ಸೊಸೈಟಿಗಳ ತಿದ್ದುಪಡಿ ವಿಧೇಯಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಹುನ್ನಾರ | ಮೇಲ್ಮನೆಯಲ್ಲಿ ವಿಫಲಗೊಳಿಸಲು ಜಾತ್ಯತೀತ ಪಕ್ಷಗಳಿಗೆ ಪಾಪ್ಯುಲರ್ ಫ್ರಂಟ್ ಕರೆ

Prasthutha|

ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಕರ್ನಾಟಕ ಸೊಸೈಟಿಗಳ ತಿದ್ದುಪಡಿ ವಿಧೇಯಕವು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

- Advertisement -

ವಿಧೇಯಕ ಕಾನೂನಾಗಿ ಜಾರಿಯಾದ ನಂತರ, ಕೆಲವೊಂದು ಸಬೂಬುಗಳನ್ನು ಮುಂದಿಟ್ಟುಕೊಂಡು ಸರಕಾರವು ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ಅಲ್ಪಸಂಖ್ಯಾತರ ಸಂಸ್ಥೆಗಳ ನಿಯಂತ್ರಣವನ್ನು ತನ್ನ ಸುಪರ್ದಿಗೆ ಪಡೆಯುವ ಹುನ್ನಾರ ನಡೆಸುತ್ತಿದೆ. ಸರಕಾರದಿಂದ ರಚಿಸಲಾದ ಸಂಸ್ಥೆಗಳಿಗೆ ಸರಕಾರವು ಆಡಳಿತಾಧಿಕಾರಿಯನ್ನು ನೇಮಿಸಲು ಯಾವುದೇ ತೊಡಕಿಲ್ಲ. ಆದರೆ ಸಹಕಾರಿ ಸಂಸ್ಥೆಗಳು ಸರಕಾರೇತರ ಸಂಸ್ಥೆಗಳಾಗಿದ್ದು, ಇವು ಸರಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಸಕ್ತ ತಿದ್ದುಪಡಿಯ ಮೂಲಕ ಅಲ್ಪಸಂಖ್ಯಾತರ ಸೊಸೈಟಿಗಳಲ್ಲಿ ಸರಕಾರ ಮಾಡುತ್ತಿರುವ ಹಸ್ತಕ್ಷೇಪವು ಸಂವಿಧಾನ ವಿರೋಧಿಯಾಗಿದೆ. ಮಾತ್ರವಲ್ಲದೇ, ಅಲ್ಪ ಸಂಖ್ಯಾತ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್ 1987ರಲ್ಲೇ ಆದೇಶ ನೀಡಿತ್ತು ಎಂಬುದು ಗಮನಾರ್ಹವಾಗಿದೆ. ಆದರೂ ಬಿಜೆಪಿ ಸರಕಾರವು ಇದಕ್ಕೆ ಕಾನೂನಿನ ಮಾನ್ಯತೆ ನೀಡಲು ತಿದ್ದುಪಡಿಯನ್ನು ತಂದಿದೆ ಎಂಬುದು ಸ್ಪಷ್ಟವಾಗಿದೆ.

ಅಲ್ಪಸಂಖ್ಯಾತರ ವಿರೋಧಿ ನಿಲುವು ಹೊಂದಿರುವ ಬಿಜೆಪಿ ಸರಕಾರವು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಯೋಜನೆ, ಅನುದಾನಗಳನ್ನು ನಿರಂತರವಾಗಿ ಕಡಿತಗೊಳಿಸುತ್ತಾ ತಾರತಮ್ಯ ಎಸಗುತ್ತಿರುವುದು ಖಂಡನಾರ್ಹವಾಗಿದೆ. ಈ ಮಧ್ಯೆ ಸಿಡಿ ಪ್ರಕರಣದ ಗದ್ದಲದ ನಡುವೆ ಯಾವುದೇ ಚರ್ಚೆಗಳಿಲ್ಲದೆ  ವಿಧೇಯಕಕ್ಕೆ ಅನುಮೋದನೆ ದೊರಕಿರುವುದು ವಿರೋಧ ಪಕ್ಷಗಳ ವೈಫಲ್ಯವನ್ನು ಬೊಟ್ಟು ಮಾಡುತ್ತದೆ. ಹಲವು ಸಮಯಗಳಿಂದ ಈ ವಿಚಾರ ಚರ್ಚೆಯಲ್ಲಿತ್ತಾದರೂ ತಥಾತಥಿತ ಜಾತ್ಯತೀತ ಪಕ್ಷಗಳು ಇದಕ್ಕೆ ಮಹತ್ವ ನೀಡದಿರುವುದು ಅಲ್ಪಸಂಖ್ಯಾತರ ಪರವಾದ ಅವರ ನಿರ್ಲಕ್ಷ್ಯ ಭಾವವನ್ನು ಸ್ಟಷ್ಟಪಡಿಸುತ್ತದೆ. ಜಾತ್ಯತೀತ ಪಕ್ಷಗಳ ಪ್ರಾಬಲ್ಯವಿದ್ದರೂ, ಬಿಜೆಪಿ ಸರಕಾರವು ಹಿಂಬಾಗಿಲ ಮೂಲಕ ಮೇಲ್ಮನೆಯಲ್ಲಿ ರೈತವಿರೋಧಿ, ಜನವಿರೋಧಿ ಗೋ ಹತ್ಯೆ ಮಸೂದೆ ಅಂಗೀಕರಿಸಲು ಇತ್ತೀಚಿಗೆ ಸಫಲವಾಗಿತ್ತು. ಒಂದು ವೇಳೆ ಈ ಪಕ್ಷಗಳು ಈ ಬಾರಿಯೂ ಎಡವಿದರೆ ಅವು ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸವನ್ನು ಖಂಡಿತಾ ಕಳೆದುಕೊಳ್ಳಲಿವೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಪರವಾದ ತಮ್ಮ ಬದ್ಧತೆಯನ್ನು ಖಾತರಿಪಡಿಸಲು ವಿಪಕ್ಷಗಳು ಒಗ್ಗಟ್ಟಾಗಿ ಈ ವಿಧೇಯಕವನ್ನು ವಿಫಲಗೊಳಿಸಬೇಕೆಂದು ಯಾಸಿರ್ ಹಸನ್ ಕರೆ ನೀಡಿದ್ದಾರೆ.

Join Whatsapp