಸಲಾದ 85 ವೆಂಟಿಲೇಟರ್‌ಗಳು ದೋಷಪೂರ್ಣವಾಗಿದೆ. 1ರಿಂದ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಿದ ಬಳಿಕ ವೆಂಟಿಲೇಟರ್‌ಗಳು ಸ್ತಬ್ಧವಾಗುತ್ತವೆ. ತುರ್ತು ಸೇವಾ ವಿಭಾಗದಡಿ ಕಾರ್ಯನಿರ್ವಹಿಸುವ ವೈದ್ಯರಿಗೆ ಪಿಎಂ ಕೇರ್ಸ್ ವೆಂಟಿಲೇಟರ್‌ಗಳ ಬಗ್ಗೆ ಎಳ್ಳಷ್ಟೂ ವಿಶ್ವಾಸವಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಉದಯ್‌ಪುರದ ಟಾಗೋರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಲಖನ್ ಪೊಸ್ವಾಲ್ ಹೇಳಿದ್ದಾರೆ.

- Advertisement -