ಮಾಂಸಾಹಾರ ಜಾಹೀರಾತು ನಿಷೇಧಿಸುವಂತೆ ಕೋರಿದ್ದ ಅರ್ಜಿ: ಬಾಂಬೆ ಹೈಕೋರ್ಟ್‌ ಗರಂ

ಮುಂಬೈ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸಾಹಾರ ಮತ್ತು ಮಾಂಸ ಉತ್ಪನ್ನಗಳ ಜಾಹೀರಾತುಗಳ ಮೇಲೆ ನಿರ್ಬಂಧ ಇಲ್ಲವೇ ನಿಷೇಧ ಹೇರುವಂತೆ ಕೋರಿ ಜೈನ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ಕುರಿತಂತೆ ಬಾಂಬೆ ಹೈಕೋರ್ಟ್‌ ಕಿಡಿ ಕಾರಿದೆ.

ಮನವಿ ಬೇರೆಯವರ ಹಕ್ಕುಗಳನ್ನು ಕಿತ್ತುಕೊಳ್ಳುವಂತಿದ್ದು ಜನ ಅಂತಹ ಜಾಹೀರಾತುಗಳನ್ನು ನೋಡದೆ ಟಿವಿ ಆಫ್‌ ಮಾಡಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮಾಧವ್ ಜಾಮ್‌ದಾರ್ ಅವರಿದ್ದ ಪೀಠ ತಿಳಿಸಿತು.

- Advertisement -

ಅರ್ಜಿದಾರರಿಗೆ ನ್ಯಾಯಾಲಯವು, ನೀವು ನಿಷೇಧ ಹೇರಲಿಕ್ಕೆ ಹೈಕೋರ್ಟ್‌ ಕಾನೂನು ಮತ್ತು ನಿಯಮಾವಳಿ ರೂಪಿಸಬೇಕೆಂದು ಕೇಳುತ್ತಿದ್ದೀರಿ. ಇದು ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆಯೇ ನೀವೇ ಹೇಳಿ? ಇಂತಹದ್ದನ್ನೆಲ್ಲಾ ನಿರ್ಧರಿಸುವುದು ಶಾಸಕಾಂಗ ಎಂದು ಹೇಳಿತು.

ಮುಂದುವರೆದು, “ಸಂವಿಧಾನದ 19ನೇ ವಿಧಿಯ ಉಲ್ಲಂಘನೆ ಎಂದರೇನು? ನೀವು ಇತರರ ಹಕ್ಕುಗಳನ್ನು ಏಕೆ ಅತಿಕ್ರಮಿಸುತ್ತಿದ್ದೀರಿ? ಇದನ್ನು ಎರಡು ರೀತಿ ನೋಡಬಹುದು. ಸಾಮಾನ್ಯ ಜನ ಇದಕ್ಕೆ (ನಿಮಗೆ ಜಾಹಿರಾತುಗಳು ಇಷ್ಟವಿಲ್ಲದೆ ಹೋದರೆ) ಟಿವಿ ಆಫ್ ಮಾಡಿ ಎಂದು ಹೇಳುತ್ತಾರೆ. ಇನ್ನು ಕಾನೂನಿನ ದೃಷ್ಟಿಯಿಂದ ನೋಡುವುದಾದರೆ ನೀವು ಕೇಳುತ್ತಿರುವುದೇನಿದೆ ಅದಕ್ಕೆ ಕಾನೂನಿನ ಬಲ ಬೇಕು. ಅದರೆ, ಅಂತಹ ಯಾವುದೇ ಕಾನೂನು ಇಲ್ಲದೆ ಇರುವುದರಿಂದ ನೀವು ನಮಗೆ ಕಾನೂನು ಮಾಡುವಂತೆ ಕೇಳುತ್ತಿದ್ದೀರಿ,” ಎಂದು ಪೀಠ ಅಸಮಧಾನ ಸೂಚಿಸಿತು.

ಪ್ರಕರಣಕ್ಕೆ ಸಂಬಂಧಿಸಿದ ಕೆಲ ಆದೇಶಗಳನ್ನು ಅರ್ಜಿಯೊಂದಿಗೆ ಸಲ್ಲಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿ ತಿದ್ದುಪಡಿಗೆ ಅವಕಾಶ ಕೋರಿದರು. ಆಗ ಅರ್ಜಿ ಹಿಂಪಡೆಯಲು ಅವಕಾಶ ನೀಡಿದ ನ್ಯಾಯಾಲಯ ಅರ್ಜಿದಾರರು ಹೊಸದಾಗಿ ಮನವಿ ಸಲ್ಲಿಸಲು ಸ್ವತಂತ್ರರು ಎಂದಿತು.

(ಕೃಪೆ:ಬಾರ್ ಆ್ಯಂಡ್ ಬೆಂಚ್)

- Advertisement -