►► ‘ಜನನಾಂಗಕ್ಕೆ ಕರಿಮೆಣಸಿನ ಸ್ಪ್ರೇ ಮಾಡಿ, ಧರ್ಮನಿಂದನೆ ಮಾಡಿದರು’
ತಿರುವನಂತಪುರಂ : ಕೇರಳವನ್ನು ಬಹುತೇಕರು ಪ್ರಗತಿಪರ ರಾಜ್ಯವೆಂದೇ ಬಣ್ಣಿಸುತ್ತಾರೆ. ಆದರೆ ಇಲ್ಲಿಯೂ ಮುಸ್ಲಿಮರು, ದಲಿತರ ಪಾಲಿಗೆ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ಬೇಲಿಯೇ ಹೊಲ ಮೇಯಿತು ಎಂಬ ಮಾತಿನಂತೆ, ರಕ್ಷಿಸಬೇಕಾದ ಪೊಲೀಸರೇ ಮುಸ್ಲಿಮ್ ಯುವಕರ ಮೇಲೆ ಕಸ್ಟಡಿ ಹಿಂಸಾಚಾರ ನೀಡಿದ್ದಲ್ಲದೆ, ಮುಸ್ಲಿಂ ನಿಂದನೆ ಮತ್ತು ಅವರ ವಿರುದ್ಧವೇ ಪ್ರಕರಣ ದಾಖಲಿಸಿದ ಬಗ್ಗೆ ವರದಿಯಾಗಿದೆ.
ಪಾಲಕ್ಕಾಡ್ ಕ್ಯಾಂಪಸ್ ಫ್ರಂಟ್ ವಲಯ ಮುಖಂಡರಾದ ಬಿಲಾಲ್ ಅವರ ಸಹೋದರ 18 ವರ್ಷದ ಅಬ್ದುರಹ್ಮಾನ್ ಮೇಲೆ ಪೊಲೀಸರು ಠಾಣೆಯೊಳಗೆ ಭೀಕರ ಹಿಂಸಾಚಾರ ಮಾಡಿದ ಬಗ್ಗೆ ಕೇರಳ ಮುಖ್ಯಮಂತ್ರಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಲಾಗಿದೆ. ಪಾಲಕ್ಕಾಡ್ ಉತ್ತರ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸಿದುದಲ್ಲದೆ, ಜನನಾಂಗಕ್ಕೆ ಕರಿಮೆಣಸು ಸ್ಪ್ರೇ ಮಾಡಿದ ಘಟನೆ ನಡೆದಿದೆ. ಅಲ್ಲದೆ, ಮುಸ್ಲಿಂ ನಿಂದನೆಯನ್ನು ಎದುರಿಸಬೇಕಾದ ಸಂದರ್ಭವೂ ಸೃಷ್ಟಿಯಾಗಿತ್ತು ಎಂದು ಅಬ್ದುರಹ್ಮಾನ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
“ಪಾಲಕ್ಕಾಡ್ ನಗರ ಉತ್ತರ ಪೊಲೀಸ್ ಠಾಣೆಯ ಎಸ್ ಐ ಸುಧೀಶ್ ಕುಮಾರ್ ಮತ್ತು ಅವರ ಸಹೋದ್ಯೋಗಿಗಳು ನನ್ನ ಮರ್ಮಾಂಗಕ್ಕೆ ಕರಿಮೆಣಸು ಸ್ಪ್ರೇ ಮಾಡಿದ್ದರು ಮತ್ತು ನೀನಿನ್ನು ಯಾವತ್ತೂ ಮುಸ್ಲಿಮರನ್ನು ಹುಟ್ಟಿಸಬಾರದು ಎಂದು ಬೊಬ್ಬೆ ಹಾಕಿದ್ದರು’’ ಎಂದು ಅಬ್ದುರಹ್ಮಾನ್ ಹೇಳಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಕಲ್ಲಾಡಿಕೋಡ್ ಎಂಬಲ್ಲಿನ ನಿವಾಸಿ ಅಬ್ದುರಹ್ಮಾನ್ ಮನೆಗೆ ಆ.24ರಂದು ಇಬ್ಬರು ಪೊಲೀಸ್ ಅಧಿಕಾರಿಗಳು ಬಂದಿದ್ದರು. ಅಬ್ದುರಹ್ಮಾನ್ ನ ಅಣ್ಣ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮುಖಂಡ ಬಿಲಾಲ್ ಅನ್ನು ಕೇಳಿಕೊಂಡು ಅವರು ಬಂದಿದ್ದರು. 20ರ ಹರೆಯದ ಬಿಲಾಲ್ ಪಾಲಕ್ಕಾಡ್ ನ ಕಾವಿಲ್ ಪಾಡ್ ನ ಕೊಲೆಯತ್ನ ಪ್ರಕರಣದ ಶಂಕಿತ ಎಂದು ಪೊಲೀಸರು ತಿಳಿಸಿದ್ದರು. ಬಿಲಾಲ್ ಗೆ ಜ್ವರವಿದೆ ಎಂದು ಅವರ ಕುಟುಂಬ ತಿಳಿಸಿದಾಗ, ಪೊಲೀಸರು ಅವರನ್ನು ನಿಂದಿಸಿದುದಲ್ಲದೆ, ಬಿಲಾಲ್ ಮತ್ತು ಅಬ್ದುರಹ್ಮಾನ್ ಇಬ್ಬರನ್ನೂ ಕರೆದೊಯ್ದಿದ್ದರು.
“ನಾನು ಆರೆಸ್ಟ್ ವಾರಂಟ್ ತೋರಿಸಿ ಎಂದೆ, ಆಗ ಅವರು ನನ್ನನ್ನು ತಳ್ಳಿದರು. ನನ್ನ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆಯುವ ಮೊದಲು ಅವರು ನನ್ನ ಮಗಳನ್ನೂ ನಿಂದಿಸಿದರು’’ ಎಂದು ಬಿಲಾಲ್ ಮತ್ತು ಅಬ್ದು ಅವರ ತಂದೆ ಅಬ್ದುಲ್ ಹಕೀಂ ಹೇಳಿದ್ದಾರೆ.
ಬಿಲಾಲ್ ಮತ್ತು ರಹ್ಮಾನ್ ರನ್ನು ಮೊದಲು ಕಲ್ಲಾಡಿಕೋಡ್ ಸ್ಟೇಶನ್ ಗೆ ಕರೆದೊಯ್ಯಲಾಗಿತ್ತು. ಬಳಿಕ ಅಲ್ಲಿಂದ ಪಾಲಕ್ಕಾಡ್ ಉತ್ತರ ಠಾಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿ, ಪಾಲಕ್ಕಾಡ್ ನ ಕಾವಿಲ್ ಪಾಡ್ ನಲ್ಲಿ ಸಾಮಾಜಿಕ ಜಾಲತಾಣ ಪೋಸ್ಟ್ ಗೆ ಸಂಬಂಧಿಸಿ ಆರೆಸ್ಸೆಸ್ ಕಾರ್ಯಕರ್ತರೊಂದಿಗೆ ನಡೆದಿದ್ದ ಘರ್ಷಣೆಯ ಬಗ್ಗೆ ಪ್ರಶ್ನಿಸಲಾಯಿತು. ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಗೆ ಸಂಬಂಧಿಸಿದ ಸಾಮಾಜಿಕ ಜಾಲ ತಾಣ ಪೋಸ್ಟ್ ಕುರಿತಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ವಿಷಯವಾಗಿ ವಿಚಾರಣೆ ನಡೆಯುವಾಗ ತಮ್ಮ ಮೇಲೆ ಭೀಕರ ಪೊಲೀಸ್ ಹಿಂಸಾಚಾರ ನಡೆದಿದೆ ಎಂದು ಅವರು ಆಪಾದಿಸಿದ್ದಾರೆ.
ನೀವು ಆರೆಸ್ಸೆಸ್ ವಿರುದ್ಧ ಯಾಕೆ ಪ್ರತಿರೋಧ ವ್ಯಕ್ತಪಡಿಸುತ್ತೀರಿ ಎಂದು ಪೊಲೀಸ್ ಠಾಣೆಯೊಳಗೆ ಹಿಂಸಾತ್ಮಕವಾಗಿ ಥಳಿಸುತ್ತಾ ಪ್ರಶ್ನಿಸಲಾಯಿತು. “ಸಬ್ ಇನ್ಸ್ ಪೆಕ್ಟರ್ ಟಿ. ಸುಧೀಶ್ ಕುಮಾರ್ ನನ್ನ ತೊಡೆಗಳ ಮೇಲೆ ಬೂಟ್ ಗಳನ್ನು ಧರಿಸಿಯೇ ನಿಂತಿದ್ದರು ಮತ್ತು ನನ್ನ ಕಾಲುಗಳಿಗೆ ಹೊಡೆಯುವಂತೆ ಉಳಿದ ಪೊಲೀಸರಿಗೆ ನಿರ್ದೇಶಿಸಿದ್ದರು” ಎಂದು ಅಬ್ದುರಹ್ಮಾನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ತನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಎಸ್ ಐ ಹೇಳಿದ್ದರು. ಅದರಂತೆಯೇ, ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಮತ್ತು ಧಾರ್ಮಿಕ ದ್ವೇಷ ಹರಡಿದ ಬಗ್ಗೆ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಸದಸ್ಯರ ವಿರುದ್ಧ ಪೊಲೀಸರ ಹಿಂಸಾಚಾರವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ. ಅಲ್ಲದೆ, ಎಸ್ ಐ ಸುಧೀಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಯುವಕರ ಮೇಲಿನ ಹಿಂಸಾಚಾರವು, ಪೊಲೀಸ್ ಠಾಣೆಗಳು ಆರೆಸ್ಸೆಸ್ ತಾಣವಾಗುತ್ತಿರುವುದಕ್ಕೆ ಹೊಸ ಉದಾಹರಣೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಜ್ಯ ನಾಯಕ ಇ.ಎಸ್. ಕಾಜ ಹುಸೇನ್ ಹೇಳಿದ್ದಾರೆ.