ಈಶ್ವರಪ್ಪರನ್ನು ವಜಾಗೊಳಿಸುವವರೆಗೂ ನಿರಂತರ ಹೋರಾಟ: ಅಬ್ದುಲ್ ಮಜೀದ್ ಮೈಸೂರು

Prasthutha|

➤ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

- Advertisement -

➤ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ, ಸಿಎಂ ನಿವಾಸಕ್ಕೆ ಮುತ್ತಿಗೆಯ ಎಚ್ಚರಿಕೆ

ಬೆಂಗಳೂರು: ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದರಿಂದ ಅವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಡೀ ಪ್ರಕರಣದ ತನಿಖೆಯನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಒತ್ತಾಯಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಉಡಾಫೆ ಮಾತನಾಡುತ್ತಾ ರಾಜೀನಾಮೆಗೆ ನಿರಾಕರಿಸಿದ್ದಾರೆ. ಸಂತೋಷ್ ಕುಮಾರ್ ಅವರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಳೆದ ನಾಲ್ಕೈದು ತಿಂಗಳಿಂದ ಅವರು ಪಕ್ಷದ ಮುಖಂಡರು, ಕೇಂದ್ರ ಸಚಿವರು, ಮಾಧ್ಯಮ ಮಿತ್ರರನ್ನು ಭೇಟಿಯಾಗಿ ತಮ್ಮ ನೋವು ತೋಡಿಕೊಂಡಿದ್ದರು. ಆದರೆ ಯಾರು ಕೂಡ ಅವರ ನೆರವಿಗೆ ಬಾರಲಿಲ್ಲ. ಕನಿಷ್ಠ ಅವರನ್ನು ಕರೆದು ಮಾತನಾಡಿಸುವ ಸೌಜನ್ಯವನ್ನು ಪ್ರಧಾನಿ ಮೋದಿ ಸಹಿತ ಯಾರು ಕೂಡ ಮಾಡಲಿಲ್ಲ ಎಂದು ಆರೋಪಿಸಿದರು.

ಮುಸಲ್ಮಾನರ ವಿಚಾರ ಬಂದಾಗ ಹಾದಿ ಬೀದಿಯಲ್ಲಿ ರಂಪಾಟ ಮಾಡುವ, ಬೀದಿಗಿಳಿಯುವ ಸಂಘಪರಿವಾರ ತನ್ನದೇ ಕಾರ್ಯಕರ್ತನಿಗೆ ಅನ್ಯಾಯವಾದಾಗ ಮೌನಕ್ಕೆ ಶರಣಾಗಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದ ಅವರು, ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾದಾಗ ಆತನ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ ಇಡೀ ಸರ್ಕಾರ ಮತ್ತು ಸಂಘಪರಿವಾರ, ಸಂತೋಷ್ ಅವರ ನಿವಾಸಕ್ಕೆ ಏಕೆ ಭೇಟಿ ನೀಡಿಲ್ಲ, ಸಂತ್ರಸ್ತ ಕುಟುಂಬಕ್ಕೆ ಏಕೆ ಸಾಂತ್ವನ ಹೇಳಿಲ್ಲ? ಇದು ನಿಮ್ಮ ದ್ವಿಮುಖ ಧೋರಣೆ, ದಗಲ್ಬಾಜಿ, ಸುಳ್ಳು ಹಿಂದುತ್ವ ಎಂಬುದು ಸಾಬೀತಾಗಿದೆ. ನೀವು ರಾಜ್ಯದ ಜನರ ಮುಂದೆ ಬೆತ್ತಲೆಯಾಗಿದ್ದೀರಿ ಎಂದು ಅವರು ಟೀಕಿಸಿದರು.

ತಕ್ಷಣ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು, ಸಂತೋಷ್ ಅವರು ಮಾಡಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ಇಂಜಿನಿಯರ್ ಒಬ್ಬರನ್ನು ನೇಮಿಸಿ ಅವರು ಮಾಡಿರುವ ಕಾಮಗಾರಿಗಳ ಬಿಲ್ ಸಿದ್ಧ ಪಡಿಸಿ ಹಣ ಬಿಡುಗಡೆ ಮಾಡಬೇಕು ಎಂದು ಅಬ್ದುಲ್ ಮಜೀದ್ ಆಗ್ರಹಿಸಿದರು.

ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವವರೆಗೆ ಎಸ್ ಡಿಪಿಐ ರಾಜ್ಯಾದ್ಯಂತ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಸಚಿವರು, ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು ಮತ್ತು ಕಪ್ಪುಬಾವುಟ ಪ್ರದರ್ಶಿಸಲಾಗುವುದು. ಮುಖ್ಯಮಂತ್ರಿಯ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಬ್ದುಲ್ ಮಜೀದ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮುಜಾಹಿದ್ ಪಾಶಾ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಉಪಸ್ಥಿತರಿದ್ದರು.



Join Whatsapp