ಹೊಸದಿಲ್ಲಿ : ದೇಶಾದ್ಯಂತ ಇಂದು ಮತ್ತೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು ಆ ಮೂಲಕ ಕಳೆದ 11 ದಿನಗಳಲ್ಲಿ 9ನೇ ಬಾರಿ ಇಂಧನ ದರ ಏರಿಕೆಯಾದಂತಾಗಿದೆ. ಜಾಗತಿಕ ಕಚ್ಚಾ ತೈಲ ದರ ಏರಿಕೆಯ ನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಸತತ ಎರಡನೇ ದಿನ ಶುಕ್ರವಾರದಂದು ಏರಿಕೆ ಕಂಡಿದೆ.
ಭಾರತೀಯ ತೈಲ ನಿಗಮದ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು 35 ಪೈಸೆ ಏರಿಕೆಯಾಗಿ ಕ್ರಮವಾಗಿ ರೂ. 105.14 ಮತ್ತು ರೂ. 93.87 ಕ್ಕೆ ತಲುಪಿದೆ. ಗುರುವಾರ 35 ಪೈಸೆ ಹೆಚ್ಚಿಸಲಾಗಿತ್ತು.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 34 ಪೈಸೆ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ ರೂ. 111.09 ಆಗಿದೆ. ಡೀಸೆಲ್ ದರ 38 ಪೈಸೆ ಏರಿಕೆಯಾಗಿ ರೂ. 101.78 ಕ್ಕೆ ತಲುಪಿದೆ. ನಾಲ್ಕು ಮೆಟ್ರೋ ನಗರಗಳಲ್ಲಿ ಪೈಕಿ ಮುಂಬೈನಲ್ಲಿ ಇಂಧನ ದರಗಳು ಅತ್ಯಧಿಕವಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರ ಹೇಳಿದೆ.