ನವದೆಹಲಿ: ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿ (PM-CARES FUND) ಕಾನೂನಿನ ಅನ್ವಯ ಚಾರಿಟೇಬಲ್ ಟ್ರಸ್ಟ್ ಆಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ನ ನಿಧಿಯು ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಪ್ರಧಾನಮಂತ್ರಿ ಕೇರ್ಸ್ ಫಂಡ್ ಸಂವಿಧಾನದ 12 ನೇ ಪರಿಚ್ಛೇದದ ವ್ಯಾಪ್ತಿ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2 (ಎಚ್) ವ್ಯಾಪ್ತಿಗೆ ಒಳಪಡುವುದಿಲ್ಲ. ಮಾತ್ರವಲ್ಲ ಈ ನಿಧಿಯ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಬಹಿರಂಗ ಪಡಿಸುವ ಅಗತ್ಯವಿಲ್ಲ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀ ವಾಸ್ತವ ಅವರು ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಕೇರ್ಸ್ ನಿಧಿಯನ್ನು ಸಂವಿಧಾನದ 12 ವಿಧಿಯನ್ವಯ ಸರ್ಕಾರದ ಸಂಪತ್ತು ಎಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಪಾರದರ್ಶಕವಲ್ಲದ ರೀತಿಯಲ್ಲಿ ಪ್ರಧಾನಮಂತ್ರಿ ಕೇರ್ಸ್ ಫಂಡ್ ಅನ್ನು ನಿಯಂತ್ರಣ ರಹಿತವಾಗಿ ಉಪಯೋಗಿಸಲ್ಪಡುತ್ತಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ.
ಪ್ರಸಕ್ತ ಟ್ರಸ್ಟ್ ನಲ್ಲಿ ಗೌರವಯುತ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಮಾತ್ರವಲ್ಲ ಈ ನಿಧಿಯನ್ನು ಲೆಕ್ಕ ಪರಿಶೋಧಕರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಒಳಗೊಂಡ ಸಮಿತಿ ನೇಮಿಸಿದ ಚಾರ್ಟಡ್ ಅಕೌಂಟೆಂಟ್ ನಿಂದ ಪರಿಶೋಧನೆ ನಡೆಸಲಾಗುತ್ತದೆ ಎಂದು ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದ ನಾಗರಿಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೇರ್ಸ್ ನಿಧಿಯನ್ನು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾಗಿತ್ತು ಎಂದು ಸಮ್ಯಕ್ ಗಂಗ್ವಾಲ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ನಿಧಿಗೆ ಬೃಹತ್ ಸಂಖ್ಯೆಯ ದೇಣಿಗೆಗಳನ್ನು ಸ್ವೀಕರಿಸಲಾಗಿದೆ.